ಉತ್ತರಾಖಂಡದ ಸರ್ಕಾರಿ ಶಾಲೆಯ ಸಮೀಪ 161 ಜಿಲೆಟಿನ್ ಕಡ್ಡಿಗಳ ಪತ್ತೆ: ಹೈ ಅಲರ್ಟ್
ಜಿಲೆಟಿನ್ ಕಡ್ಡಿಗಳನ್ನು ಸಾಮಾನ್ಯವಾಗಿ ರಸ್ತೆ ನಿರ್ಮಾಣ ಮತ್ತು ಬಂಡೆಗಳನ್ನು ಒಡೆಯಲು ಬಳಸಲಾಗುತ್ತದೆ. ಆದರೆ, ಶಾಲೆಯ ಸಮೀಪ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇವು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಸಮೀಪ ಬರೋಬ್ಬರಿ 161 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದೆ.
ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದ ಆತಂಕದ ನಡುವೆಯೇ, ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಸಮೀಪ ಬರೋಬ್ಬರಿ 161 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ಭಾರಿ ಆತಂಕ ಸೃಷ್ಟಿಸಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಗುರುವಾರ ಸಂಜೆ ಅಲ್ಮೋರಾದ ದಾಬ್ರಾ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ, ಪೊದೆಯಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡುಬಂದಿವೆ. ಕೂಡಲೇ ಶಾಲೆಯ ಮುಖ್ಯೋಪಾಧ್ಯಾಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ (BDS) ಪರಿಶೀಲನೆ ನಡೆಸಿದಾಗ, ಆ ಸ್ಫೋಟಕ ವಸ್ತುಗಳು ಜಿಲೆಟಿನ್ ಕಡ್ಡಿಗಳು ಎಂದು ದೃಢಪಟ್ಟಿದೆ.
ಪೊಲೀಸರ ಕಾರ್ಯಾಚರಣೆ:
ಅಲ್ಮೋರಾ ಎಸ್‌ಎಸ್‌ಪಿ ದೇವೇಂದ್ರ ಪಿಂಚಾ ಅವರ ನೇತೃತ್ವದಲ್ಲಿ ಪೊಲೀಸರು ತಕ್ಷಣವೇ ಪ್ರದೇಶವನ್ನು ಸುತ್ತುವರೆದು ತಪಾಸಣೆ ನಡೆಸಿದ್ದಾರೆ. "161 ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಭಾರತೀಯ ಸ್ಫೋಟಕ ಕಾಯ್ದೆಯಡಿ ಅಜ್ಞಾತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಯ ಹಿಂದಿನ ಕಾರಣ ಪತ್ತೆಹಚ್ಚಲು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ," ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.
ಜಿಲೆಟಿನ್ ಕಡ್ಡಿಗಳನ್ನು ಸಾಮಾನ್ಯವಾಗಿ ರಸ್ತೆ ನಿರ್ಮಾಣ ಮತ್ತು ಬಂಡೆಗಳನ್ನು ಒಡೆಯಲು ಬಳಸಲಾಗುತ್ತದೆ. ಆದರೆ, ಶಾಲೆಯ ಸಮೀಪ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇವು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸ್ಫೋಟಕಗಳನ್ನು ಯಾರು ಮತ್ತು ಯಾವ ಉದ್ದೇಶಕ್ಕಾಗಿ ಅಲ್ಲಿ ಇಟ್ಟಿದ್ದರು ಎಂಬುದು ಇನ್ನೂ ನಿಗೂಢವಾಗಿದೆ.
ಹೈ ಅಲರ್ಟ್ ಘೋಷಣೆ:
ಇತ್ತೀಚೆಗೆ ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದಲ್ಲಿ ಕಾಶ್ಮೀರಿ ವೈದ್ಯನೊಬ್ಬ ಭಾಗಿಯಾಗಿದ್ದ ಘಟನೆ ಮತ್ತು ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದ ಬಳಿ 2,900 ಕೆ.ಜಿ. ಸ್ಫೋಟಕ ಪತ್ತೆಯಾದ ಹಿನ್ನೆಲೆಯಲ್ಲಿ, ದೇಶಾದ್ಯಂತ ಭದ್ರತಾ ಏಜೆನ್ಸಿಗಳು ಹೈ ಅಲರ್ಟ್‌ನಲ್ಲಿವೆ. ಈ ಸರಣಿ ಘಟನೆಗಳ ಹಿನ್ನೆಲೆಯಲ್ಲಿ, ಅಲ್ಮೋರಾದಲ್ಲಿ ಜಿಲೆಟಿನ್ ಪತ್ತೆಯಾಗಿರುವುದು ಆತಂಕವನ್ನು ಹೆಚ್ಚಿಸಿದೆ. ಜನರು ವದಂತಿಗಳಿಗೆ ಕಿವಿಗೊಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.