New Year Celebrations | ಅಯೋಧ್ಯೆಗೆ ಪ್ರವಾಸಿಗರ ಲಗ್ಗೆ: ಹೋಟೆಲ್‌, ಲಾಡ್ಜ್‌ಗಳು ಭರ್ತಿ

ಹೊಸ ವರ್ಷದಂದು ಅಯೋಧ್ಯೆಗೆ ಭೇಟಿ ನೀಡಲು ಪ್ರವಾಸಿಗರು ಸಜ್ಜಾಗಿದ್ದಾರೆ. ಈಗಾಗಲೇ ಅಯೋಧ್ಯೆ ರಾಮಮಂದಿರದ ಆಸುಪಾಸು, ಅಕ್ಕಪಕ್ಕದ ಜಿಲ್ಲೆಗಳಲ್ಲಿ ಭಕ್ತರು ಮತ್ತು ಪ್ರವಾಸಿಗರಿಂದ ಹೋಟೆಲ್‌, ವಸತಿ ಗೃಹಗಳು ಭರ್ತಿಯಾಗಿವೆ.

Update: 2024-12-28 10:04 GMT
ಅಯೋಧ್ಯೆಯ ರಾಮಮಂದಿರ

ಹೊಸ ವರ್ಷಾರಂಭ ಸ್ವಾಗತಕ್ಕೆ ದಿನಗಣನೆ ಆರಂಭವಾಗಿದೆ. ಹೊಸ ನಿರ್ಣಯ, ಹೊಸ ಕೆಲಸ ಸೇರಿದಂತೆ ಹಲವು ಹೊಸತನಗಳಿಗೆ ಹೊಸ ವರ್ಷದ ಆರಂಭ ಸಾಕ್ಷಿಯಾಗಲಿದೆ. ಕೆಲವರು ದೇವಸ್ಥಾನ, ಪ್ರವಾಸಿ ತಾಣಗಳ ಭೇಟಿಗೆ ಯೋಜಿಸಿದರೆ, ಮತ್ತೆ ಕೆಲವರು ಪಬ್‌, ಬಾರ್‌ಗಳಲ್ಲಿ ಪಾರ್ಟಿಗಳಿಗೆ ತಯಾರಿ ನಡೆಸಿದ್ದಾರೆ. ಜನರ ಅಭಿರುಚಿಗೆ ತಕ್ಕಂತಹ ಸಿದ್ಧತೆಗಳು ಜೋರಾಗಿ ನಡೆದಿವೆ. 

ಹೊಸ ವರ್ಷದಂದು ಅಯೋಧ್ಯೆಗೆ ಭೇಟಿ ನೀಡಲು ಪ್ರವಾಸಿಗರು ಸಜ್ಜಾಗಿದ್ದಾರೆ. ಈಗಾಗಲೇ ಅಯೋಧ್ಯೆ ರಾಮಮಂದಿರದ ಆಸುಪಾಸು, ಅಕ್ಕಪಕ್ಕದ ಜಿಲ್ಲೆಗಳಲ್ಲಿ ಭಕ್ತರು ಮತ್ತು ಪ್ರವಾಸಿಗರಿಂದ ಹೋಟೆಲ್‌, ವಸತಿ ಗೃಹಗಳು ಭರ್ತಿಯಾಗಿವೆ.

ಅಯೋಧ್ಯೆ , ಫೈಜಾಬಾದ್ ಸೇರಿದಂತೆ ಬಹುತೇಕ ಎಲ್ಲಾ ಕಡೆ ವಸತಿ ಗೃಹಗಳನ್ನು ಕಾಯ್ದಿರಿಸಲಾಗಿದೆ. ಭಕ್ತರು ಹಾಗೂ ಪ್ರವಾಸಿಗರ ದಟ್ಟಣೆ ಸಾಧ್ಯತೆ ಹಿನ್ನೆಲೆಯಲ್ಲಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕೂಡ ಭಕ್ತರಿಗೆ 'ದರ್ಶನ' ಸಮಯವನ್ನು ವಿಸ್ತರಿಸಿದೆ. ಆದರೆ, ಎಷ್ಟು ಸಮಯದವರೆಗೆ ದರ್ಶನ ವ್ಯವಸ್ಥೆ ವಿಸ್ತರಿಸಿದೆ ಎಂದು ತಿಳಿಸಿಲ್ಲ.

ಹೊಸ ವರ್ಷದಂದು ಅಯೋಧ್ಯೆಗೆ ಬರುವ ಭಕ್ತರು ಹಾಗೂ ಪ್ರವಾಸಿಗರನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಬಹುತೇಕರು ಜನವರಿ 15ಕ್ಕೂ ಮುಂಚಿತವಾಗಿಯೇ ಕೊಠಡಿಗಳನ್ನು ಮುಂಗಡ ಕಾಯ್ದಿರಿಸಿದ್ದಾರೆ ಎಂದು ಅಯೋಧ್ಯೆಯ ಸ್ಥಳೀಯ ಹೋಟೆಲ್ ಮಾಲೀಕ ಅಂಕಿತ್ ಮಿಶ್ರಾ ಹೇಳಿದ್ದಾರೆ.

ಆನ್‌ಲೈನ್‌ ಬುಕಿಂಗ್ ತಾಣಗಳ ಮೂಲಕ ಹೋಟೆಲ್ ಮತ್ತು ಲಾಡ್ಜ್‌ಗಳಲ್ಲಿ ಕೊಠಡಿ ಬುಕ್ಕಿಂಗ್‌ ಮಾಡಿದ್ದಾರೆ. ಖಾಲಿ ಉಳಿದ ಸೀಮಿತ ಕೊಠಡಿಗಳಿಗೆ ಈಗ ಬೇಡಿಕೆ ಹೆಚ್ಚಿದೆ. ಒಂದು ರಾತ್ರಿಗೆ 10 ಸಾವಿರ ರೂ. ಶುಲ್ಕವಿದೆ. ಸಾಮಾನ್ಯವಾಗಿ ಹಿಂದೂಗಳ ಹೊಸ ವರ್ಷ ಎಂದು ಪರಿಗಣಿಸುವ ಚೈತ್ರ ಮಾಸ(ಮಾರ್ಚ್-ಏಪ್ರಿಲ್)ದಲ್ಲಿ ಅಯೋಧ್ಯೆಗೆ ಹೆಚ್ಚು ಭಕ್ತರು ಭೇಟಿ ನೀಡುತ್ತಿದ್ದರು. ಆದರೆ, ಈ ಬಾರಿ ಇಂಗ್ಲಿಷ್ ಹೊಸ ವರ್ಷದಂದೇ ಭಕ್ತರ ಸಂಖ್ಯೆ ಏರುತ್ತಿದೆ ಎಂದು ಹೇಳಿದ್ದಾರೆ.

ಅಯೋಧ್ಯೆಯ ಸ್ಥಳೀಯ ಅರ್ಚಕ ರಮಾಕಾಂತ್ ತಿವಾರಿ ಮಾತನಾಡಿ, ವರ್ಷಾರಂಭದಲ್ಲಿ ರಾಮ್ ಲಲ್ಲಾ ಆಶೀರ್ವಾದ ಪಡೆಯಲು ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಬೇರೆ ಬೇರೆ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಹೇಳಿದ್ದಾರೆ.

ಅಯೋಧ್ಯೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಜನಸಂದಣಿ ನಿರ್ವಹಣೆ ಮತ್ತು ಭದ್ರತೆಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದೇವೆ. ರಾಮ ಮಂದಿರ, ಹನುಮಾನ್‌ಗುಢಿ, ಲತಾ ಚೌಕ್, ಗುಪ್ತಾರ್ ಘಾಟ್, ಸೂರಜ್ಕುಂಡ್ ಮತ್ತು ಇತರ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್‌ ಮಾಡಿದ್ದೇವೆ. ಡಿ.30 ಮತ್ತು ಜನವರಿಯ ಮೊದಲ ಎರಡು ವಾರಗಳವರೆಗೆ ಭಕ್ತರ ಪ್ರವಾಹ ನಿಭಾಯಿಸಲು ದೇವಾಲಯದ ಟ್ರಸ್ಟ್ ಕೂಡ ಸಿದ್ಧತೆ ಮಾಡಿಕೊಂಡಿದೆ ಎಂದು ಅಯೋಧ್ಯೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜ್ಕರನ್ ನಯ್ಯರ್ ವಿವರಿಸಿದ್ದಾರೆ.

ಉತ್ತರಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, 2022 ರಲ್ಲಿ 32.18 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು. ಈಗ 2024 ರ ಮೊದಲ ಆರು ತಿಂಗಳಲ್ಲೇ 32.98 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂಬುದು ತಿಳಿದುಬಂದಿದೆ.

Tags:    

Similar News