Manmohan Singh | ಆರ್ಥಿಕ ಉದಾರೀಕರಣ, ನರೇಗಾ, ಆಧಾರ್‌ನ ಪಿತಾಮಹ ಮನಮೋಹನ್ ಸಿಂಗ್
Manmohan Singh obituary: ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರ ಜೀವನದಲ್ಲಿ ಒಂದು ನಿರ್ಣಾಯಕ ಅಧ್ಯಾಯವಾಗಿತ್ತು, ಅವರು ಗಮನಾರ್ಹ ಸಂಕಲ್ಪ ಮತ್ತು ಬುದ್ಧಿವಂತಿಕೆಯಿಂದ ಹೆಚ್ಚಿನ ಒಳಿತಿಗಾಗಿ ಕಠಿಣ ಮಾರ್ಗ ಅನುಸರಿಸಿಕೊಳ್ಳುವುದಕ್ಕೆ ಆರಂಭಿಸಿದ್ದರು.;
1991ರಲ್ಲಿ ಭಾರತವು ಆರ್ಥಿಕ ಕುಸಿತದ ಅಂಚಿನಲ್ಲಿತ್ತು ಹಾಗೂ ಕೇವಲ ಎರಡು ವಾರಗಳ ವಿದೇಶಿ ಮೀಸಲು ಉಳಿದಿತ್ತು. ಈ ಸಂದಿಗ್ಥ ಪರಿಸ್ಥಿತಿಯಲ್ಲಿ ಮನಮೋಹನ್ ಸಿಂಗ್ ಎಂಬ ಅರ್ಥಶಾಸ್ತ್ರಜ್ಞ ಹೊಸದಾಗಿ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದರು. ಅವರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಎದ್ದು ನಿಂತಿದ್ದರು.
ಬಜೆಟ್ ಭಾಷಣದ ಕುರಿತು ಮಾತನಾಡಿದ ಅವರು ಮುಂದಿನ ಹಾದಿಯಲ್ಲಿ ನಾವು ಎದುರಿಸಬಹುದಾದ ಅಪಾಯವನ್ನು ನಾನು ಕಡಿಮೆ ಮಾಡಬಹುದು ಎಂದು ನಾನು ಹೇಳುವುದಿಲ್ಲ. ಆದರೆ ವಿಕ್ಟರ್ ಹ್ಯೂಗೋ ಒಮ್ಮೆ ಹೇಳಿದಂತೆ, 'ಒಂದು ಕಲ್ಪನೆಗೆ ಸಮಯ ಕೂಡಿ ಬಂದಾಗ ಅದನ್ನು ತಡೆಯಲು ಈ ಜಗತ್ತಿನಲ್ಲಿ ಯಾವ ಶಕ್ತಿಗೂ ಸಾಧ್ಯವಿಲ್ಲʼ ಭಾರತವು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದು ಅಂತಹ ಒಂದು ಕಲ್ಪನೆ ಎಂದು ನಾನು ಈ ಸದನದ ಮುಂದ ಪ್ರಸ್ತುತಪಡಿಸುತ್ತೇನೆ. ಇಡೀ ಜಗತ್ತು ಅದನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ಕೇಳಲಿ. ಭಾರತ ಈಗ ಜಾಗೃತವಾಗಿದೆ. ನಾವು ಮೇಲುಗೈ ಸಾಧಿಸುತ್ತೇವೆ. ನಾವು ಜಯಿಸುತ್ತೇವೆ ಎಂದು ಹೇಳಿದ್ದರು.
ಆ ಒಂದು ಕ್ಷಣವು ಭಾರತದ ಆರ್ಥಿಕ ಉದಾರೀಕರಣದ ಉಗಮ ಎನಿಸಿತು. ಇದು ಭಾರತವನ್ನು ಆರ್ಥಿಕ ವಿನಾಶದಿಂದ ದೂರವಿರಿಸಿತು ಹಾಗೂ ಜಾಗತಿಕ ಆರ್ಥಿಕ ಶಕ್ತಿಕೇಂದ್ರವಾಗುವತ್ತ ಮುನ್ನಡೆಸಿತು. ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರ ಜೀವನದಲ್ಲಿ ಒಂದು ನಿರ್ಣಾಯಕ ಅಧ್ಯಾಯವಾಗಿತ್ತು, ಅವರು ಗಮನಾರ್ಹ ಸಂಕಲ್ಪ ಮತ್ತು ಬುದ್ಧಿವಂತಿಕೆಯಿಂದ ಹೆಚ್ಚಿನ ಒಳಿತಿಗಾಗಿ ಕಠಿಣ ಮಾರ್ಗ ಅನುಸರಿಸಿಕೊಳ್ಳುವುದಕ್ಕೆ ಆರಂಭಿಸಿದ್ದರು.
ಭಾರತದ 13ನೇ ಪ್ರಧಾನಿ
ಗುರುವಾರ ರಾತ್ರಿ ನಿಧನರಾದ 92 ವರ್ಷದ ಡಾ.ಸಿಂಗ್ ಅವರು ಅರ್ಥಶಾಸ್ತ್ರಜ್ಞ, ನೀತಿ ನಿರೂಪಕ ಮತ್ತು ದೇಶದ 13ನೇ ಪ್ರಧಾನಿಯಾಗಿ ಅಪರೂಪದ ಪರಂಪರೆಯನ್ನು ಬಿಟ್ಟಹೋಗಿದ್ದಾರೆ. ರಾಷ್ಟ್ರದ ಇತಿಹಾಸದ ನಿರ್ಣಾಯಕ ಘಟ್ಟಗಳಲ್ಲಿ ತಮ್ಮ ವಿನಯ , ಬುದ್ಧಿವಂತಿಕೆ ಮತ್ತು ಅಚಲ ಸಮರ್ಪಣೆಯೊಂದಿಗೆ ಮುನ್ನಡೆಸಿದ್ದಕ್ಕಾಗಿ ಅವರು ಸ್ಮರಣೀಯ.
ಸೆಪ್ಟೆಂಬರ್ 26, 1932 ರಂದು ಗಾಹ್ (ಈಗ ಪಾಕಿಸ್ತಾನದಲ್ಲಿದೆ) ನಲ್ಲಿ ಜನಿಸಿದ ಸಿಂಗ್ ಅವರ ಆರಂಭಿಕ ಜೀವನವು ದೇಶ ವಿಭಜನೆಯ ಆಘಾತದ ಪರಿಣಾಮವನ್ನು ಎದುರಿಸಿತ್ತು. ಈ ಸವಾಲುಗಳ ಹೊರತಾಗಿಯೂ ಅವರ ಅಸಾಧಾರಣ ಶೈಕ್ಷಣಿಕ ಪ್ರತಿಭೆಯನ್ನು ಪ್ರದರ್ಶಿಸಿದ್ದರು.
ಅವರು ಪಂಜಾಬ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ನಂತರ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಿಫಿಲ್ ಪಡೆದರು. ಅವರ ಶೈಕ್ಷಣಿಕ ಹಿನ್ನೆಲೆಯಲ್ಲಿ ಭಾರತದ ಅಭಿವೃದ್ಧಿ ಪಥದ ಮೇಲೆ ಆಳ ಪರಿಣಾಮ ಬೀರುವ ಜತೆಗೆ ಅವರ ಪ್ರಬ ವೃತ್ತಿಜೀವನಕ್ಕೆ ಅಡಿಪಾಯ ಹಾಕಿದವು.
ಪ್ರಧಾನ ಮಂತ್ರಿಯಾಗಿ ಅದ್ಭುತ ಅಧಿಕಾರಾವಧಿ
2004 ರಲ್ಲಿ, ಸಿಂಗ್ ಪ್ರಧಾನ ಮಂತ್ರಿಯ ಜವಾಬ್ದಾರಿ ವಹಿಸಿಕೊಂಡರು. ಒಂದು ದಶಕದ ಕಾಲ ಯುಪಿಎ ಸರ್ಕಾರವನ್ನು ಮುನ್ನಡೆಸಿದ್ದರು. ಅವರ ಅಧಿಕಾರಾವಧಿಯಲ್ಲಿ ಭಾರತ-ಯುಎಸ್ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್ಆರ್‌ಇಜಿಎ) ಅನುಷ್ಠಾನ ಹೆಚ್ಚು ಗಮನ ಹರಿಸಿದ್ದರು.
ಅವರ ನಾಯಕತ್ವದಲ್ಲಿ ಭಾರತವು ಅಭೂತಪೂರ್ವ ಆರ್ಥಿಕ ಬೆಳವಣಿಗೆ ಕಂಡಿತು. ಜಾಗತಿಕ ಸ್ಥಾನಮಾನದಲ್ಲಿನ ಪ್ರಗತಿ ಮತ್ತು ಸಾಮಾಜಿಕ ಕಲ್ಯಾಣ ಉಪಕ್ರಮಗಳಿಗೆ ಸಾಕ್ಷಿಯಾಯಿತು. ರಾಜಕಾರಣಿಗಳಲ್ಲಿ ಅರ್ಥಶಾಸ್ತ್ರಜ್ಞರಾಗಿ ಮತ್ತು ಅರ್ಥಶಾಸ್ತ್ರಜ್ಞರಲ್ಲಿ ರಾಜಕಾರಣಿಯಾಗಿ ಸಿಂಗ್ ಅವರ ರಾಜಕೀಯ ಸಾಮರ್ಥ್ಯ ಗಮನ ಸೆಳೆಯಿತು. ಅವರು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರಿಂದ ಪ್ರಶಂಸೆ ಪಡೆದುಕೊಂಡಿದ್ದರು. ನಿವೂ "ಉತ್ತಮ ವ್ಯಕ್ತಿ ಮತ್ತು ನಾನು ನಿಮ್ಮೊಂದಿಗೆ ವ್ಯವಹಾರ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದರು.
ಎರಡನೇ ಅವಧಿಯಲ್ಲಿ ಟೀಕೆಗಳು
ಮನಮೋಹನ್ ಸಿಂಗ್ ಅವರಿಗೆ ಟೀಕಾಕಾರರು ಇಲ್ಲದೆ ಇರಲಿಲ್ಲ. ಅವರ ತಮ್ಮ ಎರಡನೇ ಅವಧಿಯಲ್ಲಿ ಅವರ ಆಡಳಿತವು ಹಗರಣಗಳು ಮತ್ತು ಜಡ ನೀತಿಗಳು ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸಿದರು. ಇದು ಅವರ ಸರ್ಕಾರದ ವಿಶ್ವಾಸಾರ್ಹತೆಗೆ ಧಕ್ಕೆ ತಂದಿತು. ಆದರೂ, ಅವರ ವಿರೋಧಿಗಳು ಸಹ ಅವರ ಶಾಂತ ನಡವಳಿಕೆ ಮತ್ತು ರಾಷ್ಟ್ರದ ಪ್ರಗತಿಗೆ ಬದ್ಧತೆಯನ್ನು ನಿರ್ಲಕ್ಷಿಸಿರಲಿಲ್ಲ.
ಮನಮೋಹನ್ ಸಿಂಗ್ ಅವರಿಗೆ ಪತ್ನಿ ಗುರುಶರಣ್ ಕೌರ್ ಹಾಗೂ ಮೂವರು ಪುತ್ರಿಯರಿದ್ದಾರೆ. ಹಿಂಜರಿಕೆಯ ಸ್ವಭಾವಕ್ಕೆ ಹೆಸರುವಾಸಿಯಾದ ಅವರ ಅಪರೂಪದ ಸಾರ್ವಜನಿಕ ಭಾಷಣಗಳು ಚಿಂತನಶೀಲತೆ ಮತ್ತು ಪ್ರಾಮಾಣಿಕತೆಯಿಂದ ತುಂಬಿಕೊಂಡಿದ್ದವು. ಸಿಂಗ್ ಅವರ ಶಾಂತ ಶಕ್ತಿ. ವಿನಯತೆ ಮತ್ತು ದೂರದೃಷ್ಟಿ ಭಾರತೀಯ ಪ್ರಜಾಪ್ರಭುತ್ವದ ಶ್ರೇಷ್ಠತೆಯನ್ನು ಪ್ರತಿಬಿಂಬಿಸಿಸಿತ್ತು. ಟೀಕೆಗಳ ಹೊರತಾಗಿಯೂ, ಸಿಂಗ್ ವೈಯಕ್ತಿಕ ಸಮಗ್ರತೆ ಮತ್ತು ಬೌದ್ಧಿಕವಾಗಿ ಅಪಾರ ಜ್ಞಾನ ಹೊಂದಿರುವ ವ್ಯಕ್ತಿಯಾಗಿದ್ದರು.
ಅವರ ಪ್ರಮುಖ ಸಾಧನೆಗಳು
• ಆರ್ಥಿಕ ಉದಾರೀಕರಣ (1991): ಹಣಕಾಸು ಸಚಿವರಾಗಿ, ಸಿಂಗ್ ಲೈಸೆನ್ಸ್ ರಾಜ್ ಅನ್ನು ತೆಗೆದುಹಾಕಿದರು (ಪರವಾನಗಿಗಾಗಿ ಅಧಿಕಾರಿಗಳ ಮುಂದೆ ಅಲೆದಾಡುವ ಪರಿಸ್ಥಿತಿ) , ಭಾರತದ ಆರ್ಥಿಕತೆಯನ್ನು ಜಾಗತಿಕ ಮಾರುಕಟ್ಟೆಗಳಿಗೆ ತೆರೆಯಲು ಮತ್ತು ಸ್ಥಿರಗೊಳಿಸಲು ವ್ಯಾಪಕ ಸುಧಾರಣೆಗಳನ್ನು ತಂದರು, ಈ ನೀತಿಗಳು ಆರ್ಥಿಕ ಬೆಳವಣಿಗೆಯನ್ನು ಪ್ರಚೋದಿಸಿದವು ಮತ್ತು ಭಾರತವನ್ನು ಜಾಗತಿಕ ಆರ್ಥಿಕತೆಗೆ ಕೊಂಡೊಯ್ದವು.
• ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು: ಪ್ರಧಾನ ಮಂತ್ರಿಯಾಗಿ, ಅವರು ಗ್ರಾಮೀಣ ಭಾರತದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಿದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್ಆರ್‌ಇಜಿಎ) ಮತ್ತು ಆಡಳಿತದಲ್ಲಿ ಪಾರದರ್ಶಕತೆಯೊಂದಿಗೆ ನಾಗರಿಕರನ್ನು ಸಬಲೀಕರಣಗೊಳಿಸುವ ಮಾಹಿತಿ ಹಕ್ಕು ಕಾಯ್ದೆಯಂತಹ ಉಪಕ್ರಮಗಳನ್ನುಪರಿಚಯಿಸಿದರು.
• ಭಾರತ-ಯುಎಸ್ ನಾಗರಿಕ ಪರಮಾಣು ಒಪ್ಪಂದ (2008): ಅಮೆರಿಕದ ಜತೆಗಿನ ಪರಮಾಣ ಒಪ್ಪಂದಲ್ಲಿ ಮನಮೋಹನ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಈ ಮೂಲಕ ಭಾರತ ಜಾಗತಿಕ ಪರಮಾಣು ಶಕ್ತಿಯಾಗಿ ಹೊರಹೊಮ್ಮಿತು.
• ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆ: ಅವರ ನಾಯಕತ್ವದಲ್ಲಿ, ಭಾರತವು ತನ್ನ ವೇಗದ ಆರ್ಥಿಕ ಬೆಳವಣಿಗೆ ಕಂಡಿತು. ಮೊದಲ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯ ದರಗಳು ಹೆಚ್ಚಾಗಿ ಶೇಕಡಾ 8 ಕ್ಕಿಂತ ಮೇಲಕ್ಕೇರಿತ್ತು. ಮೂಲಸೌಕರ್ಯ ಮತ್ತು ತಂತ್ರಜ್ಞಾನದಲ್ಲಿ ಹೂಡಿಕೆಗೆ ಆದ್ಯತೆ ನೀಡುವ ಜತೆಗೆ ಹಣಕಾಸಿನ ಶಿಸ್ತು ಬೆಳೆಸಿತು.
• ಆರ್ಥಿಕ ಒಳಗೊಳ್ಳುವಿಕೆ : ಕಲ್ಯಾಣ ಯೋಜನೆಗಳ ವಿತರಣೆ ಸುಗಮಗೊಳಿಸಲು ಮತ್ತು ಜನರ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಅವರ ಸರ್ಕಾರವು ಬಯೋಮೆಟ್ರಿಕ್ ಆಧಾರಿತ ಗುರುತಿನ ವ್ಯವಸ್ಥೆಯಾದ ಆಧಾರ್ ನಂತಹ ಉಪಕ್ರಮಗಳನ್ನು ಪ್ರಾರಂಭಿಸಿತು.
ಜಾಗತಿಕ ನಾಯಕತ್ವ: ವಿಶ್ವ ವೇದಿಕೆಯಲ್ಲಿ ಭಾರತದ ವರ್ಚಸ್ಸನ್ನು ಹೆಚ್ಚಿಸುವಲ್ಲಿ, ಜಿ 20 ರಾಷ್ಟ್ರಗಳೊಂದಿಗೆ ತೊಡಗಿಸಿಕೊಂಡಿದ್ದರು. ಜಾಗತಿಕ ನಿರ್ಧಾರ ತೆಗೆದುಕೊಳ್ಳುವ ವೇದಿಕೆಗಳಲ್ಲಿ ಭಾರತದ ಸ್ಥಾನವನ್ನು ಪ್ರತಿಪಾದಿಸುವಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಅವರ ರಾಜನೀತಿಜ್ಞತೆಯು ಜಾಗತಿಕ ನಾಯಕರು ಮತ್ತು ಸಂಸ್ಥೆಗಳಿಂದ ಗೌರವವನ್ನು ಗಳಿಸಿತ್ತು.