Midnight Shoot-Out | ಎನ್‌ಸಿಪಿ ನಾಯಕ ಬಾಬಾ ಸಿದ್ಧಕಿ ಮೇಲೆ ಗುಂಡಿಕ್ಕಿ ಹತ್ಯೆ; ಇಬ್ಬರ ಬಂಧನ

ಮಹಾರಾಷ್ಟ್ರ ಚುನಾವಣೆ ಹೊತ್ತಿನಲ್ಲೇ ಎನ್‌ಸಿಪಿ ನಾಯಕ ಬಾಬಾ ಸಿದ್ದಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಎತ್ತಿದೆ.;

Update: 2024-10-13 11:12 GMT

ಎನ್‌ಸಿಪಿ ಅಜಿತ್‌ ಪವಾರ್‌ ಬಣದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಾಬಾ ಸಿದ್ದಿಕ್ (66) ಅವರನ್ನು ಶನಿವಾರ ತಡರಾತ್ರಿ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮುಂಬೈನ ಪೂರ್ವ ಬಾಂದ್ರಾದಲ್ಲಿ ನಡೆದಿದೆ. ದುಷ್ಕರ್ಮಿಗಳ ಗುಂಡೇಟಿನಿಂದ ತೀವ್ರ ಗಾಯಗೊಂಡ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಅವರನ್ನು ಬದುಕಿಸಲಾಗಲಿಲ್ಲ.

ಗುಂಡಿನ ದಾಳಿ ನಡೆಸಿದ ಜಾಗದಿಂದ ಅನತಿ ದೂರದಲ್ಲೇ (ನಿರ್ಮಲ್‌ ನಗರದ ಕೋಲ್ಗೇಟದ ಮೈದಾನ) ಬಾಬಾ ಸಿದ್ದಿಕ್‌ ಅವರ ಪುತ್ರನ ಕಚೇರಿ ಇತ್ತು. ದುಷ್ಕರ್ಮಿಗಳು ಎರಡರಿಂದ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಪ್ರಕರಣ ಸಂಬಂಧ ಘಟನೆ ನಡೆದ ಕೆಲ ತಾಸುಗಳಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಬಾ ಸಿದ್ದಕಿ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್‌ ತೊರೆದು ಅಜಿತ್‌ ಪವಾರ್‌ ಬಣದ ಎನ್‌ಸಿಪಿ ಸೇರಿದ್ದರು.

ಪ್ರಭಾವಿ ಮುಸ್ಲಿಂ ನಾಯಕ

ಮಹಾರಾಷ್ಟ್ರ ಚುನಾವಣೆ ಹೊತ್ತಿನಲ್ಲೇ ಈ ಆಘಾತಕಾರಿ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಆಡಳಿತ ಪಕ್ಷವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. ಬಾಬಾ ಸಿದ್ದಕಿ ಅವರು ಮುಸ್ಲಿಂ ಸಮುದಾಯದ ಪ್ರಭಾವಿ ವ್ಯಕ್ತಿಯಾಗಿದ್ದು, ಬಾಲಿವುಡ್‌ ನಟರಾದ ಸಲ್ಮಾನ್‌ ಖಾನ್‌, ಶಾರೂಖ್‌ ಖಾನ್‌ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಸಿದ್ದಿಕ್ ಅವರು ಮುಂಬೈನ ಬಾಂದ್ರಾ (ಪಶ್ಚಿಮ) ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಾಬಾ ಸಿದ್ದಿಕಿ ಹತ್ಯೆಯಿಂದ ವಿಚಲಿತರಾಗಿದ್ದೇವೆ. ಈ ದಾಳಿ ಅತ್ಯಂತ ದುರದೃಷ್ಟಕರ ಹಾಗೂ ಖಂಡನೀಯ ಎಂದು ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಅಲ್ಪಸಂಖ್ಯಾತರಿಗಾಗಿ ಹೋರಾಡಿದ ಅಪರೂಪದ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಸಮುದಾಯ ಮತ್ತು ಸೆಕ್ಯುಲರಿಸಂ ಪ್ರತಿಪಾದಿಸಿದ್ದ ಅವರು ನನ್ನ ನೆಚ್ಚಿನ ಸಹೋದ್ಯೋಗಿ ಹಾಗೂ ಹಿತೈಷಿಯಾಗಿದ್ದರು ಎಂದು ತಿಳಿಸಿದ್ದಾರೆ.

ಇಬ್ಬರು ಆರೋಪಿಗಳ ಬಂಧನ

ಬಾಬಾ ಸಿದ್ದಕಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಇಬ್ಬರು ಶೂಟರ್‌ಗಳನ್ನು ಬಂಧಿಸಲಾಗಿದೆ ಎಂದು ಸಿಎಂ ಏಕನಾಥ್‌ ಶಿಂಧೆ ತಿಳಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಉತ್ತರ ಪ್ರದೇಶದವರಾದರೆ, ಮತ್ತೊಬ್ಬ ಹರಿಯಾಣ ಮೂಲದವನು. ಮೂರನೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಶೋಧ ಮುಂದುವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಸಿಪಿ (ಎಸ್‌ಪಿ) ಬಣದ ಶರದ್‌ ಪವಾರ್‌, ಮಹಾರಾಷ್ಟ್ರ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಚಿಂತಾಜನಕವಾಗಿದೆ. ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದರೂ ಸರ್ಕಾರ ಲಘುವಾಗಿ ಪರಿಗಣಿಸಿದೆ. ಕೂಡಲೇ ಗೃಹ ಸಚಿವ ದೇವೇಂದ್ರ ಫಡ್ನಾವೀಸ್‌ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು. ಸರ್ಕಾರ ಕೂಡ ಅಧಿಕಾರದಿಂದ ತೊಲಗಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಬಾಳಾ ಸಾಹೇಬ್‌ ಥೋರಟ್‌ ಪ್ರತಿಕ್ರಿಯಿಸಿ, ಆಡಳಿತ ಪಕ್ಷ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ವೈ ದರ್ಜೆಯ ಭದ್ರತೆ ಹೊಂದಿರುವ ಆಡಳಿತ ಪಕ್ಷದ ನಾಯಕರ ಪರಿಸ್ಥಿತಿಯೇ ಹೀಗಾದರೆ ಕಾನೂನು ಸುವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

ಶಿವಸೇನೆಯ ನಾಯಕ ಆದಿತ್ಯ ಠಾಕ್ರೆ ಅವರು, ಇದೊಂದು ಕೊಲೆ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದಲ್ಲಿ ಸಂಪೂರ್ಣ ಕುಸಿದುಬಿದ್ದಿದೆ ಎಂದು ಟೀಕಿಸಿದ್ದಾರೆ. ಅದೇ ರೀತಿ ಬಿಜೆಪಿ ನಾಯಕರು ಕೂಡ ಘಟನೆಯನ್ನು ಖಂಡಿಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Tags:    

Similar News