ಮುಖ್ಯ ಸಚೇತಕ ಸ್ಥಾನಕ್ಕೆ ಎಸ್‌ಪಿ ಶಾಸಕ ಮನೋಜ್ ಪಾಂಡೆ ರಾಜೀನಾಮೆ
ಸೋಮವಾರ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕರೆದಿದ್ದ ರಾಜ್ಯಸಭಾ ಚುನಾವಣೆಯ ಸಭೆಗೆ ಹಾಜರಾಗದ ಎಂಟು ಎಸ್‌ಪಿ ಶಾಸಕರಲ್ಲಿ ಪಾಂಡೆ ಸೇರಿದ್ದಾರೆ.;
ಸಮಾಜವಾದಿ ಪಕ್ಷದ ಶಾಸಕ ಮನೋಜ್ ಪಾಂಡೆ ಪಕ್ಷದ ಮುಖ್ಯ ಸಚೇತಕ ಸ್ಥಾನಕ್ಕೆ ಮಂಗಳವಾರ (ಫೆಬ್ರವರಿ 27) ರಾಜೀನಾಮೆ ನೀಡಿದ್ದಾರೆ.
ಸೋಮವಾರ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕರೆದಿದ್ದ ರಾಜ್ಯಸಭಾ ಚುನಾವಣೆಯ ಸಭೆಗೆ ಪಾಂಡೆ ಸೇರಿದಂತೆ ಎಂಟು ಶಾಸಕರು ಹಾಜರಾಗಿರಲಿಲ್ಲ.
ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ಮಂಗಳವಾರ ಮತದಾನ ನಡೆಯುತ್ತಿದ್ದು, ಎಂಟು ಬಿಜೆಪಿ ಅಭ್ಯರ್ಥಿಗಳು ಮತ್ತು ಸಮಾಜವಾದಿ ಪಕ್ಷದ ಮೂವರು ಕಣದಲ್ಲಿದ್ದಾರೆ.
ಯಾದವ್‌ಗೆ ಪತ್ರ ಬರೆದಿರುವ ಎಸ್‌ಪಿ ನಾಯಕ, "ನೀವು ನನ್ನನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯ ಸಚೇತಕನನ್ನಾಗಿ ನೇಮಿಸಿದ್ದೀರಿ. ನಾನು ಮುಖ್ಯ ಸಚೇತಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಿ" ಎಂದು ಹೇಳಿದ್ದಾರೆ. ಪಾಂಡೆ ಅವರು ರಾಯ್ಬರೇಲಿಯ ಉಂಚಹಾರ್ ಕ್ಷೇತ್ರದ ಶಾಸಕರಾಗಿದ್ದಾರೆ. ಹಿಂದಿನ ಅಖಿಲೇಶ್ ಯಾದವ್ ಸರ್ಕಾರದಲ್ಲಿ ಅವರು ಕ್ಯಾಬಿನೆಟ್ ಸಚಿವರಾಗಿದ್ದರು.
ರಾಜ್ಯಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯ ಬಗ್ಗೆ ಶಾಸಕರಿಗೆ ಮಾಹಿತಿ ನೀಡಲು ಪಕ್ಷದ ಮುಖ್ಯಸ್ಥರು ಸಭೆ ಕರೆದಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಎಸ್‌ಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಪಾಂಡೆ ಮತ್ತು ಇತರ ಏಳು ಶಾಸಕರು - ಮುಖೇಶ್ ವರ್ಮಾ, ಮಹಾರಾಜಿ ಪ್ರಜಾಪತಿ, ಪೂಜಾ ಪಾಲ್, ರಾಕೇಶ್ ಪಾಂಡೆ, ವಿನೋದ್ ಚತುರ್ವೇದಿ, ರಾಕೇಶ್ ಪ್ರತಾಪ್ ಸಿಂಗ್ ಮತ್ತು ಅಭಯ್ ಸಿಂಗ್ ಅವರು ಸಭೆಗೆ ಹಾಜರಾಗಲಿಲ್ಲ.
ಪಿಟಿಐ ಜೊತೆ ಮಾತನಾಡಿದ ಎಸ್‌ಪಿಯ ರಾಷ್ಟ್ರೀಯ ವಕ್ತಾರ ರಾಜೇಂದ್ರ ಚೌಧರಿ, ಯಾದವ್ ಕರೆದಿದ್ದ ಭೋಜನ ಮತ್ತು ಸಭೆಗೆ ಎಂಟು ಶಾಸಕರು ಹಾಜರಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಶಾಸಕರ ಹೆಸರು ಹೇಳಲಿಲ್ಲ.