ಐಎನ್‌ಎಲ್‌ಡಿ ಹರಿಯಾಣ ಮುಖ್ಯಸ್ಥನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

INLD ಹರಿಯಾಣ ಘಟಕದ ಅಧ್ಯಕ್ಷ ನಫೆ ಸಿಂಗ್ ರಾಥಿ ಅವರು ಪ್ರಯಾಣಿಸುತ್ತಿದ್ದ ಎಸ್‌ಯುವಿ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.

Update: 2024-02-26 11:22 GMT
ರಥಿ ಅವರು ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದಾಗ ಜಜ್ಜರ್ ಜಿಲ್ಲೆಯ ಬಹದ್ದೂರ್‌ಗಢ ಪಟ್ಟಣದಲ್ಲಿ ಕಾರಿನಲ್ಲಿದ್ದ ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದಾರೆ.
Click the Play button to listen to article

ಭಾರತೀಯ ರಾಷ್ಟ್ರೀಯ ಲೋಕದಳದ (INLD) ಹರಿಯಾಣ ಘಟಕದ ಅಧ್ಯಕ್ಷ ನಫೆ ಸಿಂಗ್ ರಾಥಿ ಪ್ರಯಾಣಿಸುತ್ತಿದ್ದ ಎಸ್‌ಯುವಿ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ ಪರಿಣಾಮವಾಗಿ ರಾಥಿ ಹಾಗೂ ಅವರ ಜೊತೆಗಿದ್ದ ಪಕ್ಷದ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ದೆಹಲಿ ಬಳಿಯ ಬಹದ್ದೂರ್‌ಗಢದಲ್ಲಿ ರಾಥಿ ಹಾಗೂ ಪಕ್ಷದ ಕಾರ್ಯಕರ್ತರು ಎಸ್‌ಯುವಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಭದ್ರತೆಗಾಗಿ ನೇಮಿಸಿಕೊಂಡಿದ್ದ ಮೂವರು ಖಾಸಗಿ ಬಂದೂಕುಧಾರಿಗಳಿಗೂ ದಾಳಿಯಲ್ಲಿ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದು, ವಿಶೇಷ ಕಾರ್ಯಪಡೆ ಈ ಬಗ್ಗೆ ತನಿಖೆ ನಡೆಸುತ್ತಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ಹೇಳಿದರು.

ಪೊಲೀಸ್ ಭದ್ರತೆ ನೀಡಿಲ್ಲ: ಐಎನ್‌ಎಲ್‌ಡಿ ನಾಯಕ ಆರೋಪ

ರಾಥಿ ಮತ್ತು ಅವರ ಜೊತೆಗಿದ್ದ ಪಕ್ಷದ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಐಎನ್‌ಎಲ್‌ಡಿ ನಾಯಕ ಅಭಯ್ ಚೌತಾಲಾ ಪಿಟಿಐಗೆ ತಿಳಿಸಿದ್ದಾರೆ.

ರಥಿ ಅವರು ಭದ್ರತೆಗಾಗಿ ನೇಮಿಸಿಕೊಂಡಿದ್ದ ಮೂವರು ಖಾಸಗಿ ಬಂದೂಕುಧಾರಿಗಳಿಗೂ ಗಾಯಗಳಾಗಿವೆ. ಅವರಿಗೆ ಯಾವುದೇ ಪೊಲೀಸ್ ಭದ್ರತೆಯನ್ನು ನೀಡಲಾಗಿಲ್ಲ ಎಂದು ಹೇಳಿದರು. ಬಳಿಕ ಮೃತದೇಹಗಳನ್ನು ಇರಿಸಲಾಗಿರುವ ಬಹದ್ದೂರ್‌ಗಢದ ಆಸ್ಪತ್ರೆಗೆ ಚೌತಾಲಾ ಭೇಟಿ ನೀಡಿದ್ದಾರೆ. ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿದರು.

ಸುಮಾರು 70 ವರ್ಷ ವಯಸ್ಸಿನ ರಥಿ ಅವರು ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದಾಗ ಜಜ್ಜರ್ ಜಿಲ್ಲೆಯ ಬಹದ್ದೂರ್‌ಗಢ ಪಟ್ಟಣದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ರಥೀ ಅವರ ಕುತ್ತಿಗೆ, ಹೊಟ್ಟೆ, ಬೆನ್ನುಮೂಳೆ ಮತ್ತು ತೊಡೆಯ ಭಾಗಕ್ಕೆ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ರಾಠೀ ಅವರು 1996 ಮತ್ತು 2005 ರಲ್ಲಿ ಎರಡು ಬಾರಿ ಬಹದ್ದೂರ್‌ಗಢದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ರಾಠಿಗೆ ಜೀವ ಬೆದರಿಕೆಯಿದ್ದರೂ ಭದ್ರತೆಯನ್ನು ಒದಗಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿದ ಚೌತಾಲಾ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಗೃಹ ಸಚಿವ ಅನಿಲ್ ವಿಜ್ ರಾಜೀನಾಮೆಗೆ ಒತ್ತಾಯಿಸಿದರು.

ನಮ್ಮ ರಾಜ್ಯ ಘಟಕದ ಮುಖ್ಯಸ್ಥರಾಗಿರುವ ಎರಡು ಬಾರಿ ಶಾಸಕರಿಗೆ ಭದ್ರತೆಯನ್ನು ಒದಗಿಸಿಲ್ಲ. ಅವರು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಭದ್ರತೆಯನ್ನು ಒದಗಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರಾಜ್ಯ ಗೃಹ ಸಚಿವರಿಗೆ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ತನಗೆ ಬೆದರಿಕೆ ಇದೆ ಎಂದು ಕೆಲವು ಪೊಲೀಸ್ ಸಿಬ್ಬಂದಿಯಿಂದ ತನಗೆ ತಿಳಿಸಲಾಗಿದೆ ಎಂದು ರಥಿ ಈ ಹಿಂದೆ ನನಗೆ ಹೇಳಿದ್ದರು. ಬಳಿಕ ಎಸ್‌ಪಿ ಝಜ್ಜಾರ್‌ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅವರ ಗಮನಕ್ಕೆ ತಂದಿದ್ದೇನೆ. ಅವರಿಗೆ ಭದ್ರತೆ ಒದಗಿಸಿದ್ದರೆ ಇಂತಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಚೌತಾಲಾ ಹೇಳಿದ್ದಾರೆ.

ಅಪರಾಧ ತನಿಖಾ ಸಂಸ್ಥೆ (ಸಿಐಎ) ಮತ್ತು ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ತಂಡಗಳು ಘಟನೆಯನ್ನು ಪರಿಶೀಲಿಸುತ್ತಿವೆ ಎಂದು ಜಜ್ಜರ್ ಪೊಲೀಸ್ ವರಿಷ್ಠಾಧಿಕಾರಿ ಅರ್ಪಿತ್ ಜೈನ್ ಸುದ್ದಿಗಾರರಿಗೆ ತಿಳಿಸಿದರು.

ಹಲವು ತಂಡಗಳು ತನಿಖೆ ನಡೆಸುತ್ತಿವೆ. ನಾವು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತೇವೆ, ಎಂದು ಅವರು ಹೇಳಿದರು.

ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಕೂಡ ಘಟನೆಯ ಕುರಿತು ಮನೋಹರ್ ಲಾಲ್ ಖಟ್ಟರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹರ್ಯಾಣದಲ್ಲಿ ಬಿಜೆಪಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರತಿಪಕ್ಷಗಳು

ಈ ಬಗ್ಗೆ X ನಲ್ಲಿನ ಪೋಸ್ಟ್‌ ಮಾಡಿರುವ ಅರವಿಂದ ಕೇಜ್ರಿವಾಲ್‌ ಹರಿಯಾಣದಲ್ಲಿ ಗುಂಡಿನ ದಾಳಿಯಲ್ಲಿ INLD ನಾಯಕ ನಫೆ ಸಿಂಗ್ ಅವರ ಸಾವು "ತುಂಬಾ ದುಃಖಕರವಾಗಿದೆ. ನಾನು ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಪೋಸ್ಟ್‌ ಮಾಡಿದ್ದಾರೆ.

ಬಿಜೆಪಿಯು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಮಾಡಿದೆ ಎಂದು ಆರೋಪಿಸಿದ ಕೇಜ್ರಿವಾಲ್, ರೈತರ ಪ್ರತಿಭಟನೆಯನ್ನು ತಡೆಯಲು ಗೂಂಡಾಗಳನ್ನು ಹಿಡಿಯಲು ನಿಯೋಜಿಸಬೇಕಾದ ಪೊಲೀಸ್ ಪಡೆಯನ್ನು ಹರಿಯಾಣ-ಪಂಜಾಬ್ ಗಡಿಯಲ್ಲಿ ಇರಿಸಲಾಗಿದೆ ಎಂದು ಹೇಳಿದರು.

ರಾಠಿ ಹತ್ಯೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಭೂಪಿಂದರ್ ಸಿಂಗ್ ಹೂಡಾ, "ಹರಿಯಾಣದಲ್ಲಿ ಐಎನ್‌ಎಲ್‌ಡಿ ರಾಜ್ಯಾಧ್ಯಕ್ಷ ನಫೆ ಸಿಂಗ್ ರಾಠಿ ಅವರನ್ನು ಗುಂಡಿಕ್ಕಿ ಕೊಂದ ಸುದ್ದಿ ತುಂಬಾ ದುಃಖಕರವಾಗಿದೆ. ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.

ಹರಿಯಾಣ ಅರಾಜಕತೆಗೆ ಬಲಿಯಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ. ಕ್ರಿಮಿನಲ್‌ಗಳು ಆಡಳಿತ ನಡೆಸುತ್ತಿದ್ದಾರೆ ಮತ್ತು ಹರಿಯಾಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ಅವರು ಹೇಳಿದರು.

ಎಎಪಿ ನಾಯಕ ಸುಶೀಲ್ ಗುಪ್ತಾ ಹರಿಯಾಣದಲ್ಲಿ ಕಾನೂನಿನ ಆಳ್ವಿಕೆ ಕೊನೆಗೊಂಡಿದೆ ಮತ್ತು ಜಂಗಲ್ ರಾಜ್ ಮೇಲುಗೈ ಸಾಧಿಸಿದೆ. ಹರಿಯಾಣದಲ್ಲಿ ಇಂದು ಯಾರೂ ಸುರಕ್ಷಿತವಾಗಿಲ್ಲ ಎಂದು ತಿಳಿಸಿದ್ದಾರೆ.


Tags:    

Similar News