ಅಕ್ರಮ ಗಣಿಗಾರಿಕೆ ಪ್ರಕರಣ: ಸಿಬಿಐ ವಿಚಾರಣೆಗೆ ಅಖಿಲೇಶ್ ಯಾದವ್ ಗೈರಾಗುವ ಸಾಧ್ಯತೆ
ಅಖಿಲೇಶ್ ಯಾದವ್ ಆರೋಪಿಯಲ್ಲ, ಸಾಕ್ಷಿ ಎಂದ ಸಿಬಿಐ
ಐದು ವರ್ಷಗಳ ಹಿಂದೆ ದಾಖಲಾಗಿದ್ದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸಿಬಿಐ ವಿಚಾರಣೆಗೆ ಗುರುವಾರ ಹಾಜರಾಗುವ ಸಾಧ್ಯತೆಯಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಖಿಲೇಶ್ ಯಾದವ್ ಅವರು ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಹಿಂದುಳಿದ ವರ್ಗ, ದಲಿತ ಮತ್ತು ಅಲ್ಪಸಂಖ್ಯಾತರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ, ವಿಚಾರಣೆಗೆ ಹೋಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ, ಸಮಾಜವಾದಿ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ರಾಜ್‌ಪಾಲ್ ಕಶ್ಯಪ್ ಅವರು, ಅಖಿಲೇಶ್ ಅವರು ವಿಚಾರಣೆಗೆ ಹೋಗುತ್ತಿಲ್ಲ. ಅವರು ಲಕ್ನೋದಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.
ಅಖಿಲೇಶ್ ಅವರಿಗೆ ಸಿಬಿಐ ನೋಟಿಸ್ ನೀಡಿರುವ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಅವರು ಇಂದು ದೆಹಲಿಗೆ ಹೋಗುತ್ತಿಲ್ಲ ಎನ್ನುವುದು ಸ್ಪಷ್ಟ ಎಂದರು.
ಸಿಬಿಐ ಸಿಆರ್‌ಪಿಸಿಯ ಸೆಕ್ಷನ್ 160 ರ ಅಡಿಯಲ್ಲಿ ನೀಡಲಾದ ನೋಟಿಸ್‌ನಲ್ಲಿ, ಫೆಬ್ರವರಿ 29 ರಂದು ಸಿಬಿಐ ಮುಂದೆ ಹಾಜರಾಗುವಂತೆ ತಿಳಿಸಲಾಗಿತ್ತು.
ಸಿಬಿಐನ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಅಖಿಲೇಶ್ ಯಾದವ್ ಅವರು ಈ ಪ್ರಕರಣದಲ್ಲಿ ಆರೋಪಿಯಲ್ಲ, ಸಾಕ್ಷಿ ಎಂದಿದ್ದಾರೆ. ಅಖಿಲೇಶ್ ಅವರಿಗೆ ಇ-ಟೆಂಡರ್ ಪ್ರಕ್ರಿಯೆಯ ಉಲ್ಲಂಘನೆ ಆರೋಪದ ಮೇಲೆ ಸಮನ್ಸ್ ನೀಡಲಾಗಿದೆ.
ಇದು ಮುಖ್ಯವಾಗಿ ಗಣಿಗಾರಿಕೆ ಗುತ್ತಿಗೆಯನ್ನು ನೀಡುವುದಕ್ಕೆ ಸಂಬಂಧಿಸಿದೆ. ಈ ಪ್ರಕರಣದ ತನಿಖೆ ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ಈಗಾಗಲೇ ಆದೇಶಿಸಿದೆ.
2012-16ರಲ್ಲಿ ಅಖಿಲೇಶ್ ಅವರು ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿದ್ದರು ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಗಣಿಗಾರಿಕೆಗೆ ನಿಷೇಧ ಹೇರಿದ್ದರೂ ಅಕ್ರಮವಾಗಿ ಪರವಾನಗಿ ನವೀಕರಿಸಿದ್ದರು ಎನ್ನುವ ಆರೋಪಗಳು ಕೇಳಿ ಬಂದಿತ್ತು.
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮಾತನಾಡಿದ್ದ ಅಖಿಲೇಶ್ ಯಾದವ್ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. 2019ರಲ್ಲಿ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನನಗೆ ನೋಟಿಸ್ ನೀಡಲಾಗಿತ್ತು.
ಇದೀಗ ಮತ್ತೆ ಚುನಾವಣೆ ಸಮೀಪಿಸುತ್ತಿದ್ದು, ಮತ್ತೆ ನೋಟಿಸ್ ಬರುತ್ತಿವೆ. ನನಗೆ ಗೊತ್ತು, ಚುನಾವಣೆ ಬಂದಾಗ ನೋಟಿಸ್ ಬರುತ್ತವೆ.
ಈ ಆತಂಕ ಯಾಕೆ, ಕಳೆದ 10 ವರ್ಷಗಳಲ್ಲಿ ನೀವು (ಬಿಜೆಪಿ) ಸಾಕಷ್ಟು ಕೆಲಸ ಮಾಡಿದ್ದರೆ, ಚುನಾವಣಾ ಸಂದರ್ಭದಲ್ಲಿ ಭಯ ಬೀಳುವುದು ಕಾರಣವೇನು ಎಂದು ಅಖಿಲೇಶ್ ಅವರು ಪ್ರಶ್ನಿಸಿದ್ದಾರೆ.