Electoral Bond Case| ಎಫ್‌ಐಆರ್ ಹಿನ್ನೆಲೆ ನಿರ್ಮಲಾ ಸೀತಾರಾಮನ್ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ
ಚುನಾವಣಾ ಬಾಂಡ್‌ಗಳ ಷಡ್ಯಂತ್ರ್ಯದ ಮೂಲಕ ಹಣ ಸುಲಿಗೆಗೆ ನಾಲ್ಕು ಮಾರ್ಗಗಳನ್ನು ಬಳಸಲಾಗಿದೆ. ಪೇಯ್ಡ್ ಲಂಚ, ಪೋಸ್ಟ್‌ಪೇಯ್ಡ್ ಲಂಚ, ಪೋಸ್ಟ್ ರೇಡ್ ಲಂಚ ಮತ್ತು ಶೆಲ್ ಕಂಪನಿಗಳ ಮೂಲಕ ಹಣ ಸುಲಿಗೆ ಮಾಡಲಾಗಿದೆ ಎಂಬುದು ಜೈರಾಮ್ ರಮೇಶ್ ಅವರ ಆರೋಪವಾಗಿದೆ.
ಚುನಾವಣಾ ಬಾಂಡ್ ಯೋಜನೆಗೆ ಸಂಬಂಧಿಸಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡುವಂತೆ ಭಾನುವಾರ(ಸೆ.29) ಕಾಂಗ್ರೆಸ್ ಒತ್ತಾಯಿಸಿದೆ. ಅಲ್ಲದೇ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಸ್ತುನಿಷ್ಠ ತನಿಖೆಗೆ ಕೋರಿದೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಎಐಸಿಸಿ ವಕ್ತಾರ ಅಭಿಷೇಕ್ ಸಿಂಘ್ವಿ ಅವರು, ಕಳೆದ 11 ವರ್ಷಗಳಲ್ಲಿ ಬಿಜೆಪಿ ಪಕ್ಷ ತಮ್ಮ ರಾಜಕೀಯ ವಿರೋಧಿಗಳನ್ನು ಬಗ್ಗು ಬಡಿಯುವ ಕೆಲಸ ಮಾಡಿದೆ. ಹಾಗಾಗಿ ನ್ಯಾಯಾಲಯ ಅಧೀನದಲ್ಲಿ ವಸ್ತುನಿಷ್ಠ ತನಿಖೆ ನಡೆಯಬೇಕು. ಇನ್ನೂ ಮುಖ್ಯವಾಗಿ ಸುಪ್ರೀಂಕೋರ್ಟ್ ಅಥವಾ ಸುಪ್ರೀಂಕೋರ್ಟ್ ಎಸ್‌ಐಟಿಯೇ ತನಿಖೆ ಮೇಲೆ ನಿಗಾ ವಹಿಸಬೇಕು ಎಂದು ಮನವಿ ಮಾಡಿದರು.
ಅಭಿಷೇಕ್ ಸಿಂಘ್ವಿ ಮಾತನಾಡಿ, ಚುನಾವಣಾ ಬಾಂಡ್ ಯೋಜನೆಗೆ ಸಂಬಂಧಿಸಿ ವಿಶೇಷ ತನಿಖಾ ತಂಡದ (ಎಸ್ಐಟಿ) ಮೂಲಕ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ವಿರೋಧ ಪಕ್ಷದ ಬೇಡಿಕೆಯನ್ನು ಪುನರುಚ್ಚರಿಸಿದರು.
ಚುನಾವಣಾ ಬಾಂಡ್‌ಗಳ ಷಡ್ಯಂತ್ರ್ಯದ ಮೂಲಕ ಹಣ ಸುಲಿಗೆಗೆ ನಾಲ್ಕು ಮಾರ್ಗಗಳನ್ನು ಬಳಸಲಾಗಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದರು. ಪೇಯ್ಡ್ ಲಂಚ, ಪೋಸ್ಟ್ ಪೇಯ್ಡ್ ಲಂಚ, ಪೋಸ್ಟ್ ರೇಡ್ ಲಂಚ ಮತ್ತು ಶೆಲ್ ಕಂಪನಿಗಳ ಮೂಲಕ ಹಣ ಸುಲಿಗೆ ಮಾಡಲಾಗಿದೆ. ಹಾಗಾಗಿ ನೈತಿಕತೆ ಆಧಾರದ ಮೇಲೆ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಹಣಕಾಸು ಸಚಿವರೊಬ್ಬರೇ ಸ್ವತಂತ್ರವಾಗಿ ಚುನಾವಣಾ ಬಾಂಡ್ ಮೂಲಕ ಹಣ ಸುಲಿಗೆ ಮಾಡಲಾಗದು. ಸರ್ಕಾರದಲ್ಲಿ ಯಾರು ನಂಬರ್ ಒನ್ ಮತ್ತು ನಂಬರ್ ಟು ಎಂದು ನಮಗೆ ತಿಳಿದಿದೆ. ಸುಲಿಗೆಯನ್ನು ಯಾರ ನಿರ್ದೇಶನದ ಮೇರೆಗೆ ಮಾಡಲಾಗಿದೆ ಎಂದು ಬಹಿರಂಗಪಡಿಬೇಕು ಅಭೀಷೇಕ್ ಸಿಂಘ್ವಿ ಆಗ್ರಹಿಸಿದರು.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಪ್ರಜಾಪ್ರಭುತ್ವಕ್ಕೆ ನಿರ್ಣಾಯಕವಾಗಿದೆ. ಚುನಾವಣಾ ಬಾಂಡ್ ಯೋಜನೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ಹಾಗಾಗಿ ಇದು. ʼಸುಲಿಗೆವಾದಿ ಬಿಜೆಪಿ ಯೋಜನೆ(EBS)" ಎಂದು ವ್ಯಾಖ್ಯಾನಿಸಿದರು.
ಈಗ ರದ್ದಾಗಿರುವ ಚುನಾವಣಾ ಬಾಂಡ್ ಯೋಜನೆಗೆ ಸಂಬಂಧಿಸಿದ ದೂರಿನ ಮೇರೆಗೆ ಬೆಂಗಳೂರಿನ ನ್ಯಾಯಾಲಯದ ನಿರ್ದೇಶನದ ಮೇರೆಗೆ ನಿರ್ಮಲಾ ಸೀತಾರಾಮನ್ ಮತ್ತು ಇತರರ ವಿರುದ್ಧ ಶನಿವಾರ ಪ್ರಕರಣ ದಾಖಲಿಸಲು ಆದೇಶ ಹೊರಡಿಸಿತ್ತು.
ಸಚಿವೆ ನಿರ್ಮಲಾ ಸೀತಾರಾಮನ್, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮತ್ತು ಬಿಜೆಪಿ ಪದಾಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 384 (ಸುಲಿಗೆ ಶಿಕ್ಷೆ), 120 ಬಿ (ಅಪರಾಧದ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಕರ್ನಾಟಕದ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನೂ ಎಫ್ಐಆರ್‌ನಲ್ಲಿ ಹೆಸರಿಸಲಾಗಿದೆ. ಆರೋಪಿಗಳು ಚುನಾವಣಾ ಬಾಂಡ್ಗಳ ಸೋಗಿನಲ್ಲಿ ೮೦೦೦ ಕೋಟಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ) ಸಹ ಅಧ್ಯಕ್ಷ ಆದರ್ಶ್ ಆರ್ ಅಯ್ಯರ್ ಪೊಲೀಸರಿಗೆ ದೂರು ನೀಡಿದ್ದರು.
ಕಳೆದ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು.