ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಏಳು ಜನ ಸಾವು
ಏಳು ಜನಕ್ಕೆ ಗಂಭೀರವಾದ ಗಾಯಗಳು | ಭಾರೀ ಸ್ಫೋಟಕ್ಕೆ ಬೆಚ್ಚಿದ ಜನ
ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಭಾನುವಾರ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಏಳು ಜನ ಸಾವನ್ನಪ್ಪಿದ್ದು, ಏಳು ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಕೊಖ್ರಾಜ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಹೆವಾ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆ ಕಾರ್ಖಾನೆಯಿಂದ ಹಲವು ಕಿಲೋಮೀಟರ್‌ಗೆ ವ್ಯಾಪಿಸಿತ್ತು.
ಪಟಾಕಿ ಕಾರ್ಖಾನೆಯ ಸ್ಫೋಟದ ವಿಷಯ ತಿಳಿದ ಕೂಡಲೇ 10 ಅಗ್ನಿಶಾಮಕ ವಾಹನಗಳು ಹಾಗೂ ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಗ್ರಾಜ್ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಭಾನು ಭಾಸ್ಕರ್ ಅವರು ಮಾತನಾಡ, ಮೃತ ನಾಲ್ವರನ್ನು ಶಿವನಾರಾಯಣ, ಶಿವಕಾಂತ್, ಅಶೋಕ್ ಕುಮಾರ್ ಮತ್ತು ಜೈಚಂದ್ರ ಎಂದು ಗುರುತಿಸಲಾಗಿದೆ.
ಇನ್ನುಳಿದವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಎಡಿಜಿಪಿ ಪ್ರಕಾರ, ಸ್ಫೋಟ ಸಂಭವಿಸಿದಾಗ ಸುಮಾರು 18 ಜನರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ಕಾರ್ಖಾನೆಯಲ್ಲಿ ಇರಿಸಲಾಗಿದ್ದ ರಾಸಾಯನಿಕಗಳಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ ಎಂದಿದ್ದಾರೆ.
ಇನ್ನು ಸ್ಥಳೀಯರ ಪ್ರಕಾರ, ಸ್ಫೋಟದ ತೀವ್ರತೆ ಗಾಢವಾಗಿತ್ತು. ಮೃತರ ಕೈಕಾಲುಗಳು ಛಿದ್ರವಾಗಿ ಗಾಳಿಯಲ್ಲಿ ಹಾರುತ್ತಿತ್ತು.
ಗಾಯಾಳುಗಳು ನರಳಾಡುತ್ತಿದ್ದರು ಎಂದಿದ್ದಾರೆ. ಪಟಾಕಿ ಕಾರ್ಖಾನೆ ಕಾನೂನು ಬದ್ಧವಾಗಿದೆ ಮತ್ತು ಸ್ಥಳೀಯ ಆಡಳಿತದಿಂದ ಅಗತ್ಯವಿರುವ ಎಲ್ಲಾ ಅನುಮತಿಯನ್ನು ಪಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.