ಬಿಜೆಪಿ ಭಯೋತ್ಪಾದಕರ ಪಕ್ಷ: ಪ್ರಧಾನಿ ಮೋದಿ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ತಿರುಗೇಟು

ಬಿಜೆಪಿ ಭಯೋತ್ಪಾದಕ ಪಕ್ಷ, ಕೇಸರಿ ಪಕ್ಷದ ಕೆಲವರು ಜನರನ್ನು ಹೊಡೆದು ಸಾಯಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರ ವಿರುದ್ಧ ನಿರಂತರ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ;

Update: 2024-10-13 08:31 GMT

ʼನಗರ ನಕ್ಸಲರ ಗ್ಯಾಂಗ್‌ʼ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ʼಬಿಜೆಪಿ ಭಯೋತ್ಪಾದಕರ ಪಕ್ಷʼ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಲಬುರ್ಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಸರಿ ಪಕ್ಷದ ಕೆಲವರು ಜನರನ್ನು ಹೊಡೆದು ಸಾಯಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರ ವಿರುದ್ಧ ನಿರಂತರ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.

ಮಹಾರಾಷ್ಟ್ರದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ್ದ ನರೇಂದ್ರ ಮೋದಿ ಅವರು, ಹರಿಯಾಣ ಚುನಾವಣೆ ಗೆಲುವು ದೇಶದ ಮನಸ್ಥಿತಿ ತೋರಿಸುತ್ತದೆ. ಕಾಂಗ್ರೆಸ್ಸಿನ ನಗರ ನಕ್ಸಲರ ದ್ವೇಷಪೂರಿತ ಪಿತೂರಿಗಳಿಗೆ ಹರಿಯಾಣದ ಜನತೆ ಬಲಿಯಾಗಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಟೀಕಿಸಿದ್ದರು.

ದುಷ್ಕರ್ಮಿಗಳಿಗೆ ಬಿಜೆಪಿ ಬೆಂಬಲ

ಪ್ರಧಾನಿ ಮೋದಿಯವರ ಟೀಕೆಗೆ ಕಿಡಿ ಕಾರಿರುವ ಖರ್ಗೆ, ಮೋದಿ ಅವರಿಗೆ ಕಾಂಗ್ರೆಸ್‌ ಪಕ್ಷವನ್ನು ತೆಗಳುವುದೇ ಕೆಲಸ. ಇಲ್ಲಿವರೆಗೆ ಮೌನವಾಗಿದ್ದ ಅವರು ಫಲಿತಾಂಶದ ನಂತರ ಜೀವ ಪಡೆದು, ನಗರ ನಕ್ಸಲರು ಎಂದು ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದ್ದಾರೆ. ಪ್ರಗತಿಪರರು ಹಾಗೂ ಬುದ್ದಿಜೀವಿಗಳನ್ನು ಪ್ರಧಾನಿ ಮೋದಿ ಅವರು ನಗರ ನಕ್ಸಲರು ಎಂದು ಕರೆಯುತ್ತಿದ್ದಾರೆ. ಇದು ಅವರ ಅಭ್ಯಾಸ. ಆದರೆ, ಅವರ ಪಕ್ಷವೇ ಭಯೋತ್ಪಾದಕ ಪಕ್ಷ. ಅವರದ್ದು ದುಷ್ಕರ್ಮಿಗಳ ಗುಂಪು ಎಂದು ಟೀಕಾಪ್ರಹಾರ ನಡೆಸಿದರು.

ಪರಿಶಿಷ್ಟ ಜಾತಿಯ ಜನರ ಬಾಯಲ್ಲಿ ಮೂತ್ರ ವಿಸರ್ಜನೆ, ಬುಡಕಟ್ಟು ಜನಾಂಗದವರ ಮೇಲೆ ಅತ್ಯಾಚಾರ ಸೇರಿದಂತೆ ಹೇಯ ಕೃತ್ಯಗಳಲ್ಲಿ ಬಿಜೆಪಿ ಪಕ್ಷದವರು ತೊಡಗಿಸಿಕೊಂಡಿದ್ದಾರೆ. ಇಂತಹ ನೀಚ ಕೃತ್ಯಗಳನ್ನು ಬಿಜೆಪಿ, ಸಹಿಸುವುದಲ್ಲದೇ ಬೆಂಬಲಿಸುತ್ತಿದೆ. ಬಿಜೆಪಿ ಅಧಿಕಾರದಲ್ಲಿರುವ ಎಲ್ಲ ಕಡೆ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದವರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಆದರೆ, ಬಿಜೆಪಿಯವರು ಮಾತ್ರ ಇತರರನ್ನು ದೂಷಿಸುತ್ತಾರೆ. ಹೀಗಿರುವಾಗ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುವ ಹಕ್ಕು ಪ್ರಧಾನಿಗಿಲ್ಲ ಎಂದು ಹೇಳಿದರು.

ಖರ್ಗೆ ಮಾತಿಗೆ ಬಿಜೆಪಿ ಕಿಡಿ

ಮಲ್ಲಿಕಾರ್ಜುನ ಖರ್ಗೆ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ, ಪ್ರಧಾನಿ ಮೋದಿ ಅವರನ್ನು ನಿಂದಿಸಲು ಕಾಂಗ್ರೆಸ್ಸಿನವರು ಯಾವಾಗಲೂ ಇಂತಹ ಭಾಷೆಯನ್ನೇ ಬಳಸುತ್ತಾರೆ. ಇದು ಪಕ್ಷದ ಹಿರಿಯರ ಗುಣ ಮಾತ್ರ ತೋರಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.

2014, 2019 ಮತ್ತು ಈಗ 2024 ರಲ್ಲಿ ಕೋಟ್ಯಂತರ ಭಾರತೀಯರು ಬಿಜೆಪಿಗೆ ಮತ ಹಾಕಿದ್ದಾರೆ. ಇದು ಜನರ ವಿವೇಕಕ್ಕೆ ಮಾಡಿದ ಅವಮಾನ. ಹರಿಯಾಣ ಫಲಿತಾಂಶಗಳ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇವಿಎಂ, ಚುನಾವಣಾ ಆಯೋಗವನ್ನೂ ದೂಷಿಸಿದ್ದಾರೆ. ಕೊನೆಗೆ ಜನರನ್ನು ದೂಷಿಸಲಿದ್ದಾರೆ. ಇದು ಕಾಂಗ್ರೆಸ್ಸಿನ ಡಿಎನ್‌ಎ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Tags:    

Similar News