Supreme Court : ವಕ್ಫ್ ಮಂಡಳಿಗೆ ಯಾವುದೇ ನೇಮಕ ಮಾಡುವಂತಿಲ್ಲ, ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಕಾಯಿದೆಯ ಕೆಲವು ನಿಬಂಧನೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವಂತೆ ಕೋರಿದ್ದ ಅರ್ಜಿಗಳನ್ನು ಪರಿಗಣಿಸಿದ ನ್ಯಾಯಾಲಯವು, ಕೇಂದ್ರ ಸರ್ಕಾರಕ್ಕೆ ಒಂದು ವಾರದ ಕಾಲಾವಕಾಶ ನೀಡಿ, ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತು.;
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ವಕ್ಫ್ (ತಿದ್ದುಪಡಿ) ಕಾಯಿದೆ 2025ಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದನ್ನು ಗುರುವಾರ (ಏಪ್ರಿಲ್ 17ರಂದು) ಹೊರಡಿಸಿದೆ. ಈ ಕಾಯಿದೆಯ ಕೆಲವು ವಿವಾದಾತ್ಮಕ ಅಂಶಗಳಾದ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರ ನೇಮಕ ಮತ್ತು ವಕ್ಫ್ ಆಸ್ತಿಗಳ ಡಿನೋಟಿಫಿಕೇಶನ್‌ನಂತಹ ಕ್ರಮಗಳನ್ನು ಮುಂದಿನ ವಿಚಾರಣೆಯವರೆಗೆ ಅನುಷ್ಠಾನಗೊಳಿಸದಂತೆ ತಡೆ ನೀಡಿದೆ. ಈ ಆದೇಶವು ಮೇ 5ರವರೆಗೆ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ವಕ್ಫ್ ತಿದ್ದುಪಡಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದುವರಿಸಲಿದೆ.
ವಕ್ಫ್ (ತಿದ್ದುಪಡಿ) ಕಾಯಿದೆ 2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ (ಏಪ್ರಿಲ್ 17) ಮುಂದುವರಿಸಿತು. ಈ ವೇಳೆ, ಕಾಯಿದೆಯ ಕೆಲವು ನಿಬಂಧನೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವಂತೆ ಕೋರಿದ್ದ ಅರ್ಜಿಗಳನ್ನು ಪರಿಗಣಿಸಿದ ನ್ಯಾಯಾಲಯವು, ಕೇಂದ್ರ ಸರ್ಕಾರಕ್ಕೆ ಒಂದು ವಾರದ ಕಾಲಾವಕಾಶ ನೀಡಿ, ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತು.
ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಕೆಲವು ಭರವಸೆಗಳನ್ನು ನೀಡಿತು. ಮುಖ್ಯವಾಗಿ, ಮುಂದಿನ ವಿಚಾರಣೆಯ ದಿನಾಂಕದವರೆಗೆ ಕೇಂದ್ರ ಅಥವಾ ರಾಜ್ಯ ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರರನ್ನು ನೇಮಿಸುವುದಿಲ್ಲ ಎಂದು ತಿಳಿಸಿತು. ಅಲ್ಲದೇ, ಅಧಿಸೂಚನೆಯ ಮೂಲಕ ಘೋಷಿತವಾದ ಅಥವಾ ''ಬಳಕೆಯ ಕಾರಣದಿಂದ ವಕ್ಫ್' ಎಂದು ನೋಂದಾಯಿತವಾದ ಯಾವುದೇ ಆಸ್ತಿಗಳನ್ನು ಡಿನೋಟಿಫೈ (ವಕ್ಫ್ ಆಸ್ತಿಯಿಂದ ಹೊರತೆಗೆಯುವ) ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತು. ಈ ಭರವಸೆಗಳನ್ನು ಗಮನಿಸಿದ ಸುಪ್ರೀಂ ಕೋರ್ಟ್, ವಿವಾದಾತ್ಮಕ ತಿದ್ದುಪಡಿಗಳ ಅನುಷ್ಠಾನಕ್ಕೆ ತಡೆಯಾಜ್ಞೆ ಕೊಟ್ಟಿತು.
ಸುಪ್ರೀಂ ಕೋರ್ಟ್‌ನ ಪ್ರಶ್ನೆ ಮತ್ತು ಕೇಂದ್ರದ ಸ್ಪಷ್ಟನೆ
ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತೀಕ್ಷ್ಣವಾದ ಪ್ರಶ್ನೆಯೊಂದನ್ನು ಕೇಳಿತು: 'ಹಿಂದೂ ಧಾರ್ಮಿಕ ಟ್ರಸ್ಟ್‌ಗಳಲ್ಲಿ ಮುಸ್ಲಿಮರನ್ನು ಸದಸ್ಯರನ್ನಾಗಿ ನೇಮಿಸಲು ನೀವು ಸಿದ್ಧರಿದ್ದೀರಾ' ಎಂದು ಪ್ರಶ್ನೆ ಕೇಳಿತ್ತು. ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರ ನೇಮಕದ ನಿಯಮವು ಧಾರ್ಮಿಕ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆಯೇ ಎಂಬ ಬಗ್ಗೆ ನ್ಯಾಯಾಲಯವೂ ಕೇಳಿತ್ತು.
ಸುಪ್ರೀಂ ಕೋರ್ಟ್‌ನ ಈ ತಡೆಯಾಜ್ಞೆಯು ವಕ್ಫ್ ತಿದ್ದುಪಡಿ ಕಾಯಿದೆಯ ಅನುಷ್ಠಾನಕ್ಕೆ ತಾತ್ಕಾಲಿಕ ತಡೆಯೊಡ್ಡಿದ್ದು, ಮೇ 5ರಂದು ನಡೆಯಲಿರುವ ಮುಂದಿನ ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಮತ್ತು ಈ ಕಾಯಿದೆಯ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ವಿವರವಾದ ಚರ್ಚೆ ನಡೆಯಲಿದೆ