Arvind Panagariya | ನೆಹರೂ ಆರ್ಥಿಕ ಮಾದರಿ; ಕೈಗಾರಿಕೆಗಳ ಮೋಹ ಮತ್ತು ಸೀಮಿತ ಅಭಿವೃದ್ಧಿ
ಜವಾಹರ್ ಲಾಲ್ ನೆಹರೂ ಅವರ ರಾಜಕೀಯ ಸಾಧನೆ, ನಾಗರಿಕರ ಹಕ್ಕುಗಳ ಪ್ರತಿಪಾದನೆ , ಮತದಾನ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಆಧಾರಿತ ಸಂವಿಧಾನದ ಕಲ್ಪನೆ ಯಶಸ್ವಿ ಮಾದರಿ ಎಂದು ಅರವಿಂದ್ ಅವರು ಶ್ಲಾಘಿಸಿದ್ದಾರೆ.;
ಫೈನಾನ್ಸ್ ಕಮಿಷನ್ ಅಧ್ಯಕ್ಷರು ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅರವಿಂದ್ ಪನಗರಿಯಾ ಅವರು ತಮ್ಮ ಪುಸ್ತಕ ʼದಿ ನೆಹರೂ ಡೆವೆಲಪ್‌ಮೆಂಟ್ ಮಾಡೆಲ್ : ಹಿಸ್ಟರಿ ಅಂಡ್ ಇಟ್ಸ್ ಲಾಸ್ಟಿಂಗ್ ಇಂಪ್ಯಾಕ್ಟ್ʼನಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆರ್ಥಿಕ ನೀತಿಗಳನ್ನು ವಿಮರ್ಶಿಸಿದ್ದಾರೆ. ʼದ ಫೆಡರಲ್ʼ ಪ್ರಧಾನ ಸಂಪಾದಕ ಎಸ್. ಶ್ರೀನಿವಾಸನ್ ಅವರೊಂದಿಗೆ ನಡೆದ ವಿಶೇಷ ಸಂದರ್ಶನದಲ್ಲಿ ಪನಗರಿಯ ಬೃಹತ್ ಕೈಗಾರಿಕೆಗಳು, ಆಮದು ನೀತಿ ಮತ್ತು ಸಾರ್ವಜನಿಕ ಕ್ಷೇತ್ರದ ಪ್ರಾಬಲ್ಯದ ಮೇಲೆ ನೆಹರೂ ಹೊಂದಿದ್ದ ಒಲವನ್ನು ವಿಶ್ಲೇಷಿಸಿದ್ದಾರೆ. ಈ ನೀತಿಗಳು ಭಾರತವನ್ನು ಜಾಗತಿಕ ಮಾರುಕಟ್ಟೆಗಳಿಂದ ಪ್ರತ್ಯೇಕಗೊಳಿಸಿದ್ದವು, ಹೊಸ ಆವಿಷ್ಕಾರಗಳನ್ನು ತಡೆಯಿತು. ಮುಂದುವರಿದು ಉದ್ಯೋಗ ಸೃಷ್ಟಿಗೆ ಅಡ್ಡಿಯಾದವು ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.
ನೆಹರೂ ಆರ್ಥಿಕ ದೃಷ್ಟಿಕೋನ
ಜವಾಹರ್ ಲಾಲ್ ನೆಹರೂ ಅವರ ರಾಜಕೀಯ ಸಾಧನೆ, ನಾಗರಿಕರ ಹಕ್ಕುಗಳ ಪ್ರತಿಪಾದನೆ , ಮತದಾನ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಆಧಾರಿತ ಸಂವಿಧಾನದ ಕಲ್ಪನೆ ಯಶಸ್ವಿ ಮಾದರಿ ಎಂದು ಅರವಿಂದ್ ಅವರು ಶ್ಲಾಘಿಸಿದ್ದಾರೆ. ಆದರೆ ಅವರು ನೆಹರೂ ಅವರ ಆರ್ಥಿಕ ಮಾದರಿಯನ್ನು "ಬೃಹತ್ ವೈಫಲ್ಯ " ಎಂದಿದ್ದಾರೆ. ಉಕ್ಕು ಮತ್ತು ಯಂತ್ರೋಪಕರಣಗಳಂತಹ ಭಾರೀ ಕೈಗಾರಿಕೆಗಳ ಮೇಲಿನ ಆಸಕ್ತಿ ಅತಿಯಾಗಿತ್ತು. ಈ ಮಾದರಿಯ ನೀತಿಗಳಿಂದಾಗಿ ಭಾರತವು ಜಾಗತಿಕ ಸ್ಪರ್ಧೆಗೆ ಒಡ್ಡಲು ವಿಫಲಗೊಂಡಿತು ಎಂದು ಪನಗರಿಯಾ ಅವರು ಹೇಳಿದ್ದಾರೆ.
"ಆ ಸಮಯದಲ್ಲಿ, ಬಂಡವಾಳ ಕ್ರೋಡೀಕರಣವೇ ಕಷ್ಟ. ಅದರಲ್ಲೂ ಲಭ್ಯ ಸಂಪನ್ಮೂಲವನ್ನು ಭಾರಿ ಕೈಗಾರಿಕೆಗಳ ಕಡೆಗೆ ಮಾತ್ರ ವಿನಿಯೋಗಿಸಿದ್ದಾರೆ ಎಂದು" ಎಂದು ಪನಗರಿಯಾ ಹೇಳಿದ್ದಾರೆ. "ಈ ಮಾದರಿಯಿಂದಾಗಿ ಮಾನವ ಸಂಪನ್ಮೂಲವೇ ಪ್ರಧಾನವಾಗಿದ್ದ ಭಾರತಕ್ಕೆ ಸರಿ ಹೊಂದಲಿಲ್ಲ. ಅನೇಕರು ನಿರುದ್ಯೋಗಿಗಳಾದರೆ, ಸಾಂಪ್ರದಾಯಿಕ ಕೈಗಾರಿಕೆಗಳಲ್ಲಿ ಉದ್ಯೋಗವಕಾಶವೇ ಸೃಷ್ಟಿಯಾಗಲಿಲ್ಲ ಎಂದರು.
ಆಮದು ಕಡೆಗೆ ಒಲವು
ಪನಗರಿಯಾ ಅವರ ಪ್ರಕಾರ, ನೆಹರೂ ಅವರ ಆರ್ಥಿಕ ನೀತಿಗಳಲ್ಲಿ ಆಮದಿನ ಕಡೆಗೆ ಒಲವು ಹೆಚ್ಚಿದ್ದವು. ಇದು ಕೈಗಾರಿಕರಣ ವಿಚಾರಕ್ಕೆ ಬಂದಾಗ ಅಪೇಕ್ಷಿತ ಫಲಿತಾಂಶಗಳನ್ನು ನೀಡಲಿಲ್ಲ. ಸ್ವಾವಲಂಬನೆಯ ಒತ್ತಡದ ಹೊರತಾಗಿಯೂ, ಭಾರತವು ಉಕ್ಕು ಸೇರಿದಂತೆ ಹಲವಾರು ಪ್ರಮುಖ ಸರಕುಗಳಿಗೆ ಆಮದಿನ ಮೊರೆ ಹೋಗಬೇಕಾಗಿತ್ತು. "ಸ್ವಾವಲಂಬನೆಯ ಕಲ್ಪನೆಯು ಉದಾತ್ತವಾದುದು. ಆದರೆ ಭಾರತದ ಆರ್ಥಿಕ ಮತ್ತು ಸಂಪನ್ಮೂಲ ಕೊರತೆಯ ಹಿನ್ನೆಲೆಯಲ್ಲಿ ಅದನ್ನು ಸಾಧಿಸಲಾಗಲಿಲ್ಲ" ಎಂದು ಹೇಳಿದ್ದಾರೆ.
ಕೃಷಿ ಮತ್ತು ಕಾರ್ಮಿಕ ಕೇಂದ್ರಿತ ಕೈಗಾರಿಕೆಗಳನ್ನು ಆರ್ಥಿಕ ಮಾದರಿಯಿಂದ ಹೊರಗಿಡುವುದು ಬಡತನವನ್ನು ಮತ್ತಷ್ಟು ಹೆಚ್ಚಿಸಿತು ಎಂದು ಪನಗರಿಯಾ ವಿಶ್ಲೇಷಿಸಿದ್ದಾರೆ. "ಕೃಷಿಯನ್ನು ಹೆಚ್ಚಾಗಿ ನಿರ್ಲಕ್ಷಿಸಲಾಯಿತು ಮತ್ತು ಲಾಲ್ ಬಹದ್ದೂರ್ ಶಾಸ್ತ್ರ ಅವರ ಅಧಿಕಾರಾವಧಿಯ ನಂತರವೇ ಈ ಕ್ಷೇತ್ರ ಪುನರುಜ್ಜೀವನಗೊಂಡಿತು ಎಂದು ಹೇಳಿದ್ದಾರೆ. .
ಸೋವಿಯತ್ ಮತ್ತು ಸಮಾಜವಾದಿ ನೀತಿಗಳ ಮೇಲೆ ಪ್ರೀತಿ
ಸೋವಿಯತ್ ಮಾದರಿಯ ಬಗ್ಗೆ ನೆಹರೂ ಹೊಂದಿದ್ದ ಪ್ರೀತಿಗೆ ತಕ್ಕ ಹಾಗೆ ಅವರ ಆರ್ಥಿಕ ನೀತಿಗಳು ರೂಪುಗೊಂಡಿದ್ದವು. ಸೋವಿಯತ್ ಶೈಲಿಯ ಯೋಜನೆಯಿಂದ ಪ್ರೇರಿತಗೊಂಡು ಯೋಜನಾ ಆಯೋಗವನ್ನು ಆರ್ಥಿಕ ನಿರ್ಧಾರ ತೆಗೆದುಕೊಳ್ಳುವ ಕೇಂದ್ರವನ್ನಾಗಿ ಮಾಡಲಾಯಿತು. 1930ರ ದಶಕದಲ್ಲಿ ತೀವ್ರ ಸಮಾಜವಾದದ ಕಡೆ ಒಲವು ಹೊಂದಿದ್ದ ನೆಹರೂ ಸ್ವಾತಂತ್ರ್ಯದ ಬಳಿಕ ಪ್ರಾಯೋಗಿಕ ವಿಧಾನಕ್ಕೆಒಗ್ಗಿಕೊಳ್ಳುವುದಕ್ಕೆ ಯತ್ನಿಸಿದ್ದರು. ಆದಾಗ್ಯೂ ಖಾಸಗಿ ವಲಯದ ಬೆಳವಣಿಗೆಗೆ ಸೀಮಿತ ಸ್ಥಳಾವಕಾಶ ಕೊಟ್ಟಿದ್ದರು. ಕೈಗಾರಿಕಾ ವಿಸ್ತರಣೆಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕಾಗಿದ್ದ ಐಡಿಬಿಐ ಮತ್ತು ಯುಟಿಐನಂತಹ ಸಂಸ್ಥೆಗಳನ್ನು ಸರ್ಕಾರದ ನಿಯಂತ್ರಣದಲ್ಲಿಟ್ಟುಕೊಂಡರು.
ನೆಹರೂ ಕೈಗಾರಿಕೋದ್ಯಮಿಗಳ ಮಹತ್ವವನ್ನು ಅಂದಾಜು ಮಾಡಿದ್ದರು. ಆದರೆ ಅವರ ವಿಶಾಲ ಸಮಾಜವಾದಿ ಕಾರ್ಯಸೂಚಿಯನ್ನು ಬೆಂಬಲಿಸಲಷ್ಟೇ ಅವರೆಲ್ಲರ ಬಳಕೆಯಾಯಿತು. ಎನ್ನುತ್ತಾರೆ ಪನಗರಿಯಾ.
ಅಧಿಕಾರಶಾಹಿಯ ಪರಂಪರೆ
ಪನಗರಿಯಾ ಅವರು, ಭಾರತದ ಅಧಿಕಾರಶಾಹಿ ವ್ಯವಸ್ಥೆ ಬಗ್ಗೆ ಕಟು ವಿರೋಧ ಹೊಂದಿದ್ದಾರೆ. ಇದು ವ್ಯವಸ್ಥೆಯ ಅದಕ್ಷತೆಯನ್ನು ಹೆಚ್ಚಿಸಿ ಸುಧಾರಣೆಗಳಿಗೆ ಅಡ್ಡಿಯಾಯಿತು ಎನ್ನುತ್ತಾರೆ ಅವರು. . ಇಂದಿಗೂ ಅಧಿಕಾರ ಶಾಹಿ ಪೂರಕ ಕಾನೂನುಗಳು ಖಾಸಗೀಕರಣ ಅಥವಾ ಇತರ ರಚನಾತ್ಮಕ ಸುಧಾರಣೆಗಳೀಗೆ ತೊಡಕಾಗಿವೆ" ಎಂದು ಅವರು ಹೇಳಿದ್ದಾರೆ.
ಸರ್ಕಾರದಲ್ಲಿ ಕೆಲಸ ಮಾಡಿರುವ ತಮ್ಮ ಸ್ವಂತ ಅನುಭವವನ್ನು ಉಲ್ಲೇಖಿಸಿದ ಪನಗರಿಯಾ, ನರೇಂದ್ರ ಮೋದಿಯವರಂತಹ ಪ್ರಬಲ ಪ್ರಧಾನಿಗೂ ಕೂಡ ತಮ್ಮ ನೀತಿಗಳ ಗುರಿಯನ್ನು ಮುಟ್ಟುವುದಕ್ಕೆ ಅಧಿಕಾರ ಶಾಹಿ ವ್ಯವಸ್ಥೆ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಆಧುನಿಕ ಹೋಲಿಕೆಗಳು
ನೆಹರೂ ಅವರ ಆರ್ಥಿಕ ಮಾದರಿಯ ಪ್ರಸ್ತುತತೆಯ ಬಗ್ಗೆ ಮಾತನಾಡಿದ ಪನಗರಿಯಾ, ಅದರ ಛಾಯೆ ನೀತಿ ನಿರೂಪಣೆ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ. . "ನೆಹರೂ ಯುಗದ ಪರವಾನಗಿ ಮತ್ತು ನಿಯಂತ್ರಣ ಆಡಳಿತ ಮಾದರಿ ಕೊನೆಗೊಳ್ಳಲು ದಶಕಗಳು ಬೇಕಾದವು. 1991ರ ಸುಧಾರಣೆಗಳ ನಂತರವೂ, ಸಮಾಜವಾದಿ ನೀತಿಗಳ ಅವಶೇಷಗಳಿಂದಾಗಿ ವಸ್ತ್ರ ಮತ್ತು ಪಾದರಕ್ಷೆಗಳಂತಹ ಕಾರ್ಮಿಕ-ಕೇಂದ್ರಿತ ಕೈಗಾರಿಕೆಗಳು ಪ್ರಾರಂಭವಾಗಲು ಹೆಣಗಾಡುತ್ತಿದ್ದವು" ಎಂದು ಅವರು ವಿವರಿಸಿದರು.
ಭಾರತ ಮತ್ತು ಚೀನಾ ಹಾಗೂ ದಕ್ಷಿಣ ಕೊರಿಯಾ ದೇಶಗಳ ವ್ಯತಿರಿಕ್ತ ಬೆಳವಣಿಗೆ ಬಗ್ಗೆಯೂ ಪನಗರಿಯಾ ಮಾತನಾಡಿದ್ದಾರೆ. ಆ ದೇಶಗಳು ಬೃಹತ್ ಕೈಗಾರಿಕೆ ಸ್ಥಾಪನೆಗೆ ಮೊದಲು ಕೌಶಲ ಅಭಿವೃದ್ಧಿ ಮತ್ತು ಕಾರ್ಮಿಕ ಆಧಾರಿತ ಕೈಗಾರಿಕೆಗಳಿಗೆ ಆದ್ಯತೆ ನೀಡಿತು. "ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ ಚೀನಾ ತನ್ನ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿಲ್ಲಿಸಿತು. ಹೀಗಾಗಿ ಸಾಮಾಜಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಭಾರತವನ್ನು ಮೀರಿಸಲು ಅವುಗಳಿಗೆ ಸಾಧ್ಯವಾಯಿತು" ಎಂದು ಪನಗರಿಯಾ ಹೇಳಿದ್ದಾರೆ.
ಭವಿಷ್ಯದ ಭರವಸೆಗಳು
ಆರ್ಥಿಕ ನೀತಿಯ ಕಟು ವಿಮರ್ಶೆಯ ಹೊರತಾಗಿಯೂ ಪನಗರಿಯಾ ಅವರು ಭಾರತ ಆರ್ಥಿಕತೆಯ ಭವಿಷ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ದಶಕಗಳಲ್ಲಿ ನಡೆದ ಪ್ರಮುಖ ಸುಧಾರಣೆಯನ್ನು ಪ್ರಸ್ತಾಪಿಸಿದ ಅವರು 2047ರ ವೇಳೆಗೆ ಭಾರತ ಆರ್ಥಿಕತೆಯು 20 ಟ್ರಿಲಿಯನ್ ಡಾಲರ್‌ಗಳಿಗೆ ತಲುಪಬಹುದು ಎಂದು ಊಹಿಸಿದ್ದಾರೆ. . "ವೆಚ್ಚವು ನಿರಂತರವಾಗಿದೆ, ಮತ್ತು ಇನ್ನಷ್ಟು ಸುಧಾರಣೆಗಳು. ಕಾರ್ಮಿಕ ಕಾನೂನು ಬದಲಾವಣೆ ಮತ್ತು ಖಾಸಗೀಕರಣ ತ್ವರಿತಗೊಳಿಸುವ ಮೂಲಕ ಸಮಗ್ರ ಉದ್ಯೋಗವನ್ನು ಸೃಷ್ಟಿಸಬಹುದು ಮತ್ತು ಸುಧಾರಿತ ಜೀವನಮಟ್ಟ ಖಾತ್ರಿಗೊಳಿಸಬಹುದು," ಎಂದು ಹೇಳಿದ್ದಾರೆ.
ಈ ಚರ್ಚೆಯು ನೆಹರೂ ಅವರ ಆರ್ಥಿಕ ಆಯ್ಕೆಗಳು ಮತ್ತು ಭಾರತದ ಅಭಿವೃದ್ಧಿ ಪಥದ ಮೇಲೆ ಅವುಗಳ ಪ್ರಭಾವದ ಮೇಲೆ ಬೆಳಕು ಚೆಲ್ಲಿತು. ಬಡತನವನ್ನು ನಿವಾರಿಸುವ ಮತ್ತು ಭಾರತವನ್ನು ಕೈಗಾರಿಕೀಕರಣಗೊಳಿಸುವ ನೆಹರೂ ಅವರ ಉದ್ದೇಶವನ್ನು ಪನಗರಿಯಾ ಒಪ್ಪಿಕೊಂಡರೂ, ಭಾರಿ ಉದ್ಯಮದ ಕನಸು ವೆಚ್ಚದಾಯಕವಾಗಿತ್ತು. ಇದು ಅಂತರ್ಗತ ಬೆಳವಣಿಗೆಯ ಅವಕಾಶಗಳನ್ನು ಕಳೆದುಕೊಂಡಿತು ಎಂದು ಹೇಳಿದ್ದಾರೆ.