ಏರ್ ಇಂಡಿಯಾ ಉದ್ಯೋಗ ಮೇಳ: 1,800 ಹುದ್ದೆಗೆ 15,000 ಮಂದಿ ಹಾಜರು, ನೂಕುನುಗ್ಗಲು
ಮುಂಬೈನಲ್ಲಿ ಏರ್ ಇಂಡಿಯಾ ಸಂಸ್ಥೆ ಲೋಡರ್‌ಗಳ ನೇಮಕಕ್ಕೆ ನಡೆಸಿದ ಅಭಿಯಾನದಲ್ಲಿ ಅಸಂಖ್ಯ ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು.
ಏರ್ ಇಂಡಿಯಾ ಏರ್‌ಪೋರ್ಟ್ ಸರ್ವಿಸಸ್ ಲಿಮಿಟೆಡ್ ಲೋಡರ್‌ಗಳ ನೇಮಕಕ್ಕೆ ಅರ್ಜಿ ಕರೆದಿತ್ತು. ಸುಮಾರು 1,800 ಖಾಲಿ ಹುದ್ದೆಗಳಿಗೆ ತಮ್ಮ ಸ್ವವಿವರ ಸಲ್ಲಿಸಲು, 15,000 ಕ್ಕೂ ಹೆಚ್ಚು ಜನರು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ವರದಿಯಾಗಿದೆ. ಹುದ್ದೆಗೆ ಕನಿ ಷ್ಠ ವಿದ್ಯಾರ್ಹತೆ ಎಸ್‌ಎಸ್‌ಸಿ /10 ನೇ ತರಗತಿಯಲ್ಲಿ ಪಾಸ್ ಮತ್ತು ಕನಿಷ್ಠ ವಯಸ್ಸು 23 ಆಗಿತ್ತು. ಓವರ್‌ಟೈಮ್ ಮಾಡಿದಲ್ಲಿ ಭತ್ಯೆ ಸೇರಿ ವೇತನ 20,000 ಮತ್ತು 30,000 ರೂ.; ಮೂರು ವರ್ಷ ಕಾಲ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು.
ನಿರುದ್ಯೋಗ ಹೆಚ್ಚಳದ ಪ್ರತಿಬಿಂಬ: ಅರ್ಜಿ ಸಲ್ಲಿಸಲು ಆಗಮಿಸಿದ್ದ ಅಭ್ಯರ್ಥಿಗಳ ಸಂಖ್ಯೆ ಮಾತ್ರವಲ್ಲದೆ, ಕೆಲವು ಅರ್ಜಿದಾರರು ಹೆಚ್ಚಿನ ಅರ್ಹತೆ ಹೊಂದಿದ್ದರು ಮತ್ತು ಅವರಲ್ಲಿ ಅನೇಕರು ಬಹಳ ದೂರದಿಂದ ಆಗಮಿಸಿದ್ದನ್ನು ಪರಿಗಣಿಸಿದರೆ, ಅಭಿಯಾನವು ದೇಶದಲ್ಲಿ ನಿರುದ್ಯೋಗ ಹೆಚ್ಚಳದ ಪ್ರತಿಬಿಂಬದಂತೆ ಇದ್ದಿತ್ತು.
ವರದಿಗಳ ಪ್ರಕಾರ, ಎರಡನೇ ವರ್ಷದ ಬಿಬಿಎ ಮಾಡುತ್ತಿರುವ ಅಭ್ಯರ್ಥಿಯೊಬ್ಬರು 400 ಕಿಮೀ ಪ್ರಯಾಣ ಮಾಡಿದ್ದಾರೆ. ಇನ್ನೊಬ್ಬರು ಬಿಎ ಪದವೀದರ ಹಾಗೂ ರಾಜಸ್ಥಾನದ ಅಲ್ವಾರ್‌ನ ಮೂರನೇ ವ್ಯಕ್ತಿ ಎಂಕಾಂ ಪದವಿ ಹೊಂದಿದ್ದರು.
ನೇಮಕ ಪ್ರಕ್ರಿಯೆಯಲ್ಲಿ ತಪ್ಪು: ಅಭ್ಯರ್ಥಿಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂಬ ಕಲ್ಪನೆ ಸಂಘಟಕರಿಗೆ ಇರಲಿಲ್ಲ. ಅರ್ಜಿದಾರರು ಊಟ, ನೀರು ಇಲ್ಲದೆ ಗಂಟೆಗಟ್ಟಲೆ ಕಾಯಬೇಕಾಯಿತು. ಆನಂತರ ಏರ್ ಇಂಡಿಯಾ ಸಿಬ್ಬಂದಿ ಅಭ್ಯರ್ಥಿಗಳಿಂದ ಸ್ವವಿವರ ಸಂಗ್ರಹಿಸಿ ಸ್ಥಳದಿಂದ ತೆರಳಲು ಸೂಚಿಸಿದರು.
ಏವಿಯೇಷನ್ ಇಂಡಸ್ಟ್ರಿ ಎಂಪ್ಲಾಯೀಸ್ ಗಿಲ್ಡ್‌ನ ಪ್ರಧಾನ ಕಾರ್ಯದರ್ಶಿ ಜಾರ್ಜ್ ಅಬ್ರಾಮ್ ಪ್ರಕಾರ, ಸುಮಾರು 50,000 ಉದ್ಯೋಗಾಕಾಂಕ್ಷಿ ಗಳು ಸಂದರ್ಶನಕ್ಕೆ ಬಂದಿದ್ದರು. ನೇಮಕ ಪ್ರಕ್ರಿಯೆಯನ್ನು ತಪ್ಪಾಗಿ ನಿರ್ವಹಿಸಲಾಗಿದೆ. ಇಂತಹ ಅಭಿಯಾನಗಳನ್ನು ನಡೆಸದಂತೆ ಕಂಪನಿಗೆ ಎಚ್ಚರಿಕೆ ನೀಡಿದ್ದೇವೆ. ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತು ಎಂದರೆ ಪೊಲೀಸರಿಗೆ ಕರೆ ಮಾಡಬೇಕಾಯಿತು.ಇದು ನಿರುದ್ಯೋಗ ಸಮಸ್ಸಯೆ ಎಷ್ಟು ತೀವ್ರವಾಗಿದೆ ಎಂಬುದನ್ನು ತೋರಿಸುತ್ತದೆ ಎಂದರು.
ಅಂಕಲೇಶ್ವರ ಘಟನೆ: ಗುಜರಾತ್‌ನ ಅಂಕಲೇಶ್ವರದಲ್ಲಿ ಖಾಸಗಿ ಸಂಸ್ಥೆಯೊಂದರ 10 ಹುದ್ದೆಗಳಿಗೆ ಸುಮಾರು 2,000 ಜನ ಆಗಮಿಸಿದ ಇಂತ ಹುದೇ ಘಟನೆಯ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಮುಂಬೈ ಘಟನೆ ನಡೆದಿದೆ. ಅಂಕಲೇಶ್ವರ ವಿಡಿಯೋಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ʻಬಿಜೆಪಿಯ ಗುಜರಾತ್ ಮಾದರಿಯನ್ನುಇದು ಬಹಿರಂಗಪಡಿಸಿದೆ. ದೇಶದಾದ್ಯಂತ ಈ ಮಾದರಿಯು ನಿರುದ್ಯೋಗವನ್ನು ಹೇರುತ್ತಿದೆ,ʼ ಎಂದು ಹೇಳಿದೆ.
ಮುಂಬೈ ಉತ್ತರ ಸೆಂಟ್ರಲ್‌ನ ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ಪ್ರತಿಕ್ರಿಯಿಸಿ, ʻಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಯುವಜನರು ರಷ್ಯಾ ಮತ್ತು ಇಸ್ರೇಲಿಗೆ ಸೇನೆಗೆ ಸೇರಲೂ ಸಿದ್ಧವಾಗಿದ್ದಾರೆ,ʼ ಎಂದು ಎಕ್ಸ್ ನಲ್ಲಿ ಬರೆದಿ ದ್ದಾರೆ.