ಮುಂಬೈ ಗುದ್ದೋಡು ಪ್ರಕರಣ: ಆರೋಪಿ ವಿರುದ್ಧ ಲುಕ್ಔಟ್ ಸುತ್ತೋಲೆ

Update: 2024-07-08 08:39 GMT

ಮುಂಬೈನ ವರ್ಲಿ ಪ್ರದೇಶದಲ್ಲಿ ಮಹಿಳೆಯೊಬ್ಬರಿಗೆ ಗುದ್ದಿ ಸಾಯಿಸಿದ ಬಿಎಂಡಬ್ಲ್ಯು ಕಾರಿನ ಚಾಲಕನ ವಿರುದ್ಧ ಪೊಲೀಸರು ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ (ಜುಲೈ 8) ತಿಳಿಸಿದ್ದಾರೆ. 

ಆರೋಪಿ ಮಿಹಿರ್ ಶಾ, ನೆರೆಯ ಪಾಲ್ಘರ್ ಜಿಲ್ಲೆಯ ಶಿವಸೇನೆ ಮುಖಂಡರೊಬ್ಬರ ಪುತ್ರ. ವರ್ಲಿ ಕೋಳಿವಾಡ ನಿವಾಸಿ ಕಾವೇರಿ ನಖ್ವಾ (45) ಅವರು ಪತಿ ಪ್ರದೀಪ್ ಅವರೊಂದಿಗೆ ಡಾಕ್ಟರ್ ಅನ್ನಿ ಬೆಸೆಂಟ್ ರಸ್ತೆಯಲ್ಲಿ ಹೋಗುತ್ತಿದ್ದಾಗ, ಮಿಹಿರ್ ಶಾ ಚಲಾಯಿಸುತ್ತಿದ್ದ ಕಾರು ಭಾನುವಾರ ಬೆಳಗ್ಗೆ 5.30 ರ ಸುಮಾರಿಗೆ ದಂಪತಿಗಳ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕಾರು ಮಹಿಳೆಯನ್ನು 2 ಕಿಮೀಗೂ ಹೆಚ್ಚು ದೂರ ಎಳೆದೊಯ್ದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಕಾವೇರಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ವೈದ್ಯರು ಸಾವಿಗೀಡಾಗಿದ್ದಾರೆ ಎಂದು ಘೋಷಿಸಿದರು.

ಆರೋಪಿ ಪರಾರಿ:  ಅಪಘಾತದ ನಂತರ ಆರೋಪಿ ಬಾಂದ್ರಾ-ವರ್ಲಿ ಸೀ ಲಿಂಕ್ ಕಡೆಗೆ ಹೋಗಿದ್ದಾನೆ. ಆನಂತರ ಕಾರು ಮತ್ತು ಜೊತೆಯಲ್ಲಿದ್ದ ಚಾಲಕ ರಾಜಋಷಿ ಬಿಡಾವತ್ ಅವರನ್ನು ಬಾಂದ್ರಾ ಪ್ರದೇಶದ ಕಲಾ ನಗರದ ಬಳಿ ಬಿಟ್ಟು ಆಟೋರಿಕ್ಷಾದಲ್ಲಿ ಪರಾರಿಯಾದ ಎಂದು ಅಧಿಕಾರಿ ತಿಳಿಸಿದ್ದಾರೆ. 

ಮಗ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಆತನ ತಂದೆ ರಾಜೇಶ್ ಶಾ ಮತ್ತು ಚಾಲಕ ಬಿಡಾವತ್ ಅವರನ್ನು ಭಾನುವಾರ ವರ್ಲಿ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಶಾ ಪಾಲ್ಘರ್‌ನ ಶಿವಸೇನೆ ನಾಯಕ. ಕಾರು ಅವರ ಹೆಸರಿದಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

6 ಪೊಲೀಸ್ ತಂಡಗಳಿಂದ ಹುಡುಕಾಟ: ʻಮಿಹಿರ್ ಶಾ ದೇಶದಿಂದ ಪಲಾಯನ ಮಾಡುವ ಸಾಧ್ಯತೆ ಇರುವುದರಿಂದ, ಮುಂಬೈ ಪೊಲೀಸರು ಭಾನುವಾರ ಸಂಜೆ ಅವರ ವಿರುದ್ಧ ಎಲ್ಒಸಿ ಹೊರಡಿಸಿದ್ದಾರೆ. ಆರೋಪಿ ಪತ್ತೆಗೆ ಆರು ತಂಡ ರಚಿಸಿದ್ದಾರೆ ಎಂದು ಅವರು ಹೇಳಿದರು.

ಘಟನೆಗೆ ಕೆಲವು ಗಂಟೆಗಳ ಮೊದಲು ಜುಹು ಪ್ರದೇಶದ ಬಾರ್‌ನಲ್ಲಿ ಮಿಹಿರ್ ಕಾಣಿಸಿಕೊಂಡಿದ್ದರಿಂದ, ಅಪಘಾತದ ಸಮಯದಲ್ಲಿ ಆತ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಬಾರ್‌ನ 18,000 ರೂ. ಬಿಲ್ ಅನ್ನು ಪತ್ತೆ ಮಾಡಿದ್ದಾರೆ ಮತ್ತು ಅದನ್ನು ಪರಿಶೀಲಿಸುತ್ತಿದ್ದಾರೆ. ಬಾರ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಮಿಹಿರ್ ಪಬ್‌ನಲ್ಲಿ ರೆಡ್ ಬುಲ್ ಎನರ್ಜಿ ಡ್ರಿಂಕ್ ಸೇವಿಸಿದ್ದರು; ಮದ್ಯ ಸೇವಿಸಿರಲಿಲ್ಲ ಎಂದು ವಾಯ್ಸ್ ಗ್ಲೋಬಲ್ ತಪಸ್ ಬಾರ್ ಮಾಲೀಕ ಕರಣ್ ಶಾ ಹೇಳಿದ್ದಾರೆ ಎಂದು ವರದಿಯಾಗಿದೆ.

ಸ್ಥಳೀಯ ನ್ಯಾಯಾಲಯಕ್ಕೆ ಹಾಜರು: ಬಂಧಿತರನ್ನು ಸ್ಥಳೀಯ ನ್ಯಾಯಾಲಯಕ್ಕೆ ಮಧ್ಯಾಹ್ನ ಹಾಜರುಪಡಿಸಲಾಗುವುದು. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ 105 (ಕೊಲೆಯಲ್ಲದ ನರಹತ್ಯೆ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನೂನು ಎಲ್ಲರಿಗೂ ಸಮಾನ: ಸಿಎಂ ಶಿಂಧೆ- ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ, ಕಾನೂನು ಎಲ್ಲರಿಗೂ ಸಮಾನ ಮತ್ತು ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಅಪಘಾತದಲ್ಲಿ ಪಾಲ್ಗೊಂಡಿರುವ ವ್ಯಕ್ತಿ ಶಿವಸೇನೆ ಮುಖಂಡನ ಮಗ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ʻಕಾನೂನು ಎಲ್ಲರಿಗೂ ಸಮಾನ. ಸರಕಾರ ಎಲ್ಲ ಪ್ರಕರಣಗಳನ್ನು ಒಂದೇ ರೀತಿಯಲ್ಲಿ ನೋಡುತ್ತದೆ. ಈ ಅಪಘಾತಕ್ಕೆ ಪ್ರತ್ಯೇಕ ನಿಯಮ ವಿಲ್ಲ.ಪೊಲೀಸರು ಯಾರನ್ನೂ ರಕ್ಷಿಸುವುದಿಲ್ಲ,ʼ ಎಂದು ಹೇಳಿದರು. 

ವರ್ಲಿ ವಿಧಾನಸಭೆ ಕ್ಷೇತ್ರದ ಶಾಸಕ, ಶಿವಸೇನಾ (ಯುಬಿಟಿ) ಪಕ್ಷದ ಆದಿತ್ಯ ಠಾಕ್ರೆ,ʻಆರೋಪಿಯ ರಾಜಕೀಯ ಹಿನ್ನೆಲೆ ಬಗ್ಗೆ ಮಾತಾಡುವುದಿಲ್ಲ.ಆದರೆ, ಪೊಲೀಸರು ಶೀಘ್ರವಾಗಿ ಆರೋಪಿಯನ್ನು ಹಿಡಿದು ನ್ಯಾಯ ಕೊಡಿಸುತ್ತಾರೆ. ಆಡಳಿತ ರಾಜಕೀಯ ಆಶ್ರಯ ನೀಡುವುದಿಲ್ಲಎಂದು ನಾನು ಭಾವಿಸುತ್ತೇನೆ,ʼ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

Tags:    

Similar News