ಅಹಮದಾಬಾದ್-ಬರೌನಿ ಎಕ್ಸ್‌ಪ್ರೆಸ್ ರೈಲಿನ ಕೊನೆಯ ಬೋಗಿಯಲ್ಲಿ ಬೆಂಕಿ

ಇದು ಬೆಂಕಿಯ ಅನಾಹುತ ಅಲ್ಲ. ಕೊನೇ ಬೋಗಿಯ ಪವರ್-ಕಮ್-ಲಗೇಜ್ ಕಾರ್‌ನಿಂದ ಹೊಗೆ ಕಂಡು ಬಂತು ಎಂದು ರೈಲ್ವೆ ಇಲಾಖೆಯು ಸ್ಪಷ್ಟಪಡಿಸಿದೆ.;

Update: 2025-04-01 06:35 GMT

ಮಧ್ಯಪ್ರದೇಶದ ಖಂಡ್ವಾ ಮತ್ತು ಇಟಾರ್ಸಿ ವಿಭಾಗದ ನಡುವೆ ಸಂಚರಿಸುತ್ತಿದ್ದ ಅಹಮದಾಬಾದ್-ಬರೌನಿ ಎಕ್ಸ್‌ಪ್ರೆಸ್ ರೈಲಿನ ಕೊನೆಯ ಬೋಗಿಯಲ್ಲಿ ಸೋಮವಾರ ಸಂಜೆ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತ್ತು. ಆದರೆ, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ಮಧ್ಯ ರೈಲ್ವೆ (WCR) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ (CPRO) ಹರ್ಷಿತ್ ಶ್ರೀವಾಸ್ತವ ಈ ಕುರಿತು ಮಾಹಿತಿ ನೀಡಿದ್ದು,. ಸಂಜೆ 5:15ರ ಸುಮಾರಿಗೆ ಬೆಂಕಿ ನಂದಿಸಲಾಯಿತು. ಕೇವಲ ಐದು ನಿಮಿಷಗಳ ನಂತರ, ಸಂಜೆ 5:20ಕ್ಕೆ ರೈಲು ಮತ್ತೆ ಬರೌನಿ (ಬಿಹಾರ್) ಕಡೆ ತನ್ನ ಪಯಣ ಮುಂದುವರಿಸಿತು ಎಂದು ಹೇಳಿದ್ದಾರೆ.

"ಇದು ಬೆಂಕಿ ಅನಾಹುತ ಅಲ್ಲ. ಕೊನೇ ಬೋಗಿಯ ಪವರ್-ಕಮ್-ಲಗೇಜ್ ಕಾರ್‌ನಿಂದ ಹೊಗೆ ಹೊರಬರುತ್ತಿತ್ತು. ತಕ್ಷಣ ಅದನ್ನು ನಂದಿಸಲಾಯಿತು,'' ಅವರು ಹೇಳಿದ್ದಾರೆ.

ಈ ಘಟನೆಯಿಂದ ಕೆಲ ಕಾಲ ರೈಲ್ವೆ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಆದರೆ ಶೀಘ್ರವೇ ಸಮಸ್ಯೆ ನಿವಾರಣೆಗೊಂಡಿತು.

ಕಾರಣ ನಿಗೂಢ

ಈ ಘಟನೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರಗಳಲ್ಲಿ ಬೋಗಿ ಹೊಗೆಯಿಂದ ತುಂಬಿಕೊಂಡಿರುವುದು ಕಂಡು ಬಂದಿದೆ.

ಭೋಪಾಲ್ ವಿಭಾಗದ ಪಿಆರ್‌ಒ ನವಲ್ ಅಗ್ರವಾಲ್ ಮಾಡಿ, "ಧರ್ಮಕುಂಡಿ ಮತ್ತು ದುಲಾರಿಯಾ ರೈಲು ನಿಲ್ದಾಣಗಳ ನಡುವೆ ಈ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಕೊನೆಯ ಬೋಗಿಯನ್ನು ರೈಲಿನಿಂದ ಬೇರ್ಪಡಿಸಿ ಬೆಂಕಿ ನಂದಿಸಲಾಯಿತು. ಬಳಿಕ ರೈಲು ತನ್ನ ಪ್ರಯಾಣ ಮುಂದುವರಿಸಿತು,'' ಎಂದು ಹೇಳಿದರು.

ಘಟನೆಯ ಕುರಿತಾಗಿ ಅಧಿಕೃತ ತನಿಖೆ ಪ್ರಾರಂಭವಾಗಿದೆ ಎಂದು ಅಗ್ರವಾಲ್ ತಿಳಿಸಿದರು. ಪಶ್ಚಿಮ ರೈಲ್ವೆಯ ಅಧಿಕಾರಿಗಳು ಈ ತನಿಖೆಯಲ್ಲಿ ಸಹಕರಿಸಲಿದ್ದಾರೆ ಎಂದು ಶ್ರೀವಾಸ್ತವ ಹೇಳಿದರು.

Tags:    

Similar News