Mahakumbh Mela : ಮಾಘ ಪೂರ್ಣಿಮೆ; ಲಕ್ಷಾಂತರ ಭಕ್ತರಿಂದ ಪವಿತ್ರ ಸ್ನಾನ
Mahakumbh Mela : ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆಯಾಗಿದ್ದು, ಅವರು ದಿನಕ್ಕೆ 12 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕುಂಭ ಪ್ರದೇಶಕ್ಕೆ ಮಂಗಳವಾರ ಮುಂಜಾನೆ 4 ಗಂಟೆಯಿಂದ ಯಾವುದೇ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿದೆ.;
ಪ್ರಯಾಗ್ರಾಜ್: ಬುಧವಾರ ಮುಂಜಾನೆ ಮಾಘ ಪೂರ್ಣಿಮಾ ಅಂಗವಾಗಿ ಕುಂಭ ಮೇಳ ನಡೆಯುತ್ತಿರುವ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಮಾಡಿದರು. ಕಟ್ಟೆಚ್ಚರ ಭದ್ರತೆ ಹಾಗೂ ಸಂಚಾರ ನಿಯಂತ್ರಣ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಮೂಲಗಳ ಪ್ರಕಾರ 1.3 ಕೋಟಿ ಇದುವರೆಗೆ ಪುಣ್ಯ ಸ್ನಾನ ಮಾಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಮಾಘ ಹುಣ್ಣಿಮೆ ಸ್ನಾನವು ಜಗತ್ತಿನ ಅತಿ ದೊಡ್ಡ ಆಧ್ಯಾತ್ಮಿಕ ಸಮಾರಂಭವಾದ ಮಹಾ ಕುಂಭಮೇಳದ ನಾಲ್ಕನೇ ಪವಿತ್ರ ಸ್ನಾನ. ಈ ಪವಿತ್ರ ಸ್ನಾನದ ಮೂಲಕ ಮಾಸಾದ್ಯಂತ ಮಾಡಿರುವ ಕಲ್ಪವಾಸ ವೃತ ಕೊನೆಯ ದಿನವಾಗಿದೆ. ಹೀಗಾಗಿ ಸುಮಾರು 10 ಲಕ್ಷ ಕಲ್ಪವಾಸಿಗಳು ಈ ಸ್ನಾನ ಮುಗಿದ ಬಳಿಕ ಕುಂಭ ಮಳದ ಜಾಗದಿಂದ ಹೊರಡಲಿದ್ದಾರೆ.
ನೂರಾರು ಭಕ್ತರು ತ್ರಿವೇಣಿ ಸಂಗಮದ ಕಡೆಗೆ ಬಂದು ಪುಣ್ಯ ಸ್ನಾನ ಮಾಡಿದ್ದಾರೆ. ಅದೇ ಸ್ಥಳದಲ್ಲಿ ಕಳೆದ ತಿಂಗಳು ಮೌನಿ ಅಮಾವಾಸ್ಯೆಯ ಅಮೃತ ಸ್ನಾನದ ವೇಳೆ ಕಾಲ್ತುಳಿತ ಸಂಭವಿಸಿ 30 ಮಂದಿ ಮೃತಪಟ್ಟಿದ್ದರು. ಈ ಬಾರಿ ಯಾವುದೇ ಅನಾಹುತ ಸಂಭವಿಸದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಸಂಚಾರ, ಜನದಟ್ಟಣೆ ನಿಯಂತ್ರಣ
ಭಕ್ತರು ಸುಗಮವಾಗಿ ಪುಣ್ಯ ಸ್ನಾನ ಮಾಡುವಂತೆ ಮತ್ತು ಯಾವುದೇ ಸಮಸ್ಯೆ ಎದುರಾಗದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಭಕ್ತರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಲು ಮತ್ತು ನಿಗದಿತ ಪಾರ್ಕಿಂಗ್ ಪ್ರದೇಶಗಳನ್ನು ಮಾತ್ರ ಬಳಸುವಂತೆ ಮಾಡಲಾಗಿದೆ.
ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆಯಾಗಿದ್ದು, ಅವರು ದಿನಕ್ಕೆ 12 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕುಂಭ ಪ್ರದೇಶಕ್ಕೆ ಮಂಗಳವಾರ ಮುಂಜಾನೆ 4 ಗಂಟೆಯಿಂದ ಯಾವುದೇ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಯಾಗರಾಜ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾನು ಭಾಸ್ಕರ್ ಮಾತನಾಡಿ, ಭಾರೀ ಜನಸ್ತೋಮ ನಿಯಂತ್ರಿಸಲು ವಿಶೇಷ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಶಹರದ ಪ್ರವೇಶ ಮಾರ್ಗಗಳಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು, ಪಕ್ಕದ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳಿಂದ ನೇರ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಶಟಲ್ ಬಸ್ಗಳ ವ್ಯವಸ್ಥೆ
ಉತ್ತರ ಪ್ರದೇಶ ಸಾರಿಗೆ ಇಲಾಖೆ 1,200 ಹೆಚ್ಚುವರಿ ಶಟಲ್ ಬಸ್‌ಗಳನ್ನು ವ್ಯವಸ್ಥೆ ಮಾಡಿದೆ. ಪ್ರತಿಯೊಂದು ಬಸ್ 10 ನಿಮಿಷಗಳಿಗೊಮ್ಮೆ ಸಾಗಲಿದೆ.
ಸಿಎಂ ಯೋಗಿ ಮೇಲ್ವಿಚಾರಣೆ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂಜಾನೆ 4 ಗಂಟೆಯಿಂದಲೇ ಪರಿಸ್ಥಿತಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಡಿಜಿಪಿ ಪ್ರಶಾಂತ್ ಕುಮಾರ್, ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಸೇರಿದಂತೆ ಅಧಿಕಾರಿಗಳು ಲಕ್ನೋದಲ್ಲಿ ವಾರ್ ರೂಮ್‌ನಲ್ಲಿ ಲಭ್ಯರಿದ್ದಾರೆ.
ಯೋಗಿ ಆದಿತ್ಯನಾಥ್ ಮಾಘಿ ಪೂರ್ಣಿಮಾ ಅಂಗವಾಗಿ ಭಕ್ತರು ಮತ್ತು ಧಾರ್ಮಿಕ ಗುರುಗಳಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
ಮಹಾ ಕುಂಭ ಮೇಳದಲ್ಲಿಇನ್ನು ಕೇವಲ 14 ದಿನಗಳು ಉಳಿದಿದ್ದು, ಜನವರಿ 13 ರಿಂದ ಇದುವರೆಗೆ 45 ಕೋಟಿಗಿಂತ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಮಹಾ ಕುಂಭವು ಫೆಬ್ರವರಿ 26ರಂದು ಮಹಾ ಶಿವರಾತ್ರಿ ಅಂಗವಾಗಿ ಅಂತ್ಯಗೊಳ್ಳಲಿದೆ.