Manmohan Singh Death | ಬಿಜೆಪಿ- ಕಾಂಗ್ರೆಸ್‌ ಮಧ್ಯೆ ಸಮಾಧಿ ಸ್ಮಾರಕ ವಾಕ್ಸಮರ

ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿರುವ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಸ್ಮಾರಕ ನಿರ್ಮಿಸುವ ಸ್ಥಳದಲ್ಲೇ ನೆರವೇರಿಸಬೇಕು ಎಂದು ಕಾಂಗ್ರೆಸ್‌ ಮನವಿ ಮಾಡಿತ್ತು. ಈ ವಿಚಾರವಾಗಿ ಕಾಂಗ್ರೆಸ್‌-ಬಿಜೆಪಿ ನಡುವೆ ಕೆಸರೆರಚಾಟ ನಡೆದಿದೆ.

Update: 2024-12-28 08:26 GMT
ನವದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಆದರೆ, ಅಂತ್ಯಕ್ರಿಯೆಗೂ ಮುನ್ನವೇ ಸ್ಮಾರಕದ ನಿರ್ಮಾಣದ ಪ್ರಸ್ತಾವ ವಿವಾದದ ಸ್ವರೂಪ ಪಡೆದುಕೊಂಡಿದೆ.

ಡಾ ಮನಮೋಹನ್‌ ಸಿಂಗ್ ಸ್ಮಾರಕ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಲು ಜಾಗ ಮಂಜೂರು ಮಾಡಬೇಕು ಎಂದು ಶುಕ್ರವಾರ ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಗೆ ಮನವಿ ಮಾಡಿದ್ದರು.

ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆಯಾದ ಸ್ಥಳದಲ್ಲಿಯೇ ಅವರ ಸ್ಮಾರಕ ನಿರ್ಮಿಸುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ ಎಂದು ಗಮನ ಸೆಳೆದಿದ್ದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಗೃಹ ಸಚಿವಾಲಯ, 2-3 ದಿನದಲ್ಲಿ ಜಾಗ ಮಂಜೂರು ಮಾಡುವ ಕುರಿತು ಪರಿಶೀಲಿಸಲಾಗುವುದು. ನಿಗಮ ಬೋಧ್ ಘಾಟ್‌ನಲ್ಲಿಯೇ ವಿಧಿವಿಧಾನಗಳು ನೆರವೇರಲಿ ಎಂದು ತಿಳಿಸಿತ್ತು. ಈ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಮನವಿ ಏನು?

ದೇಶದ ಅರ್ಥ ವ್ಯವಸ್ಥೆಯನ್ನು ಬಲಪಡಿಸಿ, ದೇಶದ ಸೇವೆಗಾಗಿ ಬದುಕನ್ನೇ ಮುಡಿಪಾಗಿಟ್ಟಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಹಾಗೂ ಸ್ಮಾರಕ ಸ್ಥಳ ನಿಗದಿಪಡಿಸಬೇಕು ಎಂದು ಕಾಂಗ್ರೆಸ್‌ ಮನವಿ ಮಾಡಿತ್ತು.

ಇದಕ್ಕೆ ಸಂಬಂಧಿಸಿದಂತೆ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಕೇಂದ್ರ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮಾರಕ ಕರ್ಮಭೂಮಿ(ಅಟಲ್‌ ಸಮಾಧಿ ಸ್ಥಳ)ಯಂತೆ ಮನಮೋಹನ ಸಿಂಗ್ ಸ್ಮಾರಕ ನಿರ್ಮಾಣಕ್ಕೆ ಜಾಗ ಗುರುತಿಸಬೇಕು. ಈಗಾಗಲೇ ರಾಜೀವ್‌ ಗಾಂಧಿ ಸಮಾಧಿ ಸ್ಥಳ ವೀರಭೂಮಿ, ಇಂದಿರಾ ಗಾಂಧಿ ಸಮಾಧಿ ಸ್ಥಳವಾದ ಶಕ್ತಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಹಾಗಾಗಿ ನಿಗಮ ಬೋಧ್ ಘಾಟ್‌ನಲ್ಲಿ ಮನಮೋಹನ್‌ ಸಿಂಗ್ ಅಂತ್ಯಕ್ರಿಯೆಯ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು.

ದೇಶದ ಮೊದಲ ಸಿಖ್ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನಿಗಮಬೋಧ್ ಘಾಟ್ನಲ್ಲಿಯೇ ಅಂತ್ಯಸಂಸ್ಕಾರ ಮಾಡುವುದಾಗಿ ಘೋಷಿಸುವ ಮೂಲಕ ಸಮುದಾಯವನ್ನು ಕೇಂದ್ರ ಸರ್ಕಾರ ಅವಮಾನಿಸುತ್ತಿದೆ ಎಂದು ಟೀಕಿಸಿದ್ದರು.

ಕೊಳಕು ರಾಜಕೀಯ ಎಂದ ಬಿಜೆಪಿ

‌ಅದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಡಾ.ಮನಮೋಹನ್ ಸಿಂಗ್ ಸ್ಮಾರಕ ವಿಚಾರದಲ್ಲಿ ಕಾಂಗ್ರೆಸ್ ಕೊಳಕು ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಸಾಕಷ್ಟು ಎಡವಟ್ಟುಗಳನ್ನು ಮಾಡಿದೆ. ಮಾಜಿ ಪ್ರಧಾನಿ ನರಸಿಂಹ ರಾವ್ ಮರಣದ ನಂತರ ಕಾಂಗ್ರೆಸ್ಸಿನವರು ಹೇಗೆ ನಡೆದುಕೊಂಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಕಿಡಿಕಾರಿದೆ.

ಮಾಜಿ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರನ್ನು ಕಾಂಗ್ರೆಸ್‌ ಹೇಗೆ ನಡೆಸಿಕೊಂಡಿದೆ ಎಂದು ಸ್ವತಃ ಅವರ ಪುತ್ರಿಯೇ ಟ್ವೀಟ್ ಮಾಡಿದ್ದರು ಎಂದು ಬಿಜೆಪಿ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ 2 ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿ ಸಂತಾಪ ಸೂಚಕ ನಿರ್ಣಯ ಅಂಗೀಕರಿಸಲಾಗಿತ್ತು. ಸಭೆಯ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಮನಮೋಹನ್ ಸಿಂಗ್ ಕುಟುಂಬದವರಿಗೆ ಸ್ಮಾರಕ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ್ದರು. ಸ್ಮಾರಕ ನಿರ್ಮಾಣದ ಭರವಸೆಯನ್ನು ಕುಟುಂಬ ಒಪ್ಪಿಕೊಂಡಿತ್ತು.

ಸ್ಮಾರಕ ನಿರ್ಮಾಣದಲ್ಲಿ ರಾಜಕೀಯ ಬಿಡಿ

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅಂತ್ಯಕ್ರಿಯೆ ಮತ್ತು ಸ್ಮಾರಕದ ವಿಚಾರವಾಗಿ ರಾಜಕೀಯ ಮಾಡಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷ ಆಗ್ರಹಿಸಿವೆ.

ಈ ಕುರಿತು ʼಎಕ್ಸ್‌ʼನಲ್ಲಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, 'ದೇಶದ ಮಾಜಿ ಪ್ರಧಾನಿಯನ್ನು ಗೌರವಿಸುವ ಸಾಂಪ್ರದಾಯವನ್ನು ಕೇಂದ್ರ ಸರ್ಕಾರ ಎತ್ತಿಹಿಡಿಯಬೇಕು. ಈ ವಿಷಯದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

ಮನಮೋಹನ ಸಿಂಗ್ ಅವರ ಸ್ಮಾರಕವನ್ನು ರಾಜ್‌ಘಾಟ್‌ನಲ್ಲಿ ನಿರ್ಮಿಸಬೇಕು. ಬಿಜೆಪಿಯು ತನ್ನ ಸಂಕುಚಿತ ಮನೋಭಾವನೆ ಬಿಡಬೇಕು. ನಕಾರಾತ್ಮಕ ಧೋರಣೆಯನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಬಿಎಸ್‌ಪಿ ಅಧ್ಯಕ್ಷ ಮಾಯಾವತಿ ಕೂಡ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು, ದೇಶದ ಮೊದಲ ಸಿಖ್ ಪ್ರಧಾನಿ ಮನಮೋಹನ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಕುಟುಂಬದವರು ಇಚ್ಛಿಸುವ ಸ್ಥಳದಲ್ಲಿಯೇ ನಡೆಸಬೇಕು ಎಂದು ಮನವಿ ಮಾಡಿದೆ. ಸಿಂಗ್ ಅವರ ಕುಟುಂಬದ ಭಾವನೆಗಳನ್ನು ಗೌರವಿಸಬೇಕು. ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರು ಗುರುವಾರ ಮೃತಪಟ್ಟಿದ್ದರು.

Tags:    

Similar News