ಮಹಾರಾಷ್ಟ್ರ: ಮಹಾಯುತಿ ಒಕ್ಕೂಟದಲ್ಲಿ ಬಿರುಕು
ಸಂಪುಟ ವಿಸ್ತರಣೆ ಮತ್ತು ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಮತ್ತಿತರ ಬಗೆಹರಿಯದ ಸಮಸ್ಯೆಗಳಿಂದ ಮಹಾಯುತಿ ಒಕ್ಕೂಟದಲ್ಲಿ ಅಪಶ್ರುತಿ ಮತ್ತು ಬಿರುಕು ಕಾಣಿಸಿಕೊಂಡಿದೆ.;
ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಒಕ್ಕೂಟದಲ್ಲಿ ಆಂತರಿಕ ಘರ್ಷಣೆ, ಸಚಿವ ಸಂಪುಟದ ವಿಸ್ತರಣೆ ಮತ್ತು ರಾಜ್ಯಸಭೆಗೆ ಅಭ್ಯರ್ಥಿ ಆಯ್ಕೆಯಂಥ ಬಗೆಹರಿಯದ ಸಮಸ್ಯೆಗಳ ಹಿನ್ನೆಲೆಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ.
ತೆರವಾದ ರಾಜ್ಯಸಭೆ ಸ್ಥಾನಕ್ಕೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರ ನೇಮಕದಿಂದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಉಂಟಾಗಿದ್ದು,ಆಂತರಿಕ ಭಿನ್ನಾಭಿಪ್ರಾಯ ಬಹಿರಂಗಗೊಂಡಿದೆ. ರಾಜ್ಯಸಭೆ ಸ್ಥಾನದ ಆಕಾಂಕ್ಷಿಯಾಗಿದ್ದ ಹಿರಿಯ ನಾಯಕ ಛಗನ್ ಭುಜಬಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬದಿಗೆ ಸರಿಸಿದ್ದಾರೆ: ಪ್ರಮುಖ ಒಬಿಸಿ ನಾಯಕರಾದ ಭುಜಬಲ್ ಅವರು ಪಕ್ಷದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ತಮ್ಮನ್ನು ಬದಿಗೆ ಸರಿಸಲಾಗಿದೆ ಎಂಬ ಭಾವನೆ ವ್ಯಕ್ತಪಡಿಸಿದರು. ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಗಳ ಟಿಕೆಟ್ ಹಂಚಿಕೆಯ ನ್ಯಾಯಸಮ್ಮತತೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.
ʻಟಿಕೆಟ್ ನೀಡದಿರಲು ಅವರಿಗೆ ಕಾರಣಗಳಿರಬಹುದು. ಕೆಲವೊಮ್ಮೆ, ಇದು ವಿಧಿಲಿಖಿತ ಅಥವಾ ಬೇರಾವುದೋ ಒತ್ತಾಯʼ ಎಂದು ಹೇಳಿದರು. ವಂಶಪಾರಂಪರ್ಯ ರಾಜಕೀಯ ಇದರಲ್ಲಿ ಪಾತ್ರ ವಹಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಲೋಕಸಭೆ ಮತ್ತು ರಾಜ್ಯಸಭೆ ಟಿಕೆಟ್‌ಗೆ ಸಂಬಂಧಿಸಿದಂತೆ ನಿಮಗೆ ಅನ್ಯಾಯವಾಗಿದೆಯೇ ಎಂಬ ಪ್ರಶ್ನೆಗೆ, ʻಈ ಪ್ರಶ್ನೆಯನ್ನು ಅವರಿಗೆ ಕೇಳಬೇಕುʼ ಎಂದು ಹೇಳಿದರು.
ʻಸಂಸದನಾಗುವುದು ನನ್ನ ಆಕಾಂಕ್ಷೆ. ಅದಕ್ಕಾಗಿಯೇ ನಾಸಿಕ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಾಗಿದ್ದೆ. ನನ್ನ ಟಿಕೆಟ್ ನ್ನು ದೆಹಲಿಯಲ್ಲಿ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದ್ದರಿಂದ, ಪ್ರಚಾರ ಆರಂಭಿಸಿದೆ. ಆದರೆ, ಹೆಸರನ್ನು ಘೋಷಿಸಲು ಒಂದು ತಿಂಗಳು ಎಳೆದಾಡಿದರು. ಅವಮಾನ ಆಗಿದ್ದರಿಂದ ಪ್ರಯತ್ನ ನಿಲ್ಲಿಸಿದೆ,ʼ ಎಂದು ಭುಜಬಲ್ ಹೇಳಿದರು.
ನಾಸಿಕ್ ಟಿಕೆಟ್ ಅಂತಿಮವಾಗಿ ಶಿವಸೇನೆಯ ಹೇಮಂತ್ ಗೋಡ್ಸೆ ಅವರ ಪಾಲಾಗಿ, ಅವರು ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಶಿವಸೇನೆಯ (ಯುಬಿಟಿ) ರಾಜಭಾವು ವಾಜೆ ವಿರುದ್ಧ ಸೋತರು.
ಅಸಮಾಧಾನ ಕಡಿಮೆಗೊಳಿಸುವ ಪ್ರಯತ್ನ: ಅಜಿತ್ ಪವಾರ್ ಪಕ್ಷದಲ್ಲಿನ ಆಂತರಿಕ ಅಸಮಾಧಾನವನ್ನು ಕಡಿಮೆಗೊಳಿಸಲು ಶುಕ್ರವಾರ ಪ್ರಯತ್ನಿಸಿದ್ದು, ರಾಜ್ಯಸಭೆ ಉಪ ಚುನಾವಣೆಗೆ ತಮ್ಮ ಪತ್ನಿಯನ್ನು ಕಣಕ್ಕಿಳಿಸುವ ನಿರ್ಧಾರವನ್ನು ಎನ್‌ಸಿಪಿಯ ಉನ್ನತ ಸಮಿತಿ ತೆಗೆದುಕೊಂಡಿದೆ ಎಂದು ಹೇಳಿದರು. ಭುಜಬಲ್ ಅಸಮಾಧಾನಗೊಂಡಿದ್ದಾರೆ ಎಂಬ ವರದಿಯನ್ನು ನಿರಾಕರಿಸಿದರು.
ಸುನೇತ್ರಾ ಪವಾರ್ ಅವರ ನೇಮಕದ ಬಳಿಕ ಕ್ಯಾಬಿನೆಟ್ ಸಚಿವರಾದ ಭುಜಬಲ್ ಅವರು ಮುನಿಸಿಕೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳ ಬಗ್ಗೆ ಕೇಳಿದಾಗ, ಅಸಮಾಧಾನವಿಲ್ಲ ಎಂದು ಪಕ್ಷದ ಸಹೋದ್ಯೋಗಿಯೇ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು. ವಿರೋಧ ಪಕ್ಷದವರು ಸೇರಿದಂತೆ ಕೆಲವರು ಮತ್ತು ʻನಮ್ಮ ಆಪ್ತ ಸ್ನೇಹಿತರುʼ ಇಂತಹ ವರದಿ ಹಾಕಿಸುತ್ತಿದ್ದಾರೆ. ಆದರೆ ಅವುಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಅಜಿತ್ ಪವಾರ್ ಹೇಳಿದರು.ಪ್ರಫುಲ್ ಪಟೇಲ್ ಮತ್ತು ಭುಜಬಲ್ ಸೇರಿದಂತೆ ಪ್ರಮುಖ ಎನ್‌ಸಿಪಿ ನಾಯಕರು ತಮ್ಮ ಪತ್ನಿ ನಾಮಪತ್ರ ಸಲ್ಲಿಸುವಾಗ ಹಾಜರಿದ್ದರು ಎಂದು ಅವರು ಗಮನ ಸೆಳೆದರು.
ಸುನೇತ್ರಾ ಪವಾರ್ ಅವರು ಬಾರಾಮತಿಯಿಂದ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ, ರಾಜ್ಯಸಭೆ ಉಪ ಚುನಾವಣೆಗೆ ಎನ್‌ಸಿಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ರಾಜೀನಾಮೆಯಿಂದ, ಮಹಾರಾಷ್ಟ್ರದ ಒಂದು ರಾಜ್ಯಸಭೆ ಸ್ಥಾನಕ್ಕೆ ಜೂನ್ 25 ರಂದು ಉಪ ಚುನಾವಣೆ ನಿಗದಿಯಾಗಿದೆ. ಆದರೆ, ಸುನೇತ್ರಾ ಪವಾರ್ ಮಾತ್ರ ಕಣದಲ್ಲಿರುವುದರಿಂದ, ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಸಚಿವ ಸಂಪುಟ ವಿಸ್ತರಣೆ: ಶಿವಸೇನೆಯ ಶಾಸಕ ಸಂಜಯ್ ಶಿರ್ಸಾತ್, ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಳಂಬದ ಬಗ್ಗೆ ಎಚ್ಚರಿಕೆ ನೀಡಿ ದ್ದಾರೆ. ಸಮಸ್ಯೆಯನ್ನು ಇನ್ನಷ್ಟು ದೀರ್ಘಗೊಳಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದ ರಾಜ್ಯ ಸರ್ಕಾರ ಜೂನ್ 2022 ರಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಕ್ಯಾಬಿನೆಟ್ ವಿಸ್ತರಣೆಯಲ್ಲಿ ನಿಧಾನಗತಿಗೆ ಟೀಕೆಗಳನ್ನು ಎದುರಿಸುತ್ತಿದೆ.
ಕ್ಯಾಬಿನೆಟ್ ಸ್ಥಾನದ ಸಂಭಾವ್ಯ ಅಭ್ಯರ್ಥಿಯಾಗಿರುವ ಶಿರ್ಸಾತ್, ಸಂಪುಟ ಪುನಾರಚನೆ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಯಿಂದ ಸ್ಪಷ್ಟೀಕರಣ ಕೋರಿದರು. ನಿರ್ಧಾರಕ ಘೋಷಣೆ ಮೂಲಕ ಉದ್ವಿಗ್ನತೆಯನ್ನುತಪ್ಪಿಸುವ ಅಗತ್ಯವನ್ನು ಒತ್ತಿ ಹೇಳಿದರು.
ʻಎಲ್ಲರಿಗೂ ಸಚಿವರಾಗಬೇಕು ಎಂಬ ಆಸೆ ಇದೆ. ಆದರೆ, ಯಾರೂ ಬಾಯಿ ಬಿಟ್ಟು ಹೇಳುವುದಿಲ್ಲ. ಇದನ್ನು ಹೆಚ್ಚು ಕಾಲ ವಿಳಂಬಿಸಲು ಸಾಧ್ಯವಿಲ್ಲ. ದೃಢ ನಿರ್ಧಾರ ಕೈಗೊಳ್ಳುವ ಸಮಯ ಬಂದಿದೆ. ಸಚಿವ ಸಂಪುಟ ವಿಸ್ತರಣೆ ಇನ್ನಷ್ಟು ತಡವಾದರೆ, ಅದರ ಪರಿಣಾಮ ಕೆಟ್ಟದಾಗುತ್ತದೆ,ʼ ಎಂದು ಶಿರ್ಸಾತ್ ಹೇಳಿದ್ದಾರೆ.
ಏತನ್ಮಧ್ಯೆ, ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಈರುಳ್ಳಿ ಬಿಕ್ಕಟ್ಟನ್ನು ಪರಿಹರಿಸುವ ಬಗ್ಗೆ ಧ್ವನಿ ಎತ್ತಿದ್ದಾರೆ. ರೈತರು ಮತ್ತು ಗ್ರಾಹಕರ ಹಿತಾಸಕ್ತಿ ಕಾಪಾಡಲು, ಈರುಳ್ಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಪುಣೆಯಲ್ಲಿ ಅವರ ಪತ್ನಿ ಸುನೇತ್ರಾ ಪವಾರ್ ಅವರು,ʻಕೇಂದ್ರದಲ್ಲಿ ರಾಜ್ಯ ಸಚಿವ ಸ್ಥಾನ(ಎಂಒಎಸ್)ನೀಡಿದರೆ ಅದನ್ನು ಸ್ವಾಗತಿಸುತ್ತೇನೆ. ಅಂಥ ಅವಕಾಶ ಸಿಕ್ಕರೆ ಖಂಡಿತ ಬಳಸಿಕೊಳ್ಳುತ್ತೇನೆ,ʼ ಎಂದು ಸುದ್ದಿಗಾರರ ಪ್ರಶ್ನೆಗೆ ಹೇಳಿದರು.