Mahakumbh Stampede : ಮಹಾಕುಂಭ ಮೇಳದಲ್ಲಿ ದುರಂತ ನಡೆದದ್ದು ಹೇಗೆ? ಕಾರಣವೇನು?
Mahakumbh Stampede : ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಬಂದಿದ್ದ ಭಕ್ತರು ನದಿ ಕಡೆಗೆ ಮುನ್ನುಗ್ಗತೊಡಗಿದರು. ಹೀಗಾಗಿ ಜನದಟ್ಟಣೆಯ ಮಧ್ಯೆ ನೂಕಾಟ, ತಳ್ಳಾಟ ಆರಂಭವಾಯಿತು. ಈ ಒತ್ತಡದಿಂದಾಗಿ ಅಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ಏಕಾಏಕಿ ಮುರಿದುಬಿತ್ತು.;
ಪ್ರಯಾಗ್ರಾಜ್ನಲ್ಲಿ ವಾರಗಳ ಹಿಂದೆ ಆರಂಭಗೊಂಡಿರುವ ಮಹಾ ಕುಂಭಮೇಳದಲ್ಲಿ ಬುಧವಾರ ಭಾರೀ ದುರಂತವೊಂದಕ್ಕೆ ಘಟಿಸಿದೆ . 6 ವಾರಗಳ ಮಹಾಕುಂಭ ಮೇಳದ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾದ ಮೌನಿ ಅಮಾವಾಸ್ಯೆಯ ಬೆಳಗ್ಗೆ ಕಾಲ್ತುಳಿತ ಸಂಭವಿಸಿ ಹಲವು ಮಂದಿ ಮತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮಹಿಳೆಯರು, ಮಕ್ಕಳು ಸೇರಿದಂತೆ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂಬುದಾಗಿಯೂ ಹೇಳಲಾಗಿದೆ. ಹಾಗಾದರೆ ಈ ದುರಂತಕ್ಕೆ ಕಾರಣವೇನು? ನಡೆದದ್ದು ಹೇಗೆ ಎಂಬೆಲ್ಲ ಮಾಹಿತಿಗಳು ಇಲ್ಲಿದೆ.
ಯಾವಾಗ ನಡೆಯಿತು?
ಮೌನಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಗಂಗಾ, ಯಮುನಾ, ಸರಸ್ವತಿಯ ಸಂಗಮ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲೆಂದು ದೇಶದ ಮೂಲೆ ಮೂಲೆಗಳಿಂದಲೂ ಜನಸಾಗರವೇ ಹರಿದು ಬಂದಿತ್ತು. ಸಂಗಮ ಹಾಗೂ ಘಾಟ್ನ ಸುಮಾರು 12 ಕಿ.ಮೀ. ತೀರದುದ್ದಕ್ಕೂ ಕೋಟ್ಯಂತರ ಜಮಾಯಿಸಿದ್ದರು. ಪರಸ್ಪರರನ್ನು ತಳ್ಳಿಕೊಂಡೇ ಮುಂದೆ ಸಾಗುವಂಥ ಸ್ಥಿತಿ ನಿರ್ಮಾಣವಾಗಿತ್ತು. ತಡರಾತ್ರಿಯ ಬಳಿಕ ಭಕ್ತರ ಸಂಖ್ಯೆ ಹೆಚ್ಚಾಗಿ ರಾತ್ರಿ 1ರಿಂದ 2 ಗಂಟೆಯ ನೂಕು, ನುಗ್ಗಲು ಹಾಗೂ ಕಾಲ್ತುಳಿತ ಸಂಭವಿಸಿತು.
ಆಗಿದ್ದೇನು?
ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಬಂದಿದ್ದ ಭಕ್ತರು ನದಿ ಕಡೆಗೆ ಮುನ್ನುಗ್ಗತೊಡಗಿದರು. ಹೀಗಾಗಿ ಜನದಟ್ಟಣೆಯ ಮಧ್ಯೆ ನೂಕಾಟ, ತಳ್ಳಾಟ ಆರಂಭವಾಯಿತು. ಈ ಒತ್ತಡದಿಂದಾಗಿ ಅಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ಏಕಾಏಕಿ ಮುರಿದುಬಿತ್ತು. ಪರಿಣಾಮ ಒಬ್ಬರ ಮೇಲೊಬ್ಬರು ಬೀಳತೊಡಗಿದರು, ಗೊಂದಲ ಉಂಟಾಗಿ ಜನರು ಚಲ್ಲಾಪಿಲ್ಲಿಯಾಗಲು ಯತ್ನಿಸಿದರು. ಈ ವೇಳೆ ಪರಿಸ್ಥಿತಿ ಕೈಮೀರಿತು. ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುವ ಭರದಲ್ಲಿ ಬೆರೆಯವರ ಮೈಲೇ ಹತ್ತಿ ಓಡಲು ಶುರು ಮಾಡಿದರು.
ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
"ನಾವು ಜನದಟ್ಟಣೆಯ ಮಧ್ಯೆಯೇ ಮುಂದೆ ಸಾಗುತ್ತಿದ್ದೆವು. ಏಕಾಏಕಿ ಜನರು ತಳ್ಳಲು ಶುರು ಮಾಡಿದರು. ನಾವು ಒಳಗೆ ಸಿಲುಕಿಕೊಂಡೆವು. ನಮ್ಮಲ್ಲಿ ಅನೇಕರು ಕೆಳಗೆ ಬಿದ್ದೆವು. ಯಾರನ್ನೂ ಯಾರೂ ನಿಯಂತ್ರಿಸುವ ಪರಿಸ್ಥಿತಿಯಲ್ಲೇ ಇರಲಿಲ್ಲ" ಎಂದು ಪ್ರತ್ಯಕ್ಷದರ್ಶಿ ಭಕ್ತರೊಬ್ಬರು ಹೇಳಿದ್ದಾರೆ.
ಗಾಯಗೊಂಡ ತಮ್ಮ ಮಗುವನ್ನು ಮಡಿಲ ಮೇಲೆ ಮಲಗಿಸಿಕೊಂಡಿದ್ದ ಮಹಿಳೆಯೊಬ್ಬರು "ನನಗೆ ಏನು ಮಾಡಬೇಕು, ಎಲ್ಲಿ ಹೋಗಬೇಕೆಂದೇ ತೋಚುತ್ತಿಲ್ಲ" ಎಂದು ಅಳುತ್ತಿದ್ದುದು ಮನಕಲುಕುವಂತಿತ್ತು. ಘಟನೆ ನಡೆಯುತ್ತಿರುವಾಗಲೂ, ನಂತರವೂ ಅನೇಕರು ಅದರ ಅರಿವಿಲ್ಲದೆ ಪುಣ್ಯಸ್ನಾನ ಮಾಡುತ್ತಿದ್ದರು
ಪ್ರಧಾನಿ ಮೋದಿಯಿಂದ ಮಾಹಿತಿ
ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ವಿವರ ಪಡೆದಿದ್ದಾರೆ. ಮೋದಿಯವರು ನನ್ನ ಸಂಪರ್ಕದಲ್ಲಿದ್ದು, ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವಂತೆ ಸೂಚಿಸಿದ್ದಾರೆ ಎಂದು ಸಿಎಂ ಯೋಗಿ ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಕೇಂದ್ರ ಸರ್ಕಾರದಿಂದ ಎಲ್ಲ ನೆರವಿನ ಭರವಸೆ ಕೊಟ್ಟಿದ್ದಾರೆ.
ಕೂಡಲೇ ಅಲ್ಲಿಂದ ತೆರಳಿ: ಸೂಚನೆ
ಘಟನೆ ನಡೆದ ಕೂಡಲೇ ಭಾರೀ ಸಂಖ್ಯೆಯ ಆಂಬುಲೆನ್ಸ್ ಗಳು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಕುಂಭದ ಸೆಕ್ಟರ್ 2ರಲ್ಲಿ ನಿರ್ಮಿಸಲಾದ ತಾತ್ಕಾಲಿಕ ಆಸ್ಪತ್ರೆಗೆ ದಾಖಲಿಸಿವೆ. ಪುಣ್ಯ ಸ್ನಾನ ಮುಗಿದ ಭಕ್ತಾದಿಗಳಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಅಮೃತ ಸ್ನಾನ ಮುಂದುವರಿಯಲಿದೆ
ಅಮೃತ ಸ್ನಾನವನ್ನು ಕಾಲ್ತುಳಿತದ ಹಿನ್ನೆಲೆಯಲ್ಲಿ ರದ್ದು ಮಾಡುತ್ತಿರುವುದಾಗಿ ಮುಂಜಾನೆ ಅಖಾಡಗಳು ಘೋಷಿಸಿದ್ದವು. ಆದರೆ, ನಂತರದಲ್ಲಿ ಜನದಟ್ಟಣೆ ಸ್ವಲ್ಪಮಟ್ಟಿಗೆ ತಗ್ಗಿದ ಕಾರಣ, ಅಮೃತ ಸ್ನಾನವು ಈ ಹಿಂದೆ ನಿಗದಿಪಡಿಸಿದಂತೆ ನಡೆಯಲಿದೆ ಎಂದು ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ರವೀಂದ್ರ ಪುರಿ ಘೋಷಿಸಿದ್ದಾರೆ. ದುರಂತ ನಡೆದ ಕಾರಣ ನಾವು ಪುಣ್ಯಸ್ನಾನ ಮುಂದೂಡಲು ನಿರ್ಧರಿಸಿದ್ದೆವು. ಆದರೆ, ಈಗ ದಟ್ಟಣೆ ಕಡಿಮೆಯಾಗಿದೆ. ಹೀಗಾಗಿ, ನಾನು ಪುಣ್ಯ ಸ್ನಾನ ಕೈಗೊಳ್ಳಲು ತೀರ್ಮಾನಿಸಿದ್ದೇವೆ. ಎಲ್ಲ ಅಖಾಡಗಳ ಮೆರವಣಿಗೆಯೂ ಅಂದುಕೊಂಡಂತೆಯೇ ನಡೆಯಲಿದೆ ಎಂದು ರವೀಂದ್ರ ಪುರಿ ತಿಳಿಸಿದ್ದಾರೆ.
ಸಂಗಮಕ್ಕೆ ಹೋಗಬೇಡಿ, ಬೇರೆಗೆ ಸ್ನಾನಗೈಯ್ಯಿರಿ
ಘಟನೆ ಬಳಿಕ ಟ್ವೀಟ್ ಮಾಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ದಯವಿಟ್ಟು ಸಂಗಮ ಸ್ಥಳಕ್ಕೇ ಹೋಗಿ ಪುಣ್ಯಸ್ನಾನ ಮಾಡಬೇಕು ಎಂಬ ಧಾವಂತ ಬೇಡ. ನಿಮಗೆ ಸಮೀಪವಿರುವ ಗಂಗೆಯ ಘಾಟ್ ಗಳಲ್ಲಿ ಪವಿತ್ರ ಸ್ನಾನ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮೌನಿ ಅಮಾವಾಸ್ಯೆಯ ಮಹತ್ವವೇನು?
ಮಹಾಕುಂಭ ಮೇಳ ನಡೆಯುವ 6 ವಾರಗಳಲ್ಲಿ ಮೌನಿ ಅಮಾವಾಸ್ಯೆಯ ದಿನ ಅತ್ಯಂತ ಪವಿತ್ರ. ತ್ರಿವೇಣಿ ಸಂಗಮದಲ್ಲಿ ಈ ದಿನ ಮಿಂದೆದ್ದರೆ ಎಲ್ಲ ಪಾಪಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆಯಿದೆ. ಭಕ್ತಾದಿಗಳು ಈ ದಿನ ಮೌನಾಚರಣೆ, ಉಪವಾಸ ಕೈಗೊಂಡು, ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡುತ್ತಾರೆ.
ಈ ಬಾರಿ 4 ಗ್ರಹಗಳು ಸರಳ ರೇಖೆಗೆ ಬರುವ ಅಪರೂಪದ ಖಗೋಳ ವಿದ್ಯಮಾನ ಸಂಭವಿಸುತ್ತಿರುವ ಕಾರಣ, 144 ವರ್ಷಗಳಿಗೊಮ್ಮೆ ಉಂಟಾಗುವ ಈ 'ತ್ರಿವೇಣಿ ಯೋಗ'ವೂ ಕೂಡ ಮೌನಿ ಅಮಾವಾಸ್ಯೆಯ ದಿನದ ಆಧ್ಯಾತ್ಮಿಕ ಮಹತ್ವಕ್ಕೆ ಕಾರಣವಾಗಿದೆ.
ಬುಧವಾರ ಸುಮಾರು 10 ಕೋಟಿ ಭಕ್ತರು ಬುಧವಾರ ಪುಣ್ಯಸ್ನಾನ ಮಾಡುವ ನಿರೀಕ್ಷೆಯಿದೆ. ಈಗಾಗಲೇ 20 ಕೋಟಿಗೂ ಅಧಿಕ ಮಂದಿ ಸಂಗಮದಲ್ಲಿ ಮಿಂದೆದ್ದಿದ್ದು, ಫೆ.26ರೊಳಗೆ ಸುಮಾರು 40 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ.