ಮಧ್ಯಪ್ರದೇಶ| ತರಬೇತಿ ಸೇನಾಧಿಕಾರಿಗಳ ಮೇಲೆ ಹಲ್ಲೆ, ಮಹಿಳೆ ಅತ್ಯಾಚಾರ

Update: 2024-09-12 07:34 GMT

ಮಧ್ಯಪ್ರದೇಶ: ತರಬೇತಿ ಪಡೆಯುತ್ತಿರುವ ಇಬ್ಬರು ಸೇನಾಧಿಕಾರಿಗಳು ಮತ್ತು ಅವರ ಸ್ನೇಹಿತೆಯರ ಮೇಲೆ ಹಲ್ಲೆ ನಡೆಸಿದ ಎಂಟು ಮಂದಿ ಇದ್ದ ಶಸ್ತ್ರಸಜ್ಜಿತ ಗ್ಯಾಂಗ್, ಮಹಿಳೆ ಮೇಲೆ ಅತ್ಯಾಚಾರವೆಸಗಿದ ಘಟನೆ ಬುಧವಾರ (ಸೆಪ್ಟೆಂಬರ್ 11) ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಡೆದಿದೆ.

ಇಂದೋರ್ ಜಿಲ್ಲೆಯ ಮ್ಹೋ-ಮಂಡ್ಲೇಶ್ವರ್ ರಸ್ತೆಯ ಛೋಟಿ ಜಾಮ್‌ನ ಫೈರಿಂಗ್ ರೇಂಜ್ ಬಳಿ ಘಟನೆ ಸಂಭವಿಸಿದೆ. ದಾಳಿಕೋರರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಅವರಲ್ಲಿ ಒಬ್ಬ ಕ್ರಿಮಿನಲ್ ದಾಖಲೆ ಹೊಂದಿದ್ದಾನೆ. 

ಗುಂಪು ದಾಳಿ: 23 ಮತ್ತು 24 ವರ್ಷ ವಯಸ್ಸಿನ ಅಧಿಕಾರಿಗಳು ಮೊ ಕಂಟೋನ್ಮೆಂಟ್ ಟೌನ್‌ನಲ್ಲಿರುವ ಇನ್‌ಫೆಂಟ್ರಿ ಶಾಲೆಯಲ್ಲಿ ತರಬೇತಿಯಲ್ಲಿದ್ದಾರೆ. ಮಂಗಳವಾರ ಸಂಜೆ ಸ್ನೇಹಿತೆಯರ ಜೊತೆ ಅವರು ಪಿಕ್ನಿಕ್ ಗೆ ತೆರಳಿದ್ದರು. ಒಂದು ಜೋಡಿ ಕಾರಿನಲ್ಲಿ ಹಾಗೂ ಇನ್ನೊಂದು ಜೋಡಿ ಬೆಟ್ಟದ ಮೇಲೆ ಇತ್ತು. ಶಸ್ತ್ರಸಜ್ಜಿತ ಗುಂಪು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿ, ಕಾರಿನಲ್ಲಿದ್ದ ಜೋಡಿ ಮೇಲೆ ಹಲ್ಲೆ ನಡೆಸಿದೆ. ಗದ್ದಲ ಕೇಳಿ ಬೆಟ್ಟದ ಮೇಲಿನ ಜೋಡಿ ಕಾರಿನ ಬಳಿ ಬಂದಿದೆ. ಗುಂಪು ಅವರ ಬಳಿಯಿದ್ದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿದೆ ಎನ್ನಲಾಗಿದೆ.

ದಂಪತಿ ಒತ್ತೆಯಾಳು: ಕಾರಿನಲ್ಲಿದ್ದ ಜೋಡಿಯನ್ನು ಒತ್ತೆಯಾಗಿಟ್ಟುಕೊಂಡು, 10 ಲಕ್ಷ ರೂ. ತರುವಂತೆ ಇನ್ನೊಂದು ಜೋಡಿಗೆ ಹೇಳಿದೆ. ಸೇನಾ ನೆಲೆಗೆ ಹಿಂತಿರುಗಿದ ಜೋಡಿ, ಕಮಾಂಡಿಂಗ್ ಅಧಿಕಾರಿಗೆ ಸುದ್ದಿ ತಿಳಿಸಿತು. ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮತ್ತು ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಅಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದರು. 

ನಾಲ್ವರನ್ನು ಮ್ಹೋ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಹಿಳೆಯೊಬ್ಬರ ಅತ್ಯಾಚಾರ ನಡೆದಿದೆ ಎಂದು ಬಡಗೊಂಡ ಪೊಲೀಸ್ ಠಾಣೆ ಉಸ್ತುವಾರಿ ಲೋಕೇಂದ್ರ ಸಿಂಗ್ ಹಿರೋರೆ ಹೇಳಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ. ಅವರಲ್ಲಿ ಒಬ್ಬನ ಮೇಲೆ 2016 ರಲ್ಲಿ ಲೂಟಿ ಪ್ರಕರಣ ದಾಖಲಾಗಿದೆ ಎಂದು ಇಂದೋರ್ ಗ್ರಾಮಾಂತರ ಎಸ್‌ಪಿ ಹಿತಿಕಾ ವಾಸಲ್ ಹೇಳಿದ್ದಾರೆ.

Tags:    

Similar News