NEET- UG 2024: ಪ್ರತಿಪಕ್ಷಗಳಿಂದ ಚರ್ಚೆಗೆ ಒತ್ತಾಯ, ಲೋಕಸಭೆ-ರಾಜ್ಯಸಭೆ ಕಲಾಪ ಮುಂದೂಡಿಕೆ

ನೀಟ್‌ ಗದ್ದಲದ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು. ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸದನದ ಆವರಣಕ್ಕೆ ಇಳಿದಿದ್ದಕ್ಕೆ ಸಭಾಪತಿ ಜಗದೀಪ್ ಧನ್ಖರ್‌ ಆಕ್ರೋಶ ವ್ಯಕ್ತಪಡಿಸಿದರು. ಗದ್ದಲದ ನಡುವೆ ರಾಜ್ಯಸಭೆ ಕಲಾಪವನ್ನು ಮುಂದೂಡಿದರು.;

Update: 2024-06-28 11:17 GMT

ವೈದ್ಯಕೀಯ ಪ್ರವೇಶ ಪರೀಕ್ಷೆ(ನೀಟ್‌)ಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಿದ್ದರಿಂದ, ಲೋಕಸಭೆ ಕಲಾಪವನ್ನು ಒಂದು ದಿನ ಮುಂದೂಡಲಾಯಿತು.

ಮಧ್ಯಾಹ್ನ 12 ಗಂಟೆಗೆ ಸದನ ಮತ್ತೆ ಸೇರಿದಾಗ, ವಿರೋಧ ಪಕ್ಷದ ಸದಸ್ಯರು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆಗೆ ಬೇಡಿಕೆ ಮಂಡಿಸಿದರು. 

ಸ್ಪೀಕರ್ ಓಂ ಬಿರ್ಲಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಸಂದರ್ಭದಲ್ಲಿ ಈ ವಿಷಯವನ್ನು ಚರ್ಚಿಸಬಹುದು ಎಂದು ವಿರೋಧ ಪಕ್ಷದ ಸದಸ್ಯರಿಗೆ ತಿಳಿಸಿದರು. 

ಸಂಸತ್ತಿನ ಕೆಲವು ಮಾನದಂಡಗಳನ್ನು ಅನುಸರಿಸಬೇಕು ಮತ್ತು ಸಮಿತಿಗಳನ್ನು ರಚಿಸಬೇಕಿದೆ ಎಂದು ಬಿರ್ಲಾ ಹೇಳಿದರು. ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ವಿದ್ಯಾರ್ಥಿಗಳಿಗೆ ಅದೆಲ್ಲ ಗೊತ್ತಿಲ್ಲ. ಅವರು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದರು.

ಸಮಸ್ಯೆ ಪರಿಹರಿಸುತ್ತೇವೆ: ರಿಜಿಜು- ಕಾಂಗ್ರೆಸ್, ಟಿಎಂಸಿ ಮತ್ತು ಡಿಎಂಕೆ ಪಕ್ಷಗಳ ಸದಸ್ಯರು ಆವರಣಕ್ಕೆ ಮುತ್ತಿಗೆ ಹಾಕಿದರು. ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನಾ ನಿರ್ಣಯವನ್ನು ಕೈಗೆತ್ತಿಕೊಳ್ಳುವ ಮೊದಲು ಪ್ರತಿಪಕ್ಷಗಳು ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಿರುವುದು ಇದೇ ಮೊದಲ ಬಾರಿಗೆ ಕಂಡುಬಂದಿದೆ ಎಂದು ರಿಜಿಜು ಹೇಳಿದರು. 

ʻವಂದನಾ ನಿರ್ಣಯದ ಚರ್ಚೆ ಸಮಯದಲ್ಲಿ ನೀವು ಪ್ರಶ್ನೆಗಳಿಗೆ ಉತ್ತರಿಸುತ್ತೇವೆ ಎಂದು ಭರವಸೆ ನೀಡುತ್ತೇನೆ,ʼ ಎಂದು ರಿಜಿಜು ಹೇಳಿದರು. 

ಸದಸ್ಯರು ಘೋಷಣೆ ಮುಂದುವರಿಸಿದರು. ʻಜನರು ಸದಸ್ಯರನ್ನು ಆಯ್ಕೆ ಮಾಡಿರುವುದು ಅವರ ಸಮಸ್ಯೆಗಳನ್ನು ಪ್ರಸ್ತಾಪಿಸಲು ಮತ್ತು ಚರ್ಚಿಸಲು. ಕಲಾಪಕ್ಕೆ ಅಡ್ಡಿಪಡಿಸುವುದಕ್ಕಲ್ಲ,ʼ ಎಂದು ಬಿರ್ಲಾ ಹೇಳಿದರು.

ʻರಸ್ತೆಯಲ್ಲಿ ಪ್ರತಿಭಟನೆಗೂ ಸದನದ ಒಳಗೆ ಪ್ರತಿಭಟನೆಗೂ ವ್ಯತ್ಯಾಸವಿದೆ. ನಿಮಗೆ (ವಿರೋಧ) ಸದನ ನಡೆಯುವುದು ಬೇಡವೇ? ವಂದನಾ ನಿರ್ಣಯದ ಚರ್ಚೆ ಸಮಯದಲ್ಲಿ ನೀಟ್‌ ಅನ್ನು ಚರ್ಚಿಸಲು ಬಯಸುವುದಿಲ್ಲವೇ?,ʼ ಎಂದು ಬಿರ್ಲಾ ಕೇಳಿದರು. 

ಸದನದಲ್ಲಿ ಗದ್ದಲ ಮುಂದುವರಿದಿದ್ದರಿಂದ, ಬಿರ್ಲಾ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಗದ್ದಲದ ನಡುವೆ ಟಿಎಂಸಿ ಸದಸ್ಯ ಎಸ್.ಕೆ. ನೂರುಲ್ ಇಸ್ಲಾಂ ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಬೆಳಗ್ಗೆ ಸದನ ಸೇರಿದಾಗ, ಎಲ್ಲ ವ್ಯವಹಾರಗಳನ್ನು ಅಮಾನತುಗೊಳಿಸಿ, ನೀಟ್‌ ಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಪ್ರತಿಪಕ್ಷದ ಸದಸ್ಯರು ಸನ್ನದ್ಧರಾಗಿದ್ದರು.

ಆದರೆ, ಮಾಜಿ ಸ್ಪೀಕರ್ ಮತ್ತು ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಮನೋಹರ್ ಜೋಶಿ ಸೇರಿದಂತೆ 13 ಮಾಜಿ ಸದಸ್ಯರ ಸಂತಾಪ ಸೂಚನೆಗಳನ್ನು ಮೊದಲು ತೆಗೆದುಕೊಳ್ಳುವುದಾಗಿ ಸ್ಪೀಕರ್ ಹೇಳಿದರು. ಸಂತಾಪ ಸೂಚನೆ ಮುಗಿದ ಬಳಿಕ ಪ್ರತಿಪಕ್ಷದ ಸದಸ್ಯರು ಮತ್ತೆ ಎದ್ದು ನಿಂತರು.

ನೀಟ್‌ ಚರ್ಚೆ ತೆಗೆದುಕೊಳ್ಳಿ: ʻನೀಟ್ ವಿಷಯ ಇಡೀ ದೇಶಕ್ಕೆ ಬಹಳ ಮುಖ್ಯವಾದ ವಿಷಯ. ಈ ಬಗ್ಗೆ ಸದನದಲ್ಲಿ ಸುದೀರ್ಘ ಚರ್ಚೆಯನ್ನು ಬಯಸುತ್ತೇವೆ,ʼ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು. ಆದ್ದರಿಂದ, ಮುಂದೂಡಿಕೆ ಗೊತ್ತುವಳಿಯನ್ನು ಅಂಗೀಕರಿಸಬೇಕು ಎಂದರು.

ಆದರೆ, ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ತೆಗೆದುಕೊಳ್ಳುವುದರಿಂದ, ವಿಷಯಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಬಿರ್ಲಾ ಹೇಳಿದರು. 

ʻರಾಷ್ಟ್ರಪರಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ನೀವು ಎಲ್ಲಾ ವಿಷಯಗಳನ್ನು ಎತ್ತಬಹುದು. ನಿಮಗೆ ಸಾಕಷ್ಟು ಸಮಯ ಸಿಗುತ್ತದೆ. ಆದರೆ, ವಂದನಾ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಬೇರೆ ಯಾವುದೇ ವಿಷಯ ಪ್ರಸ್ತಾಪಿಸಲು ಅವಕಾಶ ನೀಡುವುದಿಲ್ಲ. ಇದನ್ನು ಈಗಾಗಲೇ ನಿರ್ಧರಿಸಿ, ಬುಲೆಟಿನ್‌ನಲ್ಲಿಯೂ ಉಲ್ಲೇಖಿಸಲಾಗಿದೆ,ʼ ಎಂದರು. 

ರಾಜ್ಯಸಭೆ ಮುಂದೂಡಿಕೆ: ನೀಟ್‌ ಅಕ್ರಮ ಕುರಿತ ಪ್ರತಿಪಕ್ಷಗಳ ಗದ್ದಲದಿಂದ ರಾಜ್ಯಸಭೆಯ ಕಲಾಪವನ್ನು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆವರಣವನ್ನು ಪ್ರವೇಶಿಸಿದ್ದಕ್ಕೆ ಸಭಾಪತಿ ಜಗದೀಪ್ ಧನ್ಖರ್ ಅವರು ಆಕ್ರೋಶ ವ್ಯಕ್ತಪಡಿಸಿದರು. 

ನೀಟ್ ಕುರಿತು ಉತ್ತರ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ʻ'ವಿರೋಧ ಪಕ್ಷದ ನಾಯಕರು ಆವರಣಕ್ಕೆ ಪ್ರವೇಶಿಸಿದ್ದಾರೆ. ಇದು ಹಿಂದೆಂದೂ ಸಂಭವಿಸಿಲ್ಲ,ʼ ಎಂದ ಧನ್ಖರ್‌ ಕಲಾಪವನ್ನು ಮುಂದೂಡುವ ಮೊದಲು ಹೇಳಿದರು.

ಪಟ್ಟಿಮಾಡಿದ ವ್ಯವಹಾರವನ್ನು ಅಮಾನತುಗೊಳಿಸಿ, ನೀಟ್‌ ಕುರಿತು ಚರ್ಚೆ ನಡೆಸಲು 267ನೇ ನಿಯಮದಡಿ 22 ನೋಟಿಸ್‌ಗಳನ್ನು ಧನ್ಖರ್‌ ಅನುಮೋದಿಸಲಿಲ್ಲ. ಆನಂತರ ಕೋಲಾಹಲ ಪ್ರಾರಂಭವಾಯಿತು. ನೋಟಿಸ್‌ಗಳನ್ನು ತಿರಸ್ಕರಿಸಿದ ಧನ್ಖರ್‌, ವಷಿಯಗಳ ಚರ್ಚೆಗೆ ಒಟ್ಟು 21 ಗಂಟೆಗಳ ಕಾಲಾವಕಾಶ ನೀಡಲಾಗಿದೆ ಎಂದರು.

ಪ್ರಧಾನ್ ರಾಜೀನಾಮೆಗೆ ಆಗ್ರಹ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ತನಿಖೆ ನಡೆಸಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಸಭಾಪತಿ ಹೇಳಿದರು.

ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಚರ್ಚೆಗೆ ಅವಕಾಶ ನೀಡುವಂತೆ ಸಭಾಪತಿಯನ್ನು ಒತ್ತಾಯಿಸಿದರು. ಆದರೆ, ಧನ್ಖರ್‌ ಒಪ್ಪಲಿಲ್ಲ. ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಅವರಿಗೆ ವಂದನಾ ನಿರ್ಣಯದ ಮೇಲೆ ಚರ್ಚೆ ಪ್ರಾರಂಭಿಸಲು ಹೇಳಿದರು. 

ತ್ರಿವೇದಿ ಭಾಷಣ ಆರಂಭಿಸುತ್ತಿದ್ದಂತೆಯೇ ಹಲವು ವಿರೋಧ ಪಕ್ಷದ ಸದಸ್ಯರು ಆವರಣಕ್ಕೆ ಇಳಿದು ಘೋಷಣೆ ಕೂಗಿದರು. ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿದರು.

ಟಿಎಂಸಿ ಸದಸ್ಯರಾದ ಸಾಗರಿಕಾ ಘೋಶ್‌, ಡೆರೆಕ್ ಒ'ಬ್ರೇನ್ ಮತ್ತು ಸಾಕೇತ್ ಗೋಖಲೆ ಅವರಿಗೆ ಆಸನಕ್ಕೆ ಹಿಂದಿರುಗಲು ಸೂಚಿಸಿದರು.

ಪ್ರತಿಪಕ್ಷಗಳ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು. ನೀಟ್ ಪ್ರಕರಣದಲ್ಲಿ ಜವಾಬ್ದಾರಿಯನ್ನು ನಿಗದಿಪಡಿಸಬೇಕು ಎಂಬುದು ಒಪ್ಪಿತ. ಸರ್ಕಾರ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದೆ, ತನಿಖೆ ನಡೆಯುತ್ತಿದೆ ಮತ್ತು ಬಂಧಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್‌ ಉದ್ಧೇಶ ಪ್ರಶ್ನಿಸಿದ ನಡ್ಡಾ: ಮಧ್ಯಾಹ್ನ 12 ಗಂಟೆ ನಂತರ ರಾಜ್ಯಸಭೆ ಮತ್ತೆ ಸೇರಿದಾಗ ಪ್ರತಿಪಕ್ಷಗಳ ಸಂಸದರು ನೀಟ್ ವಿಷಯ ಪ್ರಸ್ತಾಪಿಸಿ, ಮತ್ತೆ ಆವರಣಕ್ಕೆ ಇಳಿದರು.

ಪ್ರತಿಪಕ್ಷಗಳಿಗೆ ಮನವಿ ಮಾಡಲು ಸದನದ ನಾಯಕ ಜೆ.ಪಿ. ನಡ್ಡಾ ಅವರಿಗೆ ತಿಳಿಸಿದರು. ʻಸದನವನ್ನು ಒತ್ತೆಯಾಳಾಗಿ ಇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿರುವಾಗ ರಾಜ್ಯಸಭೆಯ ಸಭಾನಾಯಕನಾಗಿ ಮೊದಲ ಭಾಷಣ ಮಾಡಬೇಕಾಗಿ ಬಂದಿರುವುದು ದುರದೃಷ್ಟಕರ ಎಂದು ನಡ್ಡಾ ಹೇಳಿದರು.

ʻಕಾಂಗ್ರೆಸ್ ಚರ್ಚೆ ಬಗ್ಗೆ ಗಂಭೀರವಾಗಿಲ್ಲ. ವಂದನಾ ನಿರ್ಣಯ ಅಥವಾ ನೀಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಲು ಕಾಂಗ್ರೆಸ್‌ಗೆ ಆಸಕ್ತಿಯಿಲ್ಲ. ನೀಟ್ ವಿಷಯ ಕೈಗೆತ್ತಿಕೊಳ್ಳಲು ಸರ್ಕಾರ ಉತ್ಸುಕವಾಗಿದೆ. ಆದರೆ, ಕಾಂಗ್ರೆಸ್ ಚರ್ಚೆಯನ್ನು ಬಯಸುತ್ತಿಲ್ಲ,ʼ ಎಂದು ಹೇಳಿದರು.

Tags:    

Similar News