ಆಂಧ್ರಪ್ರದೇಶದಲ್ಲಿ ಮಿನಿ ಟ್ರಕ್‌ ಮೇಲೆ ಉರಳಿದ ಲಾರಿ; ಒಂಬತ್ತು ಸಾವು, 11 ಮಂದಿಗೆ ಗಾಯ

ಲಾರಿ ತನ್ನ ಸಮತೋಲನ ಕಳೆದುಕೊಂಡು ಟ್ರಕ್‌ ಮೇಲೆ ಉರುಳಿ ಬಿದಿದ್ದು ಗಾಯಾಳುಗಳನ್ನು ತಿರುಪತಿ ಮತ್ತು ರಾಜಂಪೇಟೆ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.;

Update: 2025-07-14 10:42 GMT

ಮಿನಿ ಟ್ರಕ್‌ ಮೇಲೆ ಉರುಳಿ ಬಿದ್ದಿರುವ ಲಾರಿ 

ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ರೆಡ್ಡಿಚೆರವು ಬಳಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತು ಜನರು ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ. ಮಾವಿನಕಾಯಿ ತುಂಬಿದ್ದ ಲಾರಿಯೊಂದು ಮಿನಿ ಟ್ರಕ್‌ ಮೇಲೆ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮಿನಿ ಟ್ರಕ್‌ನಲ್ಲಿ ಸುಮಾರು 20 ಮಂದಿ ಪ್ರಯಾಣಿಸುತ್ತಿದ್ದರು. ಘಟನೆ ಸಂಭವಿಸಿದ ಸಂದರ್ಭದಲ್ಲಿ, ಮಾವಿನಕಾಯಿ ತುಂಬಿದ್ದ ಲಾರಿಯ ಹಿಂಬದಿ ಚಕ್ರ ಮರಳಿನಲ್ಲಿ ಸಿಲುಕಿಕೊಂಡು ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ, ಲಾರಿ ತನ್ನ ಸಮತೋಲನ ಕಳೆದುಕೊಂಡು ಮಿನಿ ಟ್ರಕ್‌ ಮೇಲೆ ಉರುಳಿ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಾರಿ ಚಾಲಕನ ಹೇಳಿಕೆಯ ಪ್ರಕಾರ, ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.

ರಕ್ಷಣಾ ಕಾರ್ಯ ಮತ್ತು ತನಿಖೆ

ಅಪಘಾತದ ನಂತರ ಗಾಯಗೊಂಡವರನ್ನು ತಕ್ಷಣ ತಿರುಪತಿ ಮತ್ತು ರಾಜಂಪೇಟೆಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ರಕ್ಷಣಾ ತಂಡಗಳು, ಕ್ರೇನ್ ಬಳಸಿ ಲಾರಿಯನ್ನು ಮೇಲೆತ್ತಿ, ಕಡಪ ಮತ್ತು ತಿರುಪತಿ ರಸ್ತೆಯಲ್ಲಿ ಉಂಟಾಗಿದ್ದ ಟ್ರಾಫಿಕ್ ಜಾಮ್ ಅನ್ನು ತೆರವುಗೊಳಿಸಿದರು.

ಅತಿಯಾದ ಭಾರ ಮತ್ತು ರಸ್ತೆಯ ದುಃಸ್ಥಿತಿಯೇ ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ಶಂಕಿಸಿದ್ದಾರೆ. ಈ ಘಟನೆ ಕುರಿತು ಪುಲ್ಲಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. 

Tags:    

Similar News