ಬೆಂಗಳೂರನ್ನು ಬದಲಿಸೋಣ, ನಗರ ತೊರೆಯದಂತೆ ಐಟಿ ಕಂಪೆನಿಗಳಿಗೆ ಎಚ್‌ಡಿಕೆ ಮನವಿ
ಕಂಪನಿಗಳು ರಾಜ್ಯ ಸರ್ಕಾರದ ಮೇಲೆ ಭರವಸೆ ಕಳೆದುಕೊಂಡು ನೆರೆ ರಾಜ್ಯಗಳತ್ತ ವಲಸೆ ಹೋಗುವುದು ಬೇಡ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರದ ಪ್ರತಿಷ್ಠೆಗೆ ಘೋರ ಪೆಟ್ಟು ಬಿದ್ದಿದೆ ಎಂದು ಮಾಜಿ ಸಿಎಂ ಎಚ್‌ಡಿಕೆ ತಿಳಿಸಿದರು.;
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ
ಕಂಪನಿಗಳು ಬೆಂಗಳೂರು ಬಿಡುವುದು ಬೇಡ. ನಗರಕ್ಕೆ ಮಹಾನ್ ಪರಂಪರೆ, ಹಿನ್ನೆಲೆ ಇದೆ. ಈ ದಪ್ಪ ಚರ್ಮದ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ. ನಿಮ್ಮ ಜತೆ ನಾವು, ಇಡೀ ರಾಜ್ಯದ ಜನತೆ ಇದ್ದೇವೆ. ಹೊರ ಹೋಗುತ್ತೇವೆ ಎನ್ನುವ ಮಾತನ್ನು ಮನಸ್ಸಿನಿಂದ ತೆಗೆದುಬಿಡಿ ಎಂದು ಕೇಂದ್ರ ಸಚಿವ ಹಾಗೂ ಮಾಜಿ ಸ ಹೇಳಿದ್ದಾರೆ.
ಬೆಂಗಳೂರಿನ ರಸ್ತೆಗಳು ವಿಪರೀತ ಧೂಳು ಹಾಗೂ ಗುಂಡಿಗಳಿಂದ ಕೂಡಿದ್ದು, ಕಚೇರಿ ತಲುಪಲು ತಡವಾಗುತ್ತಿವೆ ಎಂದು ಬುಧವಾರ(ಸೆ.17) ಬ್ಲಾಕ್‌ಬಕ್ ಸಂಸ್ಥಾಪಕ ರಾಜೇಶ್ ಯಾಬಾಜಿ ರಾಜ್ಯ ತೊರೆಯುವುದಾಗಿ ತಿಳಿಸಿದ್ದರು. ಈ ಮಾತಿಗೆ ಐಟಿ ದಿಗ್ಗಜರಾದ ಮೋಹನ್‌ದಾಸ್ ಪೈ ಹಾಗೂ ಕಿರಣ್ ಮಜೂಮ್‌ದಾರ್ ಷಾ ಧ್ವನಿಗೂಡಿಸಿದ್ದರು. ಈ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾಧ್ಯಮ ಹೇಳಿಕೆ ನೀಡಿದ್ದು, ನಾವೆಲ್ಲರೂ ಸೇರಿ ಬೆಂಗಳೂರು ನಗರವನ್ನು ಬದಲಿಸೋಣ. "we will make bengaluru great again" ಎಂದು ಕಂಪನಿಗಳಿಗೆ ಮನವಿ ಮಾಡಿದ್ದು,ರಾಜ್ಯ ಭ್ರಷ್ಟರ ಕೈಯಲ್ಲಿ ಸಿಲುಕಿ ನರಳುತ್ತಿದೆ. ಹೆಜ್ಜೆ ಹೆಜ್ಜೆಗೂ ಸಾವಿನ ಗುಂಡಿ. ಗ್ರೇಟರ್ ಬೆಂಗಳೂರು ಎಂದರೆ ಇದೇನಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಪನಿಗಳು ರಾಜ್ಯ ಸರ್ಕಾರದ ಮೇಲೆ ಭರವಸೆ ಕಳೆದುಕೊಂಡು ನೆರೆ ರಾಜ್ಯಗಳತ್ತ ವಲಸೆ ಹೋಗುವುದು ಬೇಡ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರದ ಪ್ರತಿಷ್ಠೆಗೆ ಘೋರ ಪೆಟ್ಟು ಬಿದ್ದಿದೆ. ಕಂಡೆಲ್ಲೆಲ್ಲ ಕಸದ ರಾಶಿ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಏನು ಮಾಡುತ್ತಿದೆ? ಜನರ ತೆರಿಗೆ ದುಡ್ಡು ನುಂಗಿ ಗೊರಕೆ ಹೊಡೆಯುತ್ತಿದೆಯಾ? ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಆಡಳಿತ ವೈಫಲ್ಯ
ನಗರದಲ್ಲಿ ಆಡಳಿತ ವೈಫಲ್ಯ ಹೆಚ್ಚಾಗಿದ್ದು, ಉದ್ಯಮಿಗಳು ದೂರಿರುವುದು ಸರಿ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಉದ್ಯಮಿಗಳು ಸರ್ಕಾರದ ವೈಫಲ್ಯವನ್ನು ಇಷ್ಟು ಕಠಿಣವಾಗಿ ತೋರಿಸಿರುವುದು ಇತಿಹಾಸದಲ್ಲಿ ಇದೇ ಮೊದಲು. ಈ ಸರ್ಕಾರಕ್ಕೆ ಎಳ್ಳಷ್ಟೂ ಸಂಕೋಚ, ಆತ್ಮಾಭಿಮಾನವಿಲ್ಲ. ಕನ್ನಡಿಗರ ಸ್ವಾಭಿಮಾನವನ್ನು ಗುಂಡಿಪಾಲು ಮಾಡಿದೆ. ಇದಕ್ಕೆ ಮುಖ್ಯಮಂತ್ರಿ ಹಾಗೂ ಡಿಸಿಎಂ ಇಬ್ಬರು ಅಪಮಾನಕ್ಕೆ ಹೊಣೆಗಾರರು ಎಂದು ಲೇವಡಿ ಮಾಡಿದರು.
ತೆರಿಗೆ ಹಾಕುವುದರಲ್ಲಿ ಸರ್ಕಾರದ್ದು ರಾಕೆಟ್ ವೇಗ. ಗುಂಡಿ ಮುಚ್ಚುವುದರಲ್ಲಿ ಆಮೆ ವೇಗವೂ ಇಲ್ಲ. ಕೊಳ್ಳೆ ಹೊಡೆಯುವುದರಲ್ಲಿ ಇರುವ ಉನ್ಮಾದ, ಅಭಿವೃದ್ಧಿಯತ್ತ ವಿಪರೀತ ಉಪೇಕ್ಷೆ. ಚುನಾವಣಾ ಗ್ಯಾರಂಟಿಗಳಿಗೆ ರಾಜ್ಯದ ಅಭಿವೃದ್ಧಿ ಬಲಿಯಾಗಿ ಗ್ರೇಟರ್ ಬೆಂಗಳೂರು ಗಬ್ಬೆದ್ದು ನಾರುತ್ತಿದೆ! ಎಂದು ಕಿಡಿಕಾರಿದ್ದಾರೆ.
ತೆರಿಗೆ ಹಣ ಏನಾಗುತ್ತಿದೆ?
ಗುಂಡಿ ಮುಚ್ಚುವುದಕ್ಕೆ ಬಿಡಿಗಾಸಿಲ್ಲದ ಸರ್ಕಾರ ಜನರಿಂದ ಕಿತ್ತುಕೊಳ್ಳುತ್ತಿರುವ ತೆರಿಗೆ ಹಣ ಏನು ಮಾಡುತ್ತಿದೆ? ಅದು ಯಾರ ಜೇಬು ಸೇರುತ್ತಿದೆ? ಕಂಪನಿಗಳು ರಾಜ್ಯ ಸರ್ಕಾರದ ಮೇಲೆ ಭರವಸೆ ಕಳೆದುಕೊಂಡು ನೆರೆ ರಾಜ್ಯಗಳತ್ತ ವಲಸೆ ಹೋಗುತ್ತಿವೆ. ಆ ರಾಜ್ಯಗಳು ಇಂತಹ ಸಮಯಕ್ಕೇ ಕಾಯುತ್ತಾ ರಿಯಾಯಿತಿಗಳನ್ನು ನೀಡುತ್ತಿವೆ. ಭಂಡ ಸರ್ಕಾರಕ್ಕೆ ಇದು ಅರ್ಥವಾಗುತ್ತಿಲ್ಲ. ಸರ್ಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್. ಅಶೋಕ್ ಟೀಕೆ
ಬ್ಲಾಕ್‌ಬಕ್ ಸಂಸ್ಥೆ ನಗರ ತೊರೆಯುತ್ತೇವೆ ಎಂಬ ಹೇಳಿಕೆಗೆ ವಿಧಾನಸಭಾ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, "ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ, ನೀವು ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ, ಬೆಂಗಳೂರಿನ ಹೆಸರಿಗೆ ಕಳಂಕ ತರುವ ಕೆಲಸ ಮಾಡಬೇಡಿ. ಉದ್ಯಮಿಗಳಿಗೆ, ಹೂಡಿಕೆದಾರರಿಗೆ ನೆಚ್ಚಿನ ತಾಣವಾಗಿದ್ದ ಬೆಂಗಳೂರು ನಗರ, ಇಂದು ನಿಮ್ಮ ದುರಾಡಳಿತದಿಂದ, ನಿರ್ಲಕ್ಷ್ಯದಿಂದ ಐಟಿ-ಬಿಟಿ ಕಂಪನಿಗಳು, ಕೈಗಾರಿಕೆಗಳು ಬೇರೆ ರಾಜ್ಯಗಳಿಗೆ ಹೋಗುವ ಆಲೋಚನೆ ಮಾಡುತ್ತಿವೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ನಗರಕ್ಕೆ ಕಳಂಕ ತರುವ ಪಾಪದ ಕೆಲಸ ಮಾಡಿದರೆ ಇತಿಹಾಸದಲ್ಲಿ ಕನ್ನಡಿಗರು ಎಂದಿಗೂ ಕ್ಷಮಿಸದ ಖಳನಾಯಕನಾಗುತ್ತೀರಿ" ಎಂದು ಟೀಕಿಸಿದ್ದಾರೆ.
ಏನಿದು ಕಂಪನಿಗಳ ವಲಸೆ?
ಬೆಂಗಳೂರಿನಲ್ಲಿ ವಿಪರೀತ ಗುಂಡಿ ಹಾಗೂ ಧೂಳಿನಿಂದ ಉದ್ಯೋಗಿಗಳು ಕಚೇರಿ ತಲುಪಲು 90 ನಿಮಿಷಕ್ಕಿಂತ ಹೆಚ್ಚು ಸಮಯ ಹಿಡಿಯುತ್ತಿದೆ. ಕಳೆದ ಎಂಟು ವರ್ಷಗಳಿಂದ ನಗರದಲ್ಲಿ ಮನೆ ಹಾಗೂ ಕಚೇರಿ ಹೊಂದಿದ್ದರೂ ಯಾವುದೇ ಬದಲಾವಣೆಯಾಗಿಲ್ಲ. ಆದ್ದರಿಂದ ನಗರವನ್ನು ತೊರೆಯುತ್ತಿದ್ದೇವೆ ಎಂದು ಬ್ಲಾಕ್‌ಬಕ್ ಸಂಸ್ಥಾಪಕ ರಾಜೇಶ್ ಯಾಬಾಜಿ ಬುಧವಾರ(ಸೆ.17) ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆಂಧ್ರಪ್ರದೇಶ ಸರ್ಕಾರದ ಸಚಿವ ನಾರಾ ಲೋಕೇಶ್, ನಿಮಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಹಾಗೂ ರಿಯಾಯಿತಿ ನೀಡುತ್ತೇವೆ. ನಮ್ಮಲ್ಲಿಗೆ ಬನ್ನಿ ಎಂದು ಆಹ್ವಾನ ನೀಡಿದ್ದರು.