Kolkata rape-murder: ಸರ್ಕಾರಿ ಆಸ್ಪತ್ರೆಗಳಲ್ಲಿ ಭದ್ರತೆ ಹೆಚ್ಚಿಸಲು ಕೇಂದ್ರ ಸಲಹೆ

Update: 2024-08-20 12:20 GMT
ಕೋಲ್ಕತ್ತಾದಲ್ಲಿ ವೈದ್ಯೆಯ ಹತ್ಯೆಯನ್ನು ಖಂಡಿಸಿ, ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಯ ವೈದ್ಯರು ಆಗಸ್ಟ್ 20, 2024 ರಂದು ಪ್ರತಿಭಟನೆ ನಡೆಸಿದರು.

ವೈದ್ಯರು ಸೇರಿದಂತೆ ಆರೋಗ್ಯ ಕಾರ್ಯಕರ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ವ್ಯಾಪಕ ಶ್ರೇಣಿಯ ಭದ್ರತಾ ಕ್ರಮಗಳನ್ನು ಜಾರಿಗೆ ತರಬೇಕೆಂದು ತನ್ನ ಎಲ್ಲ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಕೋಲ್ಕತ್ತಾ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ-ಕೊಲೆಯ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಪ್ರವೇಶ ಸುಲಭಸಾಧ್ಯವಾಗಿದ್ದು, ಅನಧಿಕೃತ ವ್ಯಕ್ತಿಗಳು ಮುಕ್ತವಾಗಿ ಪ್ರವೇಶಿಸುತ್ತಿದ್ದಾರೆ ಎಂಬುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗಮನಿಸಿದೆ.

ಆರೈಕೆ ಪಡೆಯಲು ಪ್ರವೇಶ ಮುಖ್ಯವಾಗಿದ್ದರೂ, ಇದರಿಂದ ಅಪಾಯ ಉಂಟಾಗಬಹುದು ಎಂದು ಕೇಂದ್ರ ಸರ್ಕಾರದ ಆಸ್ಪತ್ರೆಗಳು ಮತ್ತು ಇತರ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸಚಿವಾಲಯ ಪತ್ರ ಬರೆದಿದೆ.

ಭದ್ರತೆ ಹೆಚ್ಚಿಸಿ: ʻಆಸ್ಪತ್ರೆಗಳು ಕೆಲವೊಮ್ಮೆ ಹಿಂಸಾಚಾರ ಕೃತ್ಯಗಳಿಗೆ ಗುರಿಯಾಗುತ್ತವೆ. ಆರೈಕೆಯಲ್ಲಿ ಅತೃಪ್ತಿ ಅಥವಾ ಬಾಹ್ಯ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮೇಲೆ ಹಲ್ಲೆ ನಡೆಯಬಹುದು. ಆರೋಗ್ಯ ವೃತ್ತಿಪರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ, ʼಎಂದು ಹೇಳಿದೆ.

ಆಯಕಟ್ಟಿನ ಸ್ಥಳಗಳಲ್ಲಿ, ವಿಶೇಷವಾಗಿ ಪ್ರವೇಶದ್ವಾರ, ನಿರ್ಗಮನ ದ್ವಾರ, ಹಜಾರಗಳು ಸೂಕ್ಷ್ಮ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಹೈರೆಸಲ್ಯೂಶನ್ ಕ್ಲೋಸ್ ಸರ್ಕ್ಯೂಟ್ ಟೆಲಿವಿಷನ್ (ಸಿಸಿಟಿವಿ) ಕ್ಯಾಮೆರಾ ಅಳವಡಿಸಲು ಸೂಚಿಸಿದೆ.

ನಿಯಂತ್ರಣ ಕೊಠಡಿ, ಐಡಿ ಬ್ಯಾಡ್ಜ್‌ಗಳು: ಸುಶಿಕ್ಷಿತ ಭದ್ರತಾ ಸಿಬ್ಬಂದಿ ಜೊತೆಗೆ ತುರ್ತು ಸಂದರ್ಭಗಳಲ್ಲಿ ತ್ವರಿತ ಪ್ರತಿಕ್ರಿಯೆ ನೀಡಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಬೇಕು. ಸಿಬ್ಬಂದಿ, ರೋಗಿಗಳು ಮತ್ತು ಸಂದರ್ಶಕರಿಗೆ ಗುರುತಿನ ಬ್ಯಾಡ್ಜ್‌ ನೀಡಬೇಕು ಮತ್ತು ಕರ್ತವ್ಯದಲ್ಲಿರುವಾಗ ಅವುಗಳ ಕಡ್ಡಾಯವಾಗಿ ಧರಿಸಬೇಕು ಎಂದು ಹೇಳಿದೆ. 

ವೈದ್ಯರು, ದಾದಿಯರು ಸೇರಿದಂತೆ ಎಲ್ಲ ಆಸ್ಪತ್ರೆ ಸಿಬ್ಬಂದಿಗೆ ಭದ್ರತಾ ಬೆದರಿಕೆಗಳನ್ನು ಗುರುತಿಸುವ ಮತ್ತು ಪ್ರತಿಕ್ರಿಯಿಸುವ ತರಬೇತಿ ನೀಡಬೇಕು. ಅವರು ತುರ್ತು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸೂಕ್ತ ಕೌಶಲ ಹೊಂದಿರಬೇಕು. ಮಹಿಳಾ ಆರೋಗ್ಯ ವೃತ್ತಿಪರರಿಗೆ ಮೂಲಸೌಕರ್ಯಗಳೊಂದಿಗೆ ಸಾಕಷ್ಟು ಸಂಖ್ಯೆಯ ಸುಭದ್ರವಾದ ಕರ್ತವ್ಯ ಕೊಠಡಿಗಳನ್ನು ಒದಗಿಸಬೇಕು. ರಾತ್ರಿ ವೇಳೆ ಒಬ್ಬರಿಗಿಂತ ಹೆಚ್ಚು ಮಹಿಳಾ ಆರೋಗ್ಯ ವೃತ್ತಿಪರರನ್ನು ನಿಯೋಜಿಸುವುದು ಉತ್ತಮ. ರಾತ್ರಿ ಕರ್ತವ್ಯದಲ್ಲಿರುವಾಗ ಸುರಕ್ಷಿತ ಸಾರಿಗೆ ವ್ಯವಸ್ಥೆ ಮಾಡಬೇಕು,ʼ ಎಂದು ಹೇಳಿದೆ. 

Tags:    

Similar News