Kolkata rape-murder: ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ವಿಧ್ವಂಸಕ ಕೃತ್ಯ, 19 ಮಂದಿ ಬಂಧನ

Update: 2024-08-16 06:19 GMT
ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ಹಿಂಸಾಚಾರವನ್ನು ನಿಯಂತ್ರಿಸಲು ಕೋಲ್ಕತ್ತಾ ಪೊಲೀಸರು ಅಶ್ರುವಾಯು ಬಳಸಿದರು

ಕೋಲ್ಕತ್ತದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ದಾಂಧಲೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 19 ಜನರನ್ನು ಬಂಧಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ಶುಕ್ರವಾರ (ಆಗಸ್ಟ್ 16) ತಿಳಿಸಿದ್ದಾರೆ.

ನಗರದ ನ್ಯಾಯಾಲಯವು ಬಂಧಿತರನ್ನು ಆಗಸ್ಟ್ 22 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ, ಪಶ್ಚಿಮ ಬಂಗಾಳದಾದ್ಯಂತ ಮಹಿಳೆಯರು ಗುರುವಾರ (ಆಗಸ್ಟ್ 15) ಮಧ್ಯರಾತ್ರಿ ಪ್ರತಿಭಟನೆ ನಡೆಸುತ್ತಿರುವ ಹೊತ್ತಿನಲ್ಲೇ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ, ನರ್ಸಿಂಗ್ ಸ್ಟೇಷನ್, ಔಷಧ ಅಂಗಡಿ ಮತ್ತು ಆಸ್ಪತ್ರೆಯ ಹೊರರೋಗಿ ವಿಭಾಗದ ಭಾಗಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಹಿಂಸಾಚಾರದಲ್ಲಿ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಕಿರಿಯ ವೈದ್ಯರ ಮುಷ್ಕರ ಮುಂದುವರಿಕೆ: ಅತ್ಯಾಚಾರ-ಕೊಲೆಯನ್ನು ಪ್ರತಿಭಟಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರಿಯಿತು. ಧರಣಿ ನಿರತ ವೈದ್ಯರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಮತ್ತು ಕೆಲಸದ ಸ್ಥಳದಲ್ಲಿ ಭದ್ರತೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.

ʻಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ದಾಂಧಲೆ ಮತ್ತು ಹಿಂಸಾಚಾರದ ವೇಳೆಯಲ್ಲಿ ಪೊಲೀಸರು ಸಮರ್ಪಕ ಕ್ರಮ ಕೈಗೊಂಡಿಲ್ಲ,ʼ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಎರಡು ಮಹಡಿಗಳನ್ನು ನಾಶಪಡಿಸಲಾಗಿದ್ದು, ಔಷಧಗಳನ್ನು ಲೂಟಿ ಮಾಡಲಾಗಿದೆ ಮತ್ತು ಮೂಲ ಸೌಕರ್ಯ ಹಾಗೂ ಉಪಕರಣಗಳು ಹಾನಿಗೊಳಗಾಗಿವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಸಂಜೆ ಹೇಳಿದ್ದರು.

Tags:    

Similar News