Kolkata doctor rape-murder: ಆರೋಪಿ 4 ಬಾರಿ ವಿವಾಹಿತ, ಹಿಂಸಾತ್ಮಕ ಪೋರ್ನ್‌ ವ್ಯಸನಿ

Update: 2024-08-13 07:11 GMT

ಕೋಲ್ಕತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತ ವ್ಯಕ್ತಿಯು ʻಅಸ್ವಾಭಾವಿಕ, ಕ್ಷೋಭೆಯುಂಟು ಮಾಡುವ ಮತ್ತು ಹಿಂಸಾತ್ಮಕ ಪೋರ್ನ್ ವ್ಯಸನಿʼ ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ.

ʻಆತನ ಮೊಬೈಲ್ ಫೋನ್‌ನಲ್ಲಿ ಇಂತಹ ಹಲವಾರು ಕ್ಲಿಪ್‌ಗಳಿವೆ. ಅವನ ಮನಸ್ಥಿತಿ ಬಗ್ಗೆ ಚಿಂತಿತರಾಗಿದ್ದೇವೆ. ಅದು ಅಸಹಜ,ʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಆರೋಪಿ ಸಂಜಯ್ ರಾಯ್(33) ನಾಲ್ಕು ಬಾರಿ ಮದುವೆಯಾಗಿದ್ದಾನೆ. ಪತ್ನಿಯರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಇತಿಹಾಸವೂ ಇದೆ. ಮನೆಯಲ್ಲಿ ಜಗಳದ ಶಬ್ದ ಕೇಳಿದ್ಧೇವೆ ಎಂದು ನೆರೆಹೊರೆಯವರು ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚು ಕಾಲ ಉಳಿಯದ ಮದುವೆ: ಆರೋಪಿಯ ಮೊದಲ ಪತ್ನಿ ಬೆಹಲಾ, ಎರಡನೆಯವರು ಪಾರ್ಕ್ ಸರ್ಕಸ್‌ ಮತ್ತು ಮೂರನೇ ಪತ್ನಿ ಬ್ಯಾರಕ್‌ಪುರದವರು. ಆದರೆ, ಈ ಮದುವೆಗಳು ಹೆಚ್ಚು ಕಾಲ ಉಳಿಯಲಿಲ್ಲ. ಪೆಟ್ರೋಲ್ ಬಂಕ್‌ ನಲ್ಲಿ ಕೆಲಸ ಮಾಡುತ್ತಿದ್ದ ಅಲಿಪುರದ ಮಹಿಳೆಯೊಟ್ಟಿಗೆ ನಾಲ್ಕನೇ ವಿವಾಹವಾಗಿತ್ತು.ಆಕೆ ಕೌಟುಂಬಿಕ ಹಿಂಸಾಚಾರದ ಬಗ್ಗೆ ದೂರು ದಾಖಲಿಸಿದ್ದು, ಆನಂತರ ಕಾನೂನುಬದ್ಧವಾಗಿ ಬೇರ್ಪಟ್ಟಳು ಎಂದು ವರದಿಯಾಗಿದೆ.

ಸಂಜಯ್ ರಾಯ್ ತರಬೇತಿ ಪಡೆದ ಬಾಕ್ಸರ್. 2019 ರಲ್ಲಿ ನಾಗರಿಕ ಸ್ವಯಂಸೇವಕನಾಗಿ ಪೊಲೀಸ್‌ ಇಲಾಖೆ ಸೇರಿದರು. ಅವರನ್ನು ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪೊಲೀಸ್ ಹೊರ ಠಾಣೆಗೆ ನಿಯೋಜಿಸಲಾಗಿತ್ತು.

ಬೂಟಿನ ಮೇಲೆ ರಕ್ತದ ಕಲೆ: ಅಪರಾಧ ನಡೆದ ಸ್ಥಳದಲ್ಲಿ ಅವನ ಬ್ಲೂಟೂತ್ ಹೆಡ್‌ಸೆಟ್ ಪತ್ತೆಯಾದ ನಂತರ ಪೊಲೀಸರು ಆತನನ್ನು ಬಂಧಿಸಿದರು. ಆತ ಹತ್ಯೆ ಬಳಿಕ ಬ್ಯಾರಕ್‌ಗೆ ಹಿಂತಿರುಗಿ, ಕೆಲವು ಗಂಟೆ ಕಾಲ ಮಲಗಿದ್ದ. ಆನಂತರ ಧರಿಸಿದ್ದ ಉಡುಪು ತೊಳೆದ. ಆದರೆ, ಆತನ ಶೂ ಮೇಲೆ ರಕ್ತದ ಕಲೆಗಳು ಉಳಿದುಕೊಂಡಿದ್ದವು. ಆತನ ವಿರುದ್ಧ ಬಿಎನ್‌ಎಸ್ ಸೆಕ್ಷನ್ 64 (ಅತ್ಯಾಚಾರ) ಮತ್ತು 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Similar News