ಪಾಲಕ್ಕಾಡ್ (ಕೇರಳ): ಪಶ್ಚಿಮ ಬಂಗಾಳದಲ್ಲಿ ವೈದ್ಯೆ ಮೇಲಿನ ದೌರ್ಜನ್ಯ ಘಟನೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದ ರಾಷ್ಟ್ರೀಯ ಸಮನ್ವಯ ಸಮಾವೇಶವು ಖಂಡಿಸಿದೆ. ಇದು ಅತ್ಯಂತ ದುರದೃಷ್ಟಕರ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್ ಎಂದು ಸೋಮವಾರ ಹೇಳಿದ್ದಾರೆ.
ಮೂರು ದಿನಗಳ 'ಸಮನ್ವಯ್ ಬೈಠಕ್' ಮುಕ್ತಾಯಗೊಂಡ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ʻದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತ್ವರಿತ ನ್ಯಾಯ ಒದಗಿಸಲು ಕಾನೂನು ಮತ್ತು ಶಿಕ್ಷೆ ಕ್ರಮಗಳನ್ನು ಮರುಪರಿಶೀಲಿಸುವ ಅವಶ್ಯಕತೆಯಿದೆ,ʼ ಎಂದರು.
ʻಕೋಲ್ಕತ್ತಾದ ಮಹಿಳಾ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ಬೈಠಕ್‌ನಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಇದೊಂದು ಅತ್ಯಂತ ದುರದೃಷ್ಟಕರ ಘಟನೆಯಾಗಿದ್ದು, ಎಲ್ಲರೂ ಆತಂಕಗೊಂಡಿದ್ದಾರೆ. ದೇಶದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿದ್ದು, ಸಭೆಯಲ್ಲಿ ಸರ್ಕಾರದ ಪಾತ್ರ, ಅಧಿಕೃತ ಕಾರ್ಯವಿಧಾನ, ಕಾನೂನುಗಳು, ಶಿಕ್ಷೆ- ದಂಡ ಮತ್ತು ಕಾರ್ಯವಿಧಾನಗಳ ಬಗ್ಗೆ ಚರ್ಚಿಸಲಾಯಿತು,ʼ ಎಂದು ಹೇಳಿದರು.
ʻಇವನ್ನು ಮರುಪರಿಶೀಲಿಸುವ ಅವಶ್ಯಕತೆಯಿದೆ. ಸಮರ್ಪಕ ಕಾರ್ಯವಿಧಾನ, ಶೀಘ್ರ ತನಿಖೆ- ವಿಚಾರಣೆಯಿಂದ ಸಂತ್ರಸ್ಥೆಗೆ ನ್ಯಾಯ ನೀಡಬಹುದು,ʼ ಎಂದು ಅಂಬೇಕರ್ ಹೇಳಿದರು.
ಆಗಸ್ಟ್ 9 ರಂದು ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಪ್ರಕರಣದಲ್ಲಿ ನಾಗರಿಕ ಸ್ವಯಂಸೇವಕನನ್ನು ಬಂಧಿಸಲಾಗಿದೆ.