ಶಿಶು ಮರಣ ಪ್ರಮಾಣ: ಅಮೆರಿಕವನ್ನೇ ಹಿಂದಿಕ್ಕಿದ ಕೇರಳ- ಆದರೂ ಅಸುರಕ್ಷಿತ ಹೆರಿಗೆಗೆ ಬಿದ್ದಿಲ್ಲ ಪೂರ್ಣ ಕಡಿವಾಣ
ಕೇರಳ ಎರಡು ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಒಂದು ರಾಜ್ಯದ ಶಿಶು ಮರಣ ಪ್ರಮಾಣವು ಅಮೆರಿಕವನ್ನು ಹಿಂದಿಕ್ಕಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇಷ್ಟಾಗಿಯೂ ರಾಜ್ಯದಲ್ಲಿ ಮನೆಯಲ್ಲೆ ನಡೆಯುವ ಅಸುರಕ್ಷಿತ ಹೆರಿಗೆಗೆ ಕಡಿವಾಣ ಬಿದ್ದಿಲ್ಲ ಎಂಬುದು ವಿಷಾದನೀಯ.;
ಕೇರಳವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ರಾಜ್ಯದ ಶಿಶು ಮರಣ ದರವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಘೋಷಿಸಿದರು. ಪ್ರತಿ 1,000 ಜೀವಂತ ಜನನಗಳಿಗೆ ಕೇವಲ 5 ಶಿಶು ಮರಣ ಸಂಭವಿಸಿದೆ, ಇದು ಅಮೆರಿಕಕ್ಕಿಂತಲೂ ಕಡಿಮೆ ಎಂದು ಅವರು ತಿಳಿಸಿದ್ದಾರೆ.
ಈ ಸಾಧನೆಯನ್ನು ಸಂಭ್ರಮಿಸುತ್ತಿರುವ ಹೊತ್ತಿನಲ್ಲೇ, ದುರದೃಷ್ಟಕರ ಎನ್ನುವಂತೆ ಮತ್ತೊಂದು ವರದಿ ಹೊರಬಿದ್ದಿದೆ. ಧಾರ್ಮಿಕ ಕಾರಣಗಳಿಗಾಗಿ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಲು ತಾಯಿ ನಿರ್ಧರಿಸಿದ ಕಾರಣ, ರಾಜ್ಯದಲ್ಲಿ ಒಂದು ಶಿಶು ಮೃತಪಟ್ಟಿದೆ. ಈ ಸಾವು ತಪ್ಪಿಸಬಹುದಾಗಿತ್ತು ಎಂದು ವರದಿ ಹೇಳಿದೆ.
ಈ ವೈರುಧ್ಯವು ಬಹಳ ತೀವ್ರ ಮಟ್ಟದ್ದೂ ಹೌದು. ಶಿಶುಗಳ ಬದುಕುಳಿಯುವ ಪ್ರಮಾಣಕ್ಕೆ ಸಂಬಂಧಿಸಿದಂತೆ ಜಾಗತಿಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜ್ಯವೊಂದು, ಕುಟುಂಬಗಳು ಸಾಂಸ್ಥಿಕ ಆರೈಕೆಯಿಂದ ದೂರ ಸರಿದಾಗ, ಅಪರೂಪಕ್ಕಾದರೂ ವಿನಾಶಕಾರಿ ಸಾವುಗಳನ್ನು ನೋಡುವಂತಾಗಿದೆ.
ಕೇರಳವು ಈಗ ಅಮೆರಿಕಾವನ್ನೂ ಹಿಂದಿಕ್ಕಿರುವುದರಿಂದ ಜಾಗತಿಕ ಮನ್ನಣೆಗೆ ಪಾತ್ರವಾಗಿದೆ. ಜಾಗತಿಕ ಮಾನದಂಡಗಳನ್ನು ಪರಿಗಣಿಸುವುದಾದರೆ ಕೇರಳದ ಅಂಕಿಅಂಶಗಳು ಫಿನ್ಲ್ಯಾಂಡ್, ಜಪಾನ್ ಮತ್ತು ಕ್ಯೂಬಾದಂತಹ ದೇಶಗಳ ಸಾಲಿನಲ್ಲಿ ನಿಲ್ಲುತ್ತವೆ. ಈ ದೇಶಗಳು ಶಿಶುಗಳ ಬದುಕುಳಿಯುವ ಪ್ರಮಾಣಕ್ಕೆ ಸಂಬಂಧಿಸಿ ದೃಢವಾದ ದರಗಳ ಕಾರಣಕ್ಕಾಗಿ ವ್ಯಾಪಕ ಮೆಚ್ಚುಗೆ ಪಡೆದಿವೆ.
ಹೊಸ ಮೈಲಿಗಲ್ಲಿನ ಸ್ಥಾಪನೆ
ಸಚಿವೆ ವೀಣಾ ಜಾರ್ಜ್ ಅವರು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ಭಾರತದ ರಿಜಿಸ್ಟ್ರಾರ್ ಜನರಲ್ ಅವರ ಇತ್ತೀಚಿನ ಮಾದರಿ ನೋಂದಣಿ ವ್ಯವಸ್ಥೆಯ ವರದಿಯನ್ನು ಉಲ್ಲೇಖಿಸಿದ್ದಾರೆ. ಕೇರಳವು ದೇಶದಲ್ಲಿ ಬೇರೆ ಯಾವ ರಾಜ್ಯವೂ ಹೊಂದಿರದ ಮೈಲಿಗಲ್ಲನ್ನು ಸಾಧಿಸಿದೆ ಎಂದು ಅವರು ಘೋಷಿಸಿದರು. ಅದರ ಶಿಶು ಮರಣ ದರವು ರಾಷ್ಟ್ರೀಯ ಸರಾಸರಿ 26ಕ್ಕೆ ಹೋಲಿಸಿದರೆ 5ಕ್ಕೆ ಇಳಿದಿದೆ ಎಂದು ತಿಳಿಸಿದ್ದಾರೆ.
“ಕೇರಳದ ಶಿಶು ಮರಣ ದರವು (IMR) ಈಗ ಅಮೆರಿಕದ 5.6 ದರಕ್ಕಿಂತ ಕಡಿಮೆಯಾಗಿದೆ, ಈ ಸಾಧನೆಯು ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ನಮ್ಮ ರಾಜ್ಯದ ಬಲವನ್ನು ಪ್ರತಿಬಿಂಬಿಸುತ್ತದೆ” ಎಂದು ಅವರು ಬರೆದುಕೊಂಡಿದ್ದಾರೆ. ರೋಗ ನಿಯಂತ್ರಣ ಮತ್ತು ಪ್ರತಿಬಂಧಕ ಕೇಂದ್ರಗಳು 2022ರಲ್ಲಿ ಅಮೆರಿಕದ ಶಿಶು ಮರಣ ದರ 5.6 ಎಂದು ವರದಿ ಮಾಡಿದ್ದವು.
ಕೇರಳದ ಶಿಶು ಮರಣ ದರದ ಅಂಕಿಅಂಶಗಳು ಇತ್ತೀಚಿನ ವರ್ಷಗಳಲ್ಲಿ ಕ್ರಮೇಣ ಇಳಿಕೆಯನ್ನು ತೋರಿಸುತ್ತಿವೆ. 2021ರಲ್ಲಿ ಇದು 6ರಷ್ಟಿತ್ತು. ಈಗ 5ಕ್ಕೆ ಇಳಿದಿರುವುದು ರಾಜ್ಯದ ಸಾರ್ವಜನಿಕ ಆರೋಗ್ಯ ಮಾದರಿಯ ಸ್ಥಿರತೆ ಮತ್ತು ಸಮಗ್ರತೆ ಕಾಯ್ದುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಈ ಮಾದರಿಯು ದಶಕಗಳ ಕಾಲ ಪ್ರಾಥಮಿಕ ಆರೋಗ್ಯ ರಕ್ಷಣೆ, ಸಾರ್ವತ್ರಿಕ ಸಾಂಸ್ಥಿಕ ಹೆರಿಗೆಗಳು ಮತ್ತು ಸಾಕ್ಷರತೆ ಹಾಗೂ ಮಹಿಳಾ ಸಬಲೀಕರಣದಂತಹ ಸಾಮಾಜಿಕ ಅಂಶಗಳಲ್ಲಿ ಮಾಡಿದ ಪ್ರಯತ್ನಗಳಿಂದ ರೂಪುಗೊಂಡಿದ್ದಾಗಿದೆ.
ಹೃದಯಂ-ಮಾತೃಯಾನ ಯೋಜನೆಗಳ ಫಲ
ಕೇರಳದ ಈ ಸಾಧನೆ ಆಕಸ್ಮಿಕವಾಗಿ ಬಂದುದೇನೂ ಅಲ್ಲ. ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ರಾಜ್ಯವು ವ್ಯವಸ್ಥಿತವಾಗಿ ಕೆಲಸ ಮಾಡುತ್ತ ಬಂದಿದೆ. ಈಗ ಬಹುತೇಕ ಎಲ್ಲಾ ಹೆರಿಗೆಗಳು ಆಸ್ಪತ್ರೆಗಳಲ್ಲಿಯೇ ನಡೆಯುತ್ತವೆ- ಗ್ರಾಮೀಣ ಪ್ರದೇಶಗಳಲ್ಲಿ ಇದರ ಪ್ರಮಾಣ ಶೇ.96% ಮತ್ತು ನಗರ ಪ್ರದೇಶಗಳಲ್ಲಿ ಶೇ. 99%. ಇದು ತರಬೇತಿ ಪಡೆದ ಸಿಬ್ಬಂದಿ, ಅಗತ್ಯ ಉಪಕರಣಗಳು ಮತ್ತು ತುರ್ತು ಸಂದರ್ಭದಲ್ಲಿ ಮಧ್ಯಸ್ಥಿಕೆಯ ಲಭ್ಯತೆಯನ್ನು ಖಚಿತಪಡಿಸುತ್ತದೆ.
ನವಜಾತ ಶಿಶುಗಳ ತುರ್ತು ನಿಗಾ ಘಟಕಗಳನ್ನು ದೂರದ ಬುಡಕಟ್ಟು ಮತ್ತು ಕರಾವಳಿ ಪ್ರದೇಶಗಳಿಗೂ ವಿಸ್ತರಿಸಲಾಗಿದೆ. ಜನ್ಮಜಾತವಾಗಿ ಬಂದ ಹೃದಯ ಸಂಬಂಧ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆ ನೀಡುವ 'ಹೃದಯಂ' ಯೋಜನೆ ಮತ್ತು ಹೆರಿಗೆಯ ನಂತರ ತಾಯಂದಿರಿಗೆ ಉಚಿತ ಸಾರಿಗೆ ಒದಗಿಸುವ 'ಮಾತೃಯಾನಂ' ಯೋಜನೆಗಳು ಅಪಾಯವನ್ನು ಮತ್ತಷ್ಟು ಕಡಿಮೆ ಮಾಡಿವೆ.
ಆದರೆ, ರಾಜ್ಯದೊಳಗಿನ ಕೆಲವು ಕರಾಳ ಸುದ್ದಿಗಳು ಈ ಅಂಕಿಅಂಶಗಳ ಸಂಭ್ರಮವನ್ನು ಕುಗ್ಗಿಸುವಂತೆ ಮಾಡಿದೆ. ಇಡುಕ್ಕಿಯ ಚೆರುತೋಣಿಯ ಪೆರುಂಕಲ ಎಂಬಲ್ಲಿ ಮನೆಯಲ್ಲಿ ನಡೆದ ಹೆರಿಗೆಯ ಬಳಿಕ ನವಜಾತ ಶಿಶುವೊಂದು ಮೃತಪಟ್ಟಿದೆ. ಮಗುವಿನ ತಂದೆ ಜಾನ್ಸನ್ (45) ಮತ್ತು ತಾಯಿ 45 ವರ್ಷದ ಮಹಿಳೆ ತಮ್ಮ ಧಾರ್ಮಿಕ ನಂಬಿಕೆಗಳಿಂದಾಗಿ ವೈದ್ಯಕೀಯ ಸಹಾಯವನ್ನು ನಿರಾಕರಿಸಿದ್ದರು ಮತ್ತು ತಂದೆಯೇ ಹೆರಿಗೆ ಮಾಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದ್ದರಿಂದ, ಕೇರಳದ ಶಿಶು ಮರಣದ ಕಥೆ ಎರಡು ಭಾಗಗಳಿವೆ. ಒಂದು ಕಡೆ, ಇದು ನೀತಿ, ಹೂಡಿಕೆ ಮತ್ತು ಸಾರ್ವಜನಿಕ ಆರೋಗ್ಯ ಆವಿಷ್ಕಾರಕ್ಕೆ ಸಿಕ್ಕ ಜಯ. ಮತ್ತೊಂದೆಡೆ, ವೈಯಕ್ತಿಕ ನಂಬಿಕೆಗಳಿಂದಾಗಿ ಒಂದು ಪ್ರಬಲ ವ್ಯವಸ್ಥೆಯೂ ಹೇಗೆ ದುರ್ಬಲಗೊಳ್ಳಬಹುದು ಎಂಬುದಕ್ಕೆ ಎಚ್ಚರಿಕೆಯ ಸಂದೇಶವನ್ನೂ ನೀಡಿದೆ.
ಮಗುವಿನ ಸಾವು ತಪ್ಪಿಸಬಹುದಿತ್ತು
ರಾಜ್ಯದ ಇನ್ನೊಂದು ಭಾಗದಲ್ಲಿ ನಡೆದ ಮತ್ತೊಂದು ಪ್ರತ್ಯೇಕ ಪ್ರಕರಣವು ಅಸಹಾಯಕತೆಯನ್ನು ಹೆಚ್ಚಿಸಿತು. ಮನೆಯಲ್ಲಿ ಹೆರಿಗೆ ಮಾಡಲು ಪ್ರಯತ್ನಿಸಿದ ಮಹಿಳೆಯೊಬ್ಬರು ತೊಡಕುಗಳಿಂದಾಗಿ ಮೃತಪಟ್ಟರು. ಆಕೆಯ ನವಜಾತ ಶಿಶುವನ್ನು ಹಲವು ದಿನಗಳವರೆಗೆ ಜೀವ ಬೆಂಬಲ ವ್ಯವಸ್ಥೆಯಲ್ಲಿ ಇಡಲಾಗಿದ್ದರೂ, ಅದು ಬದುಕುಳಿಯುವ ಬಗ್ಗೆ ಅನಿಶ್ಚಿತತೆ ಇತ್ತು. ಸಾಂಸ್ಥಿಕ ಹೆರಿಗೆಗಳು ಈ ಎರಡೂ ದುರಂತಗಳನ್ನು ಬಹುತೇಕ ಖಚಿತವಾಗಿ ತಡೆಯಬಹುದಿತ್ತು ಎಂದು ಆರೋಗ್ಯ ಅಧಿಕಾರಿಗಳು ದೃಢಪಡಿಸಿದರು.
ಆದರೆ ರಾಜ್ಯದ ಇನ್ನೊಂದು ಭಾಗದಲ್ಲಿ ಸಂಭವಿಸಿದ ಘಟನೆಯು ತೀವ್ರ ನಿರಾಶೆಗೆ ಕಾರಣವಾಯಿತು. ಮನೆಯಲ್ಲಿಯೇ ಹೆರಿಗೆಗೆ ಪ್ರಯತ್ನಿಸಿದ ಮಹಿಳೆ ಕೊನೆಯ ಕ್ಷಣದಲ್ಲಿ ಕಾಣಿಸಿಕೊಂಡ ಸಂಕೀರ್ಣ ಸಮಸ್ಯೆಗಳಿಂದ ಮೃತಪಟ್ಟಿದ್ದು ದುರಂತ. ಆಕೆಯ ನವಜಾತ ಶಿಶುವನ್ನು ಅನೇಕ ದಿನಗಳ ಕಾಲ ‘ಜೀವ ಸಂರಕ್ಷಣಾ ವ್ಯವಸ್ಥೆ’ಯಡಿ ಇರಿಸಿದ್ದರೂ ಬದುಕುಳಿಯುವ ಸಾಧ್ಯತೆ ಇರಲಿಲ್ಲ. ಆಕೆಯನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರೆ ಎರಡೂ ಸಾವು ನಿಶ್ಚಿತವಾಗಿ ತಪ್ಪಿಸಬಹುದಾಗಿತ್ತು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಎರಡೂ ಘಟನೆಗಳು ಸಾರ್ವಜನಿಕರ ಗಮನ ಸೆಳೆದಿದ್ದವು ಎಂಬುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ಕೇರಳ ಸಾಧಿಸಿದ ಉತ್ತಮ ದಾಖಲೆಗೆ ಹೋಲಿಸಿದರೆ ಇದು ವಿಶಿಷ್ಟ ಘಟನೆಗಳಾಗಿವೆ. ರಾಜ್ಯವು ಸಾಧಿಸಿದ ಜಾಗತಿಕ ಮೈಲಿಗಲ್ಲಿನ ಘೋಷಣೆಯ ಜೊತೆಗೇ ಇಡುಕ್ಕಿಯ ಮಗುವಿನ ಸಾವು ಸಂಭವಿಸಿದ್ದು ಕಾಕತಾಳೀಯ. ಹಾಗಿದ್ದೂ ತಳಮಟ್ಟದಲ್ಲಿ ಸಂಭವಿಸಿದ ದುರಂತವು ಜಾಗತಿಕ ಮಟ್ಟದಲ್ಲಿ ಉಂಟಾದ ಸಮಗ್ರ ಪ್ರಗತಿಗೆ ರಕ್ಷಣೆ ನೀಡುವುದಿಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ.
ಈ ದುರಂತಗಳಲ್ಲಿ ಸಾಮಾನ್ಯ ಅಂಶವೆಂದರೆ ವೈದ್ಯಕೀಯ ಸೇವೆಗಳ ಕೊರತೆಯಲ್ಲ, ಬದಲಾಗಿ ಅದನ್ನು ತಿರಸ್ಕರಿಸಿರುವುದು. ಈ ಎರಡೂ ಪ್ರಕರಣಗಳಲ್ಲಿ, ಧಾರ್ಮಿಕ ಅಥವಾ ಸಾಂಸ್ಕೃತಿಕ ನಂಬಿಕೆಗಳಿಂದಾಗಿ ಕುಟುಂಬಗಳು ಸಾಂಸ್ಥಿಕ ಆರೈಕೆಯಿಂದ ದೂರ ಉಳಿದವು. ಇಂತಹ ನಿರ್ಧಾರಗಳು ಕೇರಳದಲ್ಲಿ ಅಪರೂಪವಾಗಿದ್ದರೂ, ಇವು ನೀತಿಯ ಇತಿಮಿತಿಗಳು ಎಷ್ಟು ಎಂಬುದನ್ನು ಬಯಲು ಮಾಡುತ್ತವೆ ಎಂದು ಆರೋಗ್ಯ ಕಾರ್ಯಕರ್ತರು ಹೇಳುತ್ತಾರೆ. ರಾಜ್ಯವು ಆಸ್ಪತ್ರೆಗಳನ್ನು ನಿರ್ಮಿಸಬಹುದು, ವೈದ್ಯರಿಗೆ ತರಬೇತಿ ನೀಡಬಹುದು ಮತ್ತು ಆಂಬ್ಯುಲೆನ್ಸ್ಗಳನ್ನು ಒದಗಿಸಬಹುದು, ಆದರೆ ನಂಬಿಕೆಗಳೇ ಮೇಲುಗೈ ಪಡೆದಾಗ ಅವುಗಳನ್ನು ಬಳಸುವಂತೆ ಕುಟುಂಬಗಳ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ.
“ಇತ್ತೀಚೆಗೆ ಎರ್ನಾಕುಲಂನಲ್ಲಿ ನಡೆದ ಒಂದು ಘಟನೆಯಲ್ಲಿ, ತಾಯಿ ಮತ್ತು ಮಗು ಇಬ್ಬರಿಗೂ ಸಕಾಲದಲ್ಲಿ ವೈದ್ಯಕೀಯ ಸೇವೆ ಸಿಗದೆ ಹೋದರೆ ಸಾವನ್ನಪ್ಪಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದರು. ಹಾಗಿದ್ದರೂ ಗೃಹಿಣಿ ಅಪಾಯಕಾರಿ ಸ್ಥಿತಿಯಲ್ಲಿ ಮನೆಯಲ್ಲಿ ಹೆರಿಗೆಗೆ ಪ್ರಯತ್ನಿಸುತ್ತಿದ್ದಾಗ ಆಶಾ ಕಾರ್ಯಕರ್ತೆ ಮಧ್ಯಪ್ರವೇಶಿಸಿದ್ದರು. ಆದರೂ ಆ ದಂಪತಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದು ಅತ್ಯಂತ ಜಟಿಲ ಪರಿಸ್ಥಿತಿ,” ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಕೆಲ ದಿನಗಳ ಹಿಂದೆ 'ದಿ ಫೆಡರಲ್'ಗೆ ತಿಳಿಸಿದ್ದರು.
‘ಕೊನೆಯ ಮೈಲಿ’ ಸವಾಲು
ಸಾರ್ವಜನಿಕ ಆರೋಗ್ಯ ತಜ್ಞರು ಈ ಪ್ರಕರಣಗಳನ್ನು ಆರೋಗ್ಯ ಕ್ಷೇತ್ರದ "ಕೊನೆಯ ಮೈಲಿ" ಸವಾಲು ಎಂದು ಬಣ್ಣಿಸಿದ್ದಾರೆ. ಇದು ಭೌಗೋಳಿಕವಾಗಿ ಪ್ರವೇಶಿಸಲಾಗದ ಸಮಸ್ಯೆಯಲ್ಲ, ಬದಲಾಗಿ ಸಾಮಾಜಿಕ ಮತ್ತು ಸೈದ್ಧಾಂತಿಕವಾಗಿ ವ್ಯಕ್ತವಾಗಿರುವ ಪ್ರತಿರೋಧ. “ಆಸ್ಪತ್ರೆಯಲ್ಲಿ ಹೆರಿಗೆ ಮಾಡುವುದರಿಂದ ಆಗುವ ಸ್ಪಷ್ಟ ಪ್ರಯೋಜನಗಳ ಪುರಾವೆಗಳಿದ್ದರೂ, ಪ್ರಪಂಚದಾದ್ಯಂತ ಕೆಲವು ಗುಂಪುಗಳು ಸ್ವಯಂಘೋಷಿತ 'ನೈಸರ್ಗಿಕ' ಮನೆಯಲ್ಲಿನ ಹೆರಿಗೆಗೆ ಪ್ರೋತ್ಸಾಹ ನೀಡುವುದನ್ನು ನಾವು ನೋಡುತ್ತೇವೆ" ಎಂದು ಕೋಳಿಕ್ಕೋಡ್ನ ಹಿರಿಯ ರೋಗಶಾಸ್ತ್ರಜ್ಞ ಮತ್ತು ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಡಾ. ಕೆ.ಪಿ. ಅರವಿಂದನ್ ಹೇಳಿದ್ದಾರೆ.
"ಇದೇ ಮನಸ್ಥಿತಿಯ ಜನರು ಸಾಮಾನ್ಯವಾಗಿ ಮಕ್ಕಳ ನಿಗದಿತ ಲಸಿಕಾ ಕಾರ್ಯಕ್ರಮ ಮತ್ತು ಕೋವಿಡ್ ಲಸಿಕೆಗಳನ್ನು ಕೂಡ ವಿರೋಧಿಸುತ್ತಾರೆ. 'ನೈಸರ್ಗಿಕ ಜೀವನ'ದ ಹೆಸರಿನಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಅಪಾಯಕ್ಕೆ ಸಿಲುಕಿಸುತ್ತವೆ. ಕೇರಳದಲ್ಲಿಯೂ ಇಂತಹ ಗುಂಪುಗಳು ನಿಸರ್ಗ ಚಿಕಿತ್ಸಕರು, ಅಕ್ಯುಪಂಕ್ಚರ್ ವೈದ್ಯರು ಮತ್ತು ಕೆಲವು ಧಾರ್ಮಿಕ ಮೂಲಭೂತವಾದಿಗಳ ಬೆಂಬಲದೊಂದಿಗೆ ತಮ್ಮ ವಾದ ಮುಂದಿಡುತ್ತವೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ವಾಸ್ತವವಾಗಿ, ಅವರ ಮೇಲೆ ದಂಡನೀಯ ನರಹತ್ಯೆ ಆರೋಪ ಹೊರಿಸುವುದನ್ನು ಪರಿಗಣಿಸಬೇಕು" ಎಂದೂ ಅವರು ಸೇರಿಸುತ್ತಾರೆ.
ಇನ್ನಷ್ಟು ಸಮಾಲೋಚನೆಯ ಅಗತ್ಯತೆ
ಇತ್ತೀಚಿನ ವರ್ಷಗಳಲ್ಲಿ, ಸಾರ್ವಜನಿಕ ಆರೋಗ್ಯ ಅಭಿಯಾನಗಳು ಕೇವಲ ಸೇವೆಗಳ ಮೇಲೆ ಮಾತ್ರವಲ್ಲದೆ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡುತ್ತಾರೆ, ಸಮುದಾಯ ಮುಖಂಡರೊಂದಿಗೆ ಸಂವಾದ ನಡೆಸುತ್ತಾರೆ, ಮತ್ತು ಸಾಂಸ್ಥಿಕ ಹೆರಿಗೆಯು ಸುರಕ್ಷಿತ ಹಾಗೂ ಸಾಂಸ್ಕೃತಿಕವಾಗಿ ಸ್ವೀಕಾರಾರ್ಹ ಎಂದು ಮನವರಿಕೆ ಮಾಡಲು ಪ್ರಯತ್ನಿಸುತ್ತಾರೆ. ಆದರೂ, ಇಂತಹ ಕೆಲವು ವಿಶಿಷ್ಟ ಪ್ರಕರಣಗಳು ಮುಂದುವರಿದಿರುವುದು, ಇನ್ನಷ್ಟು ಸಮಾಲೋಚನೆ, ಸಂವಾದದ ಅವಶ್ಯಕತೆ ಇದೆ ಎಂಬುದನ್ನು ಸೂಚಿಸುತ್ತವೆ.
ಶಿಶುಗಳ ಸಾವಿನ ದುರಂತವು ಕೇರಳ ತನ್ನ ಪಯಣವನ್ನು ಇನ್ನೂ ಮುಗಿಸಿಲ್ಲ ಎಂಬುದರ ಸ್ಪಷ್ಟ ಸೂಚನೆಯೂ ಹೌದು, ಎಚ್ಚರಿಕೆಯೂ ಹೌದು. ರಾಜ್ಯದ ಶಿಶು ಮರಣ ದರದ ಸರಾಸರಿ ಫಿನ್ಲ್ಯಾಂಡ್ ಅಥವಾ ಜಪಾನ್ಗೆ ಸಮನಾಗಿರಬಹುದು, ಆದರೆ ನಂಬಿಕೆ ಅಥವಾ ಪರಿಸ್ಥಿತಿಗಳನ್ನು ಲೆಕ್ಕಿಸದೆ ಪ್ರತಿಯೊಬ್ಬ ತಾಯಿ ಮತ್ತು ಮಗುವನ್ನು ರಕ್ಷಿಸುವ ವರೆಗೂ ಈ ಪ್ರಗತಿ ಪೂರ್ಣಗೊಳ್ಳುವುದಿಲ್ಲ.
ವೀಣಾ ಜಾರ್ಜ್ ಅವರ ಹೇಳಿಕೆಯು ರಾಷ್ಟ್ರ ಮಟ್ಟದ ಹೆಡ್ಲೈನ್ಗಳಲ್ಲಿ ಪ್ರತಿಧ್ವನಿಸುತ್ತಿದ್ದಂತೇ, ಕಡಿವಾಣ ಹಾಕಬಹುದಾಗಿದ್ದ ಸಾವುಗಳ ಬಗೆಗಿನ ವರದಿಗಳು ಕಟು ವಾಸ್ತವವನ್ನು ತೆರೆದಿಟ್ಟವು. ನೀತಿ ನಿರೂಪಕರಿಗೆ ಈಗ ಇರುವ ಸವಾಲೆಂದರೆ, ಕಡಿಮೆ ಶಿಶು ಮರಣ ಪ್ರಮಾಣವನ್ನು (IMR) ಕಾಯ್ದುಕೊಳ್ಳುವುದು ಮಾತ್ರವಲ್ಲದೆ, ಅದರ ಪ್ರಯೋಜನಗಳು ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಮಾಡುವುದು.