ಕಚ್ಚತೀವು ವಿವಾದದಿಂದ ಬಿಜೆಪಿಗೆ ಹಿನ್ನಡೆ ಸಾಧ್ಯತೆ
ವಾಡ್ಜ್ ಬ್ಯಾಂಕ್ ಒಪ್ಪಂದ ಮುಂದೊತ್ತಿದ ಕಾಂಗ್ರೆಸ್-ಡಿಎಂಕೆ;
ತಮಿಳುನಾಡಿನ ಕಚ್ಚತೀವು ದ್ವೀಪದ ವಿವಾದವನ್ನು ಕೆದಕುವ ಬಿಜೆಪಿಯ ಕ್ರಮದಿಂದ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಯಾಗುವ ಸಾಧ್ಯತೆಯಿದೆ. ಈಗ ಚರ್ಚೆ 1976ರಲ್ಲಿ ಕಾಂಗ್ರೆಸ್ ಸರ್ಕಾರವು ಅತ್ಯಂತ ಶ್ರೀಮಂತ ಆಸ್ತಿಯಾದ ವಾಡ್ಜ್ ಬ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಂಡಿದ್ದರ ಕಡೆಗೆ ತಿರುಗಿದೆ.
1974ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರವು ಕಚ್ಚತೀವುವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿತು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೂರಿದ್ದರು.
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಆರ್‌ಟಿಐ ಮೂಲಕ ಪಡೆದ ಉತ್ತರದ ಆಧಾರದ ಮೇಲೆ ಪ್ರಧಾನಿ ಈ ಆರೋಪ ಮಾಡಿದ್ದರು. ʻಕಾಂಗ್ರೆಸ್ ಮತ್ತು ಡಿಎಂಕೆ ಕುಟುಂಬ ಘಟಕಗಳು. ಅವರು ಸ್ವಂತ ಪುತ್ರರು ಮತ್ತು ಪುತ್ರಿಯರ ಬಗ್ಗೆ ಮಾತ್ರ ಕಾಳಜಿ ವಹಿಸು ತ್ತಾರೆ. ಕಚ್ಚತೀವು ಮೇಲಿನ ಅವರ ನಿರ್ಲಕ್ಷ್ಯದಿಂದ ಬಡ ಮೀನುಗಾರರು ಮತ್ತು ವಿಶೇಷವಾಗಿ ಮೀನುಗಾರ ಮಹಿಳೆಯರ ಹಿತಾಸಕ್ತಿಗಳಿಗೆ ಧಕ್ಕೆಯಾಯಿತು,ʼ ಎಂದು ಸೋಮವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. 2014 ರಿಂದ 10 ವರ್ಷ ಸುಮ್ಮನಿದ್ದ ಕೇಂದ್ರ ಸರ್ಕಾರ, ಈಗ ಕಾಳಜಿ ತೋರುತ್ತಿರುವುದನ್ನು ಹಲವಾರು ಮೀನುಗಾರರ ಸಂಘಗಳು ಪ್ರಶ್ನಿಸಿವೆ. ಈ ಸೂಕ್ಷ್ಮ ವಿಷಯವನ್ನು ಬಳಸಿಕೊಳ್ಳುವ ಬಿಜೆಪಿಯ ತಂತ್ರವು ತಿರುಗುಬಾಣ ಆಗಿದೆ.
1974 ರಲ್ಲಿ ಕಚ್ಚತೀವುವನ್ನು ಹಸ್ತಾಂತರಿಸಿದ ನಂತರ ಇಂದಿರಾ ಅವರು 1976 ರಲ್ಲಿ ಸಮೃದ್ಧ ಜೀವವೈವಿಧ್ಯಕ್ಕೆ ಹೆಸರುವಾಸಿಯಾದ ಪ್ರಸ್ಥ ಭೂಮಿ ವಾಡ್ಜ್ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದ್ದರು ಎಂಬ ಅಂಶ ಕಾಂಗ್ರೆಸ್-ಡಿಎಂಕೆಗೆ ವರವಾಗಿ ಪರಿಣಮಿಸಿದೆ. 1974 ರ ಭಾರತ-ಶ್ರೀಲಂಕಾ ಒಪ್ಪಂದ ಕಡಲಿನ ಗಡಿಗೆ ಸಂಬಂಧಿಸಿದ ಒಪ್ಪಂದವಾಗಿದ್ದು, ಕಚ್ಚತೀವಿನಲ್ಲಿ ಭಾರತೀಯರ ಮೀನುಗಾರಿಕೆ ಹಕ್ಕುಗಳ ಮೇಲೆ ಪರಿಣಾಮ ಬೀರಿತು. ಆದರೆ, 1976 ರಲ್ಲಿ ಶ್ರೀಲಂಕಾವು ಕನ್ಯಾಕುಮಾರಿಗೆ ಹತ್ತಿರವಿರುವ ವಾಡ್ಜ್ ಬ್ಯಾಂಕ್‌ನ ಸಂಪೂರ್ಣ ಹತೋಟಿಯನ್ನು ಭಾರತಕ್ಕೆ ನೀಡಿತು.
ತಮಿಳುನಾಡು ಕಾಂಗ್ರೆಸ್ ಸಮಿತಿಯ ವಕ್ತಾರ ಪಿ.ವಿ. ಸೆಂಥಿಲ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ʻ ಇಂದಿರಾ ಅವರು ವಾಡ್ಜ್ ಬ್ಯಾಂಕ್ ಒಪ್ಪಂದವನ್ನು ಆರಂಭಿಸಿದರು. ತಮಿಳುನಾಡು ಮತ್ತು ಕೇರಳದ ಮೀನುಗಾರರ ಜೀವನೋಪಾಯದ ಬಗ್ಗೆ ಯೋಚಿಸಿದಾಗ, ಕಚ್ಚತೀವಿಗೆ ಹೋಲಿಸಿದರೆ ವಾಡ್ಜ್ ಬಹಳ ದೊಡ್ಡದುʼ ಎಂದು ಹೇಳಿದರು.
ಕಚ್ಚತೀವು ವಿರುದ್ಧ ವಾಡ್ಜ್ ಬ್ಯಾಂಕ್: ಕಚ್ಚತೀವು ಪಾಕ್ ಜಲಸಂಧಿಯಲ್ಲಿರುವ 1,09,285 ಎಕರೆ ವಿಸ್ತಾರವಿರುವ ದ್ವೀಪ. ರಾಮೇಶ್ವರಂಗೆ ಹತ್ತಿರದಲ್ಲಿರುವ ಇದು ಜನವಸತಿ ಇಲ್ಲದ ದ್ವೀಪ. ಕುಡಿಯುವ ನೀರಿನ ಮೂಲವಿಲ್ಲ. ಇಲ್ಲಿರುವ ಚರ್ಚ್ ಮೂರು ದಿನಗಳ ವಾರ್ಷಿಕ ಉತ್ಸವ ಆಚರಿಸಲಾಗುತ್ತದೆ. ಉತ್ಸವವು ಭಾರತ ಮತ್ತು ಶ್ರೀಲಂಕಾ ಎರಡರಿಂದಲೂ ಭಕ್ತರನ್ನು ಆಕರ್ಷಿಸುತ್ತದೆ.
ವಾಡ್ಜ್ ಬ್ಯಾಂಕ್ ಕನ್ಯಾಕುಮಾರಿಗೆ ಸಮೀಪವಿರುವ 25 ಲಕ್ಷ ಎಕರೆ ವಿಸ್ತೀರ್ಣದ ದ್ವೀಪ ಪ್ರದೇಶ. ಸಮೃದ್ಧ ಜೀವವೈವಿಧ್ಯ ಹೊಂದಿದ್ದು, ತೀವ್ರ ಪ್ರವಾಹ ಮತ್ತು ಪ್ರಬಲ ಅಲೆಗಳಿಂದ ರಕ್ಷಣೆ ಪಡೆದಿರುವ ಸಾಗರದ ಪ್ರಮುಖ ಭಾಗ. ವಿಶ್ವಾದ್ಯಂತ ಕೇವಲ 20 ವಾಡ್ಜ್ ಬ್ಯಾಂಕ್‌ಗಳಿದ್ದು, ಮೀನುಗಳು ಆಹಾರ ಮತ್ತು ಸಂತಾನೋತ್ಪತ್ತಿಗಾಗಿ ಇವನ್ನು ಆಶ್ರಯಿಸುತ್ತವೆ ಎಂದು ಸೂಚಿಸುತ್ತದೆ. ವಾಡ್ಜ್ ಬ್ಯಾಂಕ್ ಬಳಿ ತೈಲ ಪರಿಶೋಧನೆಗೆ ಮುಂದಾದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಇತ್ತೀಚೆಗೆ ಕನ್ಯಾಕುಮಾರಿ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆದವು. ಈ ಪ್ರದೇಶ ಮೀನುಗಳಿಗೆ ಆಹಾರ ಪೂರೈಸುವ ಮತ್ತು ಸಂತಾನೋತ್ಪತ್ತಿಗೆ ಅನುವು ಮಾಡಿಕೊಡುವ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ.
ಬಿಜೆಪಿ ಹೇಳಿಕೆಗೆ ಮೀನುಗಾರರ ಖಂಡನೆ: ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಈ ವಿಷಯ ಎತ್ತಿರುವುದನ್ನು ಅನೇಕರು ಖಂಡಿಸಿದ್ದಾರೆ. ಆರ್‌ಟಿಐ ಮಾಹಿತಿ ಬಹಿರಂಗಪಡಿಸಿದ ಸಮಯವನ್ನು ಮತ್ತು ಮೋದಿಯವರ ಮಾತುಗಳು ರಾಮೇಶ್ವರಂ ಮತ್ತು ಕನ್ಯಾಕುಮಾರಿಯಲ್ಲಿ ಖಂಡನೆಗೆ ಒಳಗಾಗಿವೆ.
ರಾಮೇಶ್ವರಂ ನಿವಾಸಿ ಎಂ. ಶಿವನೇಶನ್, ರಾಜಕಾರಣಿಗಳು ಚುನಾವಣೆ ಸಮಯದಲ್ಲಿ ಮೀನುಗಾರರ ಕಲ್ಯಾಣದ ಬಗ್ಗೆ ಚರ್ಚಿಸುವುದು ಸಂತೋಷದ ವಿಷಯ. ಆದರೆ, ದ್ವೀಪವನ್ನು ಮರುಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ʻದ್ವೀಪದ ಮಾಲೀಕತ್ವವನ್ನು ಮರುಪಡೆಯಲು ಇದು ಎಷ್ಟು ಸಹಾಯ ಮಾಡುತ್ತದೆ ಎಂಬ ಖಾತ್ರಿಯಿಲ್ಲ. ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಸಾಧ್ಯವಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ,ʼಎಂದು ಅವರು ಹೇಳಿದರು.
ದಕ್ಷಿಣ ಏಷ್ಯಾದ ಮೀನುಗಾರರ ಭ್ರಾತೃತ್ವ (ಎಸ್‌ಎಎಫ್‌ಎಫ್)ದ ಪ್ರಧಾನ ಕಾರ್ಯದರ್ಶಿ ಫಾ.ಚರ್ಚಿಲ್, ʻರಾಜಕಾರಣಿಗಳ ಹೇಳಿಕೆಗಳನ್ನು ನಂಬುವುದು ಕಷ್ಟʼ ಎಂದು ಫೆಡರಲ್‌ಗೆ ತಿಳಿಸಿದರು. ʻಹಲವು ವರ್ಷಗಳಿಂದ ತಮಿಳುನಾಡಿನ ಮೀನುಗಾರರು ಶ್ರೀಲಂಕಾದ ಜೈಲುಗಳಲ್ಲಿ ನರಳುತ್ತಿದ್ದಾರೆ. ಬಿಜೆಪಿ ಈಗ ಮೀನುಗಾರರ ಕಲ್ಯಾಣಕ್ಕೆ ಒತ್ತು ನೀಡುತ್ತಿದೆ ಎಂದು ನಂಬುವುದು ಅವಾಸ್ತವಿಕ. ವಿಪತ್ತುಗಳ ಸಂದರ್ಭದಲ್ಲಿ ಮೀನುಗಾರರನ್ನು ರಕ್ಷಿಸಲು ಏರ್ ಆಂಬ್ಯುಲೆನ್ಸ್ ಒದಗಿಸಬೇಕೆಂಬ ನಮ್ಮ ಮನವಿಗೆ ರಾಜಕೀಯ ಪಕ್ಷಗಳು ಸ್ಪಂದಿಸಿಲ್ಲ.ಈಗ ಅವರನ್ನು ನಂಬುವುದು ಕಷ್ಟʼ ಎಂದರು.
ಬಿಜೆಪಿಯ ಕಾರ್ಯತಂತ್ರ ಯಶಸ್ವಿಯಾಗುತ್ತಾ?: ಶ್ರೀಲಂಕಾದಿಂದ ಕಚ್ಚತೀವುವನ್ನು ಮರಳಿ ಪಡೆಯಲು ಮೋದಿ ಸರ್ಕಾರ ನಿಜವಾಗಿಯೂ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಬಿಜೆಪಿಯ ಹಿರಿಯ ನಾಯಕರಾದ ನಿರ್ಮಲಾ ಸೀತಾರಾಮನ್ ಮತ್ತು ನಾರಾಯಣನ್ ತಿರುಪತಿ, ಮೀನುಗಾರರ ಹಕ್ಕುಗಳನ್ನು ಪರಿಗಣಿಸದೆ ದ್ವೀಪವನ್ನು ಉಡುಗೊರೆಯಾಗಿ ನೀಡಿದ ಕಾಂಗ್ರೆಸ್ ಮತ್ತು ಡಿಎಂಕೆಯನ್ನು ಪ್ರಶ್ನಿಸುವುದು ಬಿಜೆಪಿಯ ಉದ್ದೇಶ ಎಂದು ಹೇಳಿದರು.
ಫೆಡರಲ್ ಜೊತೆ ಮಾತನಾಡಿದ ತಿರುಪತಿ, ʻಶ್ರೀಲಂಕಾ ನೌಕಾಪಡೆಯಿಂದ ನೂರಾರು ಮೀನುಗಾರರು ಕೊಲ್ಲಲ್ಪಟ್ಟಿದ್ದಾರೆ. ಕಾಂಗ್ರೆಸ್ ಮತ್ತು ಡಿಎಂಕೆ ಮೀನುಗಾರರ ಬಗ್ಗೆ ಹೇಗೆ ಕಾಳಜಿ ವಹಿಸಲಿಲ್ಲ ಮತ್ತು ಅವರ ಪೂರ್ವಜರ ತಪ್ಪುಗಳಿಗೆ ಕ್ಷಮೆಯಾಚಿಸಲು ಕೂಡ ಸಿದ್ಧವಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದೇವೆʼ ಎಂದರು. ಪುನಶ್ಚೇತನ ಪ್ರಯತ್ನಗಳ ಬಗ್ಗೆ ಕೇಳಿದಾಗ, ಸರ್ಕಾರ ಕಾನೂನು ಮಾರ್ಗವನ್ನು ಅನುಸರಿಸುತ್ತಿದೆ ಎಂದು ಹೇಳಿದರು.
ಸೀತಾರಾಮನ್ ವಾಗ್ದಾಳಿ: ಚುನಾವಣಾ ಪೂರ್ವದಲ್ಲಿ ಬಿಜೆಪಿ ಈ ವಿಷಯವನ್ನು ಏಕೆ ತಂದಿದೆ ಎಂಬ ಪ್ರಶ್ನೆಗೆ ಚೆನ್ನೈನಲ್ಲಿ ಪ್ರತಿಕ್ರಿಯಿಸಿದ ಸೀತಾರಾಮನ್, ಡಿಎಂಕೆಯ ಸುಳ್ಳು ಪ್ರಚಾರವನ್ನು ಬಹಿರಂಗಪಡಿಸಿದ್ದೇವೆ. ದೇಶದ ಒಂದು ಭಾಗವನ್ನು ಕಳೆದುಕೊಳ್ಳುವಂಥ ಮಹತ್ವದ ವಿಷಯವನ್ನು ಚರ್ಚಿಸಲು ಮಂಗಳಕರ ಕ್ಷಣಕ್ಕಾಗಿ ಕಾಯುವ ಅಗತ್ಯವಿಲ್ಲʼ ಎಂದು ಸುದ್ದಿಗಾರರಿಗೆ ತಿಳಿಸಿದರು.
ಆದರೆ, ಶ್ರೀಲಂಕಾದ ರಾಜಕಾರಣಿಗಳು ಬಿಜೆಪಿಯ ಪ್ರಯತ್ನವನ್ನು ಟೀಕಿಸಿದ್ದಾರೆ. ಶ್ರೀಲಂಕಾದ ಹಿರಿಯ ಸಚಿವ ಜೀವನ್ ತೊಂಡಮನ್, ಕಚ್ಚತೀವು ಬಗ್ಗೆ ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಸಂವಹನವನ್ನು ಸ್ವೀಕರಿಸಿಲ್ಲ ಎಂದು ಹೇಳಿದರು.
ತಮಿಳುನಾಡಿನ ಮತದಾರರನ್ನು ಓಲೈಸಲು ಬಿಜೆಪಿ ಈ ವಿಷಯವನ್ನುಎತ್ತಿಕೊಂಡಿರುವುದು ವಿವೇಕದ ನಡೆಯೇ ಎಂಬುದು ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ತಿಳಿದುಬರಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.