ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ: ಗೂಡ್ಸ್ ರೈಲು 'ಅತಿ ವೇಗ'ದಿಂದ ಚಲನೆ- ರೈಲ್ವೆ ಮಂಡಳಿ

Update: 2024-06-18 07:01 GMT
ರಂಗಪಾಣಿ ರೈಲ್ವೆ ನಿಲ್ದಾಣದ ಬಳಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಡಿಕ್ಕಿಯಾದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.

ಸೋಮವಾರ : ನಿಂತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದ ಸರಕು ಸಾಗಣೆ ರೈಲು ವೇಗದ ಮಿತಿಯನ್ನು ಉಲ್ಲಂಘಿಸಿ, ʻಅತಿ ವೇಗʼ ದಿಂದ ಚಲಿಸುತ್ತಿತ್ತು ಎಂದು ರೈಲ್ವೆ ಮಂಡಳಿಯ ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. 

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ರಾಣಿಪಾತ್ರ ರೈಲು ನಿಲ್ದಾಣ (ಆರ್‌ಎನ್‌ಐ)-ಚತ್ತರ್ ಹಾಟ್ ಜಂಕ್ಷನ್ (ಸಿಎಟಿ) ಮಾರ್ಗದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಏಳು ಪ್ರಯಾಣಿಕರು ಮತ್ತು ಇಬ್ಬರು ರೈಲ್ವೆ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಅಪಘಾತ ದಲ್ಲಿ ಗೂಡ್ಸ್ ರೈಲು ಚಾಲಕ ಮೃತಪಟ್ಟಿದ್ದು, 41 ಮಂದಿ ಗಾಯಗೊಂಡಿದ್ದಾರೆ. 

ಗೂಡ್ಸ್ ರೈಲಿನ ವೇಗ ಮಿತಿ ಮೀರಿತ್ತು: ರೈಲ್ವೆ ಮಂಡಳಿ- ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ದೋಷಪೂರಿತವಾಗಿದ್ದರಿಂದ ಗೂಡ್ಸ್ ರೈಲಿನ ಚಾಲಕನಿಗೆ ಆರ್‌ಎನ್‌ಐ ಮತ್ತು ಸಿಎಟಿ ನಡುವಿನ ಎಲ್ಲಾ ಕೆಂಪು ಸಿಗ್ನಲ್‌ಗಳನ್ನು ದಾಟಲು ಅನುಮತಿ ನೀಡಲಾಗಿತ್ತು. ಆದರೆ, ರೈಲಿನ ವೇಗ ಇಂಥ ಪರಿಸ್ಥಿತಿಯಲ್ಲಿ ಸೂಚಿಸಿದ ಅನುಮತಿಸಿದ ವೇಗದ ಮಿತಿಯನ್ನು ಮೀರಿತ್ತು ಎಂದು ಮಂಡಳಿ ಹೇಳಿದೆ. 

ಗೂಡ್ಸ್ ರೈಲು ಚಾಲಕ ಅತಿ ವೇಗದಿಂದ ಚಾಲನೆ ಮಾಡಿದ್ದರಿಂದ, ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಚಾಲಕನಿಗೆ ಎಲ್ಲಾ ಕೆಂಪು ದೀಪಗಳನ್ನು ದಾಟಲು ರಾಣಿಪಾತ್ರದ ಸ್ಟೇಷನ್ ಮಾಸ್ಟರ್ ಅಧಿಕಾರ ನೀಡಿದ್ದರು ಎಂಬ ವರದಿಗಳಿಗೆ ಮಂಡಳಿ ಪ್ರತಿಕ್ರಿಯಿಸಿದೆ.  ಆದರೆ, ಗೂಡ್ಸ್ ರೈಲು ಎಷ್ಟು ವೇಗದಲ್ಲಿ ಸಂಚರಿಸುತ್ತಿತ್ತು ಎಂಬುದನ್ನು ರೈಲ್ವೆ ಮಂಡಳಿ ತಿಳಿಸಿಲ್ಲ.

ರೂಢಿಯೇನು?: ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ದೋಷದ ಸಂದರ್ಭದಲ್ಲಿ ಚಾಲಕರು ಎಲ್ಲ ಕೆಂಪು ಸಿಗ್ನಲ್‌ಗಳಲ್ಲಿ ಒಂದು ನಿಮಿಷ ನಿಲ್ಲಿಸಿ, ಆನಂತರ 10 ಕಿಮೀ ವೇಗದಲ್ಲಿ ಮುಂದುವರಿಯಬೇಕಾಗುತ್ತದೆ. ಆದರೆ, ಗೂಡ್ಸ್ ರೈಲಿನ ಚಾಲಕನು ನಿಯಮವನ್ನು ಅಲಕ್ಷಿಸಿ, ನಿಂತಿದ್ದ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ ಎಂದು ರೈಲ್ವೆ ಮಂಡಳಿ ಹೇಳಿದೆ. 

ʻಟಿಎ 912 ನ್ನು ಸರಕು ರೈಲು ಚಾಲಕನಿಗೆ ನೀಡಲಾಗಿತ್ತು. ನಿಯಮಗಳ ಪ್ರಕಾರ, ಸ್ವಯಂಚಾಲಿತ ಕೆಂಪು ಸಿಗ್ನಲ್ ಇರುವಾಗ ನಿಗದಿಪಡಿಸಿದ ಸಮಯದ ಬಳಿಕ ಗೋಚರತೆ ಉತ್ತಮವಾಗಿದ್ದಲ್ಲಿ ಗಂಟೆಗೆ 15 ಕಿಮೀ ಮತ್ತು ಗೋಚರತೆ ಉತ್ತಮವಾಗಿಲ್ಲದಲ್ಲಿ ಗಂಟೆಗೆ 10 ಕಿಮೀ ವೇಗದಲ್ಲಿ ಮುಂದುವರಿಯಬೇಕು. ಹಗಲಿನಲ್ಲಿ ಒಂದು ನಿಮಿಷ ಮತ್ತು ರಾತ್ರಿ ಎರಡು ನಿಮಿಷ ಕಾಲ ಕೆಂಪು ಸಿಗ್ನಲ್‌ನಲ್ಲಿ ರೈಲು ನಿಲ್ಲಿಸಬೇಕು ಮತ್ತು ನಂತರ ನಿಗದಿಪಡಿಸಿದ ವೇಗದಲ್ಲಿ ಮುಂದುವರಿಯಬೇಕು,ʼ ಎಂದು ಮಂಡಳಿಯ ಅಧಿಕಾರಿಯೊಬ್ಬರು ವಿವರಿಸಿದರು. 

ಲೋಕೋ ಪೈಲಟ್‌ ಸಂಘಟನೆಯಿಂದ ಪ್ರಶ್ನೆ: ಭಾರತೀಯ ರೈಲ್ವೆ ಲೋಕೋ ರನ್ನಿಂಗ್ ಮೆನ್ ಆರ್ಗನೈಸೇಶನ್ (ಐಆರ್‌ಎಲ್‌ಆರ್‌ಒ) ರೈಲ್ವೆ ಮಂಡಳಿಯ ಹೇಳಿಕೆಯನ್ನು ಪ್ರಶ್ನಿಸಿದೆ. 

ಸಂಸ್ಥೆಯ ಕಾರ್ಯಾಧ್ಯಕ್ಷ ಸಂಜಯ್ ಪಾಂಧಿ ಮಾತನಾಡಿ, ʻಟಿಎ 912 ಪಡೆದ ನಂತರ ಚಾಲಕ ರೈಲನ್ನು ಕೆಂಪು ಸಿಗ್ನಲ್‌ನಲ್ಲಿ ಒಂದು ನಿಮಿಷ ನಿಲ್ಲಿಸಬೇಕು ಮತ್ತುಆನಂತರ ನಿಗದಿಪಡಿಸಿದ ವೇಗದಲ್ಲಿ ಚಲಿಸಬೇಕು ಎಂದು ರೈಲ್ವೆ ಮಂಡಳಿ ಹೇಳುವುದು ಸರಿಯಲ್ಲ,ʼ ಎಂದು ಹೇಳಿದರು. 

ʻಟಿಎ 912 ಪಡೆದ ಚಾಲಕ ಯಾವುದೇ ವೇಗದಲ್ಲಾದರೂ ಮುಂದುವರಿಯಬಹುದು. ಏಕೆಂದರೆ, ಪ್ರಾಧಿಕಾರದ ಪತ್ರದ ಪ್ರಕಾರ ಹಳಿಗಳಲ್ಲಿ ಯಾವುದೇ ಅಡೆತಡೆ ಇಲ್ಲ.ಕೆಂಪು ಸಿಗ್ನಲ್‌ಗಳು ದೋಷಯುಕ್ತವಾಗಿರುವುದರಿಂದ, ಗೂಡ್ಸ್ ರೈಲಿನ ಲೋಕೋ ಪೈಲಟ್ ಗೆ ಸಿಗ್ನಲ್‌ಗಳನ್ನು ದಾಟಲು ಅಧಿಕಾರ ನೀಡಲಾಗಿದೆ ಎಂದು ದಾಖಲೆ ಹೇಳಿದೆ. ಪ್ರಾಧಿಕಾರದ ಪತ್ರ ಯಾವುದೇ ವೇಗದ ಮಿತಿಯನ್ನು ಉಲ್ಲೇಖಿಸಿಲ್ಲ,ʼಎಂದು ಪಾಂಧಿ ಹೇಳಿದ್ದಾರೆ. 

ಸ್ಟೇಷನ್‌ ಮಾಸ್ಟರ್‌ ನೀಡಿದ ಅಧಿಕಾರ ಪತ್ರ, ಟಿಎ 912, ʻಸ್ವಯಂಚಾಲಿತ ಸಿಗ್ನಲಿಂಗ್ ವಿಫಲವಾಗಿದೆ. ಆರ್‌ಎನ್‌ಐ ಮತ್ತು ಸಿಎಟಿ ನಡುವಿನ ಸಿಗ್ನಲ್‌ಗಳನ್ನು ನೀವು ದಾಟುವ ಅಧಿಕಾರ ಹೊಂದಿದ್ದೀರಿ,ʼ ಎಂದು ಹೇಳಿದೆ. ಈ ಎರಡು ಸ್ಟೇಷನ್‌ ನಡುವೆ ಒಂಬತ್ತು ಸಿಗ್ನಲ್‌ಗಳಿವೆ.

ಸೋಮವಾರ ಬೆಳಗ್ಗೆ 5.50 ರಿಂದ ಆರ್‌ಎನ್‌ಐ ಮತ್ತು ಸಿಎಟಿ ನಡುವಿನ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ದೋಷಪೂರಿತವಾಗಿತ್ತು ಎಂದು ರೈಲ್ವೆ ಮೂಲವೊಂದು ತಿಳಿಸಿದೆ. ʻರೈಲು ಸಂಖ್ಯೆ 13174 (ಸೀಲ್ದಾ-ಕಾಂಚನಜುಂಗಾ ಎಕ್ಸ್‌ಪ್ರೆಸ್) ಬೆಳಗ್ಗೆ 8.27 ಕ್ಕೆ ರಂಗಪಾಣಿ ನಿಲ್ದಾಣದಿಂದ ಹೊರಟು, ಆರ್‌ಎನ್‌ಐ ಮತ್ತು ಸಿಎಟಿ ನಡುವೆ ನಿಂತಿತು. ರೈಲು ನಿಲುಗಡೆಗೆ ಕಾರಣ ತಿಳಿದುಬಂದಿಲ್ಲ,ʼ ಎಂದು ಮೂಲಗಳು ಹೇಳಿವೆ.

ಎಕ್ಸ್‌ಪ್ರೆಸ್ ರೈಲಿಗೂ ಟಿಎ 912: ಇನ್ನೊಬ್ಬರು ರೈಲ್ವೆ ಅಧಿಕಾರಿ ಪ್ರಕಾರ, ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ವಿಫಲವಾದಾಗ, ಸ್ಟೇಷನ್ ಮಾಸ್ಟರ್ ಲಿಖಿತ ಅಧಿಕಾರ ಟಿಎ 912 ನೀಡುತ್ತಾರೆ. ಅದು ಎಲ್ಲ ಕೆಂಪು ಸಂಕೇತಗಳನ್ನು ದಾಟಲು ಚಾಲಕನಿಗೆ ಅಧಿಕಾರ ನೀಡುತ್ತದೆ. ʻರಾಣಿಪಾತ್ರದ ಸ್ಟೇಷನ್ ಮಾಸ್ಟರ್ ರೈಲು ಸಂಖ್ಯೆ 1374 (ಸೀಲ್ದಾ-ಕಾಂಚನಜುಂಗಾ ಎಕ್ಸ್‌ಪ್ರೆಸ್)ಕ್ಕೆ ಟಿಎ 912 ನೀಡಿದ್ದರು,ʼ ಎಂದು ಮೂಲಗಳು ತಿಳಿಸಿವೆ. 

ʻಅದೇ ಸಮಯದಲ್ಲಿ ಜಿಎಫ್‌ಸಿಜೆ ಗೂಡ್ಸ್ ರೈಲು 8.42 ಕ್ಕೆ ರಂಗಪಾಣಿಯಿಂದ ಹೊರಟು, 8.55 ಕ್ಕೆ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಇದರಿಂದ ಪ್ರಯಾಣಿಕರ ರೈಲಿನ ಗಾರ್ಡ್‌ ಕೋಚ್, ಎರಡು ಪಾರ್ಸೆಲ್ ಕೋಚ್‌ಗಳು ಮತ್ತು ಸಾಮಾನ್ಯ ಕೋಚ್ ಹಳಿ ತಪ್ಪಿತು,ʼ ಎಂದು ಹೇಳಿವೆ.

Tags:    

Similar News