ಹೇಮಂತ್ ಸೊರೆನ್ ಜಾಮೀನು ಅರ್ಜಿ: ಇಡಿ ಉತ್ತರ ಕೇಳಿದ ಜಾರ್ಖಂಡ್ ಹೈಕೋರ್ಟ್

Update: 2024-05-28 06:40 GMT

ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಉತ್ತರವನ್ನು ಸಲ್ಲಿಸುವಂತೆ ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ಜಾರ್ಖಂಡ್ ಹೈಕೋರ್ಟ್ ಸೂಚಿಸಿದೆ.

ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜನವರಿ 31 ರಂದು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳ ಗಾಗಿದ್ದ ಸೋರೆನ್ ಅವರು ಸೋಮವಾರ (ಮೇ 27) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ವಿಷಯದ ಶೀಘ್ರ ವಿಚಾರಣೆಯನ್ನು ಕೋರಿದರು. 

ನ್ಯಾ. ರೊಂಗೋನ್ ಮುಖೋಪಾಧ್ಯಾಯ ಅವರ ಪೀಠದ ಮುಂದೆ ಸೊರೆನ್ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಜೆಎಂಎಂ ನಾಯಕ ರಾಜಕೀಯ ಪಿತೂರಿಯ ಬಲಿಪಶು ಎಂದು ಹೇಳಿದರು. ಮಂಗಳವಾರ (ಮೇ 28) ಈ ವಿಷಯದಲ್ಲಿ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಇಡಿಗೆ ನ್ಯಾಯಾಲಯ ಸೂಚಿಸಿತು ಮತ್ತು ಜೂನ್ 10 ರಂದು ವಿಚಾರಣೆಗೆ ದಿನಾಂಕ ನಿಗದಿಪಡಿಸಿತು.

ಸೋರೆನ್ ಮನವಿ: ರಾಂಚಿಯ ಬಾರ್ಗೇನ್ ಸರ್ಕಲ್‌ನಲ್ಲಿರುವ 8.5 ಎಕರೆ ಜಮೀನಿನ ಯಾವುದೇ ದಾಖಲೆಗಳಲ್ಲಿ ತನ್ನ ಹೆಸರು ಇಲ್ಲ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನ್ನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಎಂದು ಸೊರೆನ್ ಅರ್ಜಿಯಲ್ಲಿ ಹೇಳಿದ್ದಾರೆ. 

ಜಾರಿ ನಿರ್ದೇಶನಾಲಯವು ಜಮೀನು ತನಗೆ ಸೇರಿದ್ದು ಎಂಬ ಕೆಲವರ ಹೇಳಿಕೆಯನ್ನು ಅವಲಂಬಿಸಿದೆ. ಆದರೆ ಆ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದ್ದಾರೆ. ಜನವರಿ 31 ರಂದು ಬಂಧನಕ್ಕೊಳಗಾಗುವ ಮೊದಲು ಸೋರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಅವರು ರಾಂಚಿಯ ಹೊತ್ವಾರ್‌ನಲ್ಲಿರುವ ಬಿರ್ಸಾ ಮುಂಡಾ ಜೈಲಿನಲ್ಲಿದ್ದಾರೆ. 

ಸೋರೆನ್ ಅವರ ಹಕ್ಕು: ತಮ್ಮ ಜಮೀನನ್ನು ಕೆಲವು ವ್ಯಕ್ತಿಗಳು ಒತ್ತುವರಿ ಮಾಡುತ್ತಿದ್ದಾರೆ ಎಂದು ರಾಜಕುಮಾರ್ ಪಹಾನ್ ಎಂಬಾತ ಬಾರ್ಗೇನ್‌ ವೃತ್ತ ಅಧಿಕಾರಿ ಕಚೇರಿಗೆ ದೂರು ನೀಡಿದ್ದರು. ಆದರೆ, ದೂರಿನಲ್ಲಿ ಹೇಮಂತ್ ಸೊರೆನ್ ಹೆಸರು ಇಲ್ಲ. ಹೀಗಿದ್ದರೂ, ಜಮೀನು ಸೊರೆನ್ ಅವರ ಸ್ವಾಧೀನದಲ್ಲಿದೆ ಎಂದು ಇಡಿ ಪ್ರಕರಣ ದಾಖಲಿಸಿದೆ ಎಂದು ಅರ್ಜಿಯಲ್ಲಿದೆ. 

ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಯಾವುದೇ ಪರಿಹಾರ ಪಡೆಯುವಲ್ಲಿ ಸೋರೆನ್ ವಿಫಲರಾಗಿದ್ದರು(ಮೇ 22). 

ಮಧ್ಯಂತರ ಜಾಮೀನು ಅರ್ಜಿ ವಾಪಸು: ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರ ರಜಾಕಾಲದ ಪೀಠವು ಸೊರೆನ್ ಅವರ ವಕೀಲ ಕಪಿಲ್ ಸಿಬಲ್ ಅವರಿಗೆ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ಮತ್ತು ಬಂಧನದ ವಿರುದ್ಧದ ಮನವಿಯನ್ನು ಹಿಂಪಡೆಯಲು ಅನುಮತಿ ನೀಡಿತು. ಸೊರೆನ್ ʻಶುದ್ಧ ಹಸ್ತʼದಿಂದ ನ್ಯಾಯಾಲಯವನ್ನು ಸಂಪರ್ಕಿಸದ ಕಾರಣ, ಮನವಿಯನ್ನು ವಜಾಗೊಳಿಸುವುದಾಗಿ ಸುಪ್ರೀಂ ಕೋರ್ಟ್ ಸೂಚಿಸಿತು.

ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಏಪ್ರಿಲ್ 4 ರ ಆದೇಶದ ಬಗ್ಗೆ ಸೊರೆನ್ ಹೈಕೋರ್ಟಿಗೆ ತಿಳಿಸಲಿಲ್ಲ; ಅವರ ಸಾಮಾನ್ಯ ಜಾಮೀನು ಅರ್ಜಿಯು ಏಪ್ರಿಲ್ 15 ರಂದು ಸಲ್ಲಿಕೆಯಾಗಿ, ಮೇ 13 ರಂದು ವಜಾಗೊಂಡಿದೆ ಎನ್ನುವುದನ್ನು ನ್ಯಾಯಾಲಯ ಗಮನಿಸಿದೆ.

Tags:    

Similar News