ಕೆ -4 ಕ್ಷಿಪಣಿ ಪರೀಕ್ಷೆ ಯಶಸ್ವಿ, ಪರಮಾಣು ಸಿಡಿತಲೆ ಹೊಂದಿರುವ ಇದರ ಸಾಮರ್ಥ್ಯವೇನು?
ಇದೊಂದು ʼಸೆಕೆಂಡ್ ಸ್ಟ್ರೈಕ್ʼ (ಎದುರಾಳಿ ನಡೆಸುವ ಪರಮಾಣು ದಾಳಿಗೆ ಪ್ರತಿದಾಳಿ) ಕ್ಷಿಪಣಿಯಾಗಿದೆ. ಹೀಗಾಗಿ ಭಾರತದ ಪರಮಾಣು ದಾಳಿ ಸಾಮರ್ಥ್ಯ ಹೆಚ್ಚಾಗಿದೆ.;
ಭಾರತವು ಗುರುವಾರ (ನವೆಂಬರ್ 28) ದೇಶೀಯವಾಗಿ ನಿರ್ಮಿಸಲಾಗಿರುವ ಪರಮಾಣು ಚಾಲಿತ ಜಲಾಂತರ್ಗಾಮಿ ಹಡಗು ಐಎನ್ಎಸ್ ಅರಿಘಾತ್‌ನಿಂದ ಅತ್ಯಾಧುನಿಕ ಕೆ-4 ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಈ ಮೂಲಕ ಭಾರತವು ತನ್ನ ಪರಮಾಣು ಶಕ್ತಿಯನ್ನು ಪ್ರದರ್ಶಿಸಿದೆ.
ಇದೊಂದು ʼಸೆಕೆಂಡ್ ಸ್ಟ್ರೈಕ್ʼ (ಎದುರಾಳಿ ನಡೆಸುವ ಪರಮಾಣು ದಾಳಿಗೆ ಪ್ರತಿದಾಳಿ) ಕ್ಷಿಪಣಿಯಾಗಿದೆ. ಹೀಗಾಗಿ ಭಾರತದ ಪರಮಾಣು ದಾಳಿ ಸಾಮರ್ಥ್ಯ ಹೆಚ್ಚಾಗಿದೆ. ʼಎರಡನೇ ದಾಳಿ ಸಾಮರ್ಥ್ಯ' ಎಂದರೆ ಪರಮಾಣು ಮೊದಲ ದಾಳಿ ಅನುಭವಿಸಿದ ನಂತರ ಪ್ರತಿಕ್ರಿಯೆಯಾಗಿ ವಿನಾಶಕಾರಿ ಪರಮಾಣು ದಾಳಿ ನಡೆಸುವುದಾಗಿದೆ. ರಕ್ಷಣಾ ತಜ್ಞರು ಇದನ್ನು ದೇಶದ ಪರಮಾಣು ಪ್ರತಿರೋಧ ಕಾರ್ಯತಂತ್ರದ ಪ್ರಮುಖ ಅಂಶ ಎಂದು ಪರಿಗಣಿಸುತ್ತಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಕೆ -4 ಕ್ಷಿಪಣಿ 3,500 ಕಿ.ಮೀ ದೂರದ ತನಕ ಸಾಗಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಇದು ನಿಖರವಾಗಿ ಪರಮಾಣು ಸಿಡಿತಲೆಗಳನ್ನು ಸಾಗಿಸಿ ದಾಳಿ ಮಾಡುತ್ತದೆ. ಈ ಪರೀಕ್ಷೆಯಿಂದಾಗಿ ಭಾರತವು ಈಗ ಭೂಮಿ, ವಾಯು ಮತ್ತು ಜಲ ದಿಂದ ಪರಮಾಣು ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ದಾಳಿಗೆ ಒಳಗಾದರೆ ಪ್ರತಿ ದಾಳಿ ಖಚಿತ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದೆ.
ಈ ಪರೀಕ್ಷೆಯನ್ನು, ನವೆಂಬರ್ 27, ಬುಧವಾರದಂದು ಬೆಳಗ್ಗೆ ವಿಶಾಖಪಟ್ಟಣಂ ತೀರಕ್ಕೆ ಸನಿಹದಲ್ಲಿ, ಬಂಗಾಳ ಕೊಲ್ಲಿಯಲ್ಲಿ ನಡೆಸಲಾಯಿತು. ಕೆ-4 ಕ್ಷಿಪಣಿ ಘನ ಇಂಧನ ಚಾಲಿತವಾಗಿದ್ದು, 6,000 ಟನ್ ತೂಕದ ಸಬ್‌ಮರೀನ್ ನಿಂದ ಉಡಾವಣೆಗೊಳಿಸಿದಾಗ, ಗರಿಷ್ಠ 3,500 ಕಿಲೋಮೀಟರ್ ದೂರದ ತನಕ ಇರುವ ಗುರಿಗಳ ಮೇಲೆ ದಾಳಿ ನಡೆಸಬಲ್ಲದಾಗಿದೆ.
ಏನಿದು ಪರೀಕ್ಷೆ?
ಐಎನ್ಎಸ್ ಅರಿಘಾತ್ ಭಾರತದ ಎರಡನೇ ಪರಮಾಣು ಚಾಲಿತ ಜಲಾಂತರ್ಗಾಮಿ. , ಈ ಸಬ್‌ಮರೀನ್ ಅನ್ನು ಪರಮಾಣು ಸಿಡಿತಲೆಗಳನ್ನು ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಒಯ್ಯಲು ನಿರ್ಮಿಸಲಾಗಿದೆ.
ಭಾರತದ ಮೊದಲ ಪರಮಾಣು ಸಬ್‌ಮರೀನ್ ಆಗಿರುವ ಐಎನ್ಎಸ್ ಅರಿಹಂತ್ 750 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಕೆ-15 ಕ್ಷಿಪಣಿಗಳನ್ನು ಹೊಂದಿದೆ. ಅರಿಘಾತ್ ಅನ್ನು ಕೆ-4 ಕ್ಷಿಪಣಿಗಳ ಸಾಗಾಟಕ್ಕೆ ನಿರ್ಮಿಸಲಾಗಿದೆ. ಅರಿಘಾತ್ ಈ ಜಲಾಂತರ್ಗಾಮಿ ನೀರಿನಾಳದಿಂದಲೇ ಕ್ಷಿಪಣಿಗಳನ್ನು ಉಡಾವಣೆ ಮಾಡುತ್ತದೆ.
ಕೆ-4 ಕ್ಷಿಪಣಿಯ ವಿಶೇಷವೇನು?
ಕೆ-4 ಎಂದರೆ ಕಲಾಂ-4 . ಇದು ಪರಮಾಣು ಸಿಡಿತಲೆಗಳನ್ನು ಒಯ್ಯಬಲ್ಲ, ಸಬ್‌ಮರಿನ್‌ಗಳಿಂದ ಉಡಾಯಿಸಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿ. 17 ಟನ್ ತೂಕ, 12 ಮೀಟರ್ ಉದ್ದ ಮತ್ತು 1.3 ಮೀಟರ್ ವ್ಯಾಸ ಹೊಂದಿರುವ ಕೆ-4 ಕ್ಷಿಪಣಿ, 2,500 ಕೆಜಿ ತೂಕದ ಪರಮಾಣು ಬಾಂಬ್‌ಗಳನ್ನು ಹೊಂದಿದೆ. ಇದು ಎರಡು ಹಂತಗಳ ರಾಕೆಟ್ ಮೋಟರ್ ಹೊಂದಿದೆ.
ಪರೀಕ್ಷೆಯೂ ವಿಶಾಖಪಟ್ಟಣಂ ಪ್ರದೇಶದಲ್ಲೇ ಯಶಸ್ವಿಯಾಗಿ ನೆರವೇರಿದೆ. 20 ಟನ್ ತೂಕದ ಈ ಕ್ಷಿಪಣಿ ಸಾಗರದೊಳಗಿನ ಉಡಾವಣಾ ಕೇಂದ್ರದಲ್ಲಿ ಚಿಮ್ಮಿ, ರಾಕೆಟ್ ಬೂಸ್ಟರ್ ಅನ್ನು ಚಾಲ್ತಿಗೊಳಿಸಿ ಯಶಸ್ವಿಯಾಗಿ ಹಾರಿದೆ.