‘ನಿನ್ನ ರಕ್ತ ಕುಡಿಯುತ್ತೇನೆ’ ; ಆಸ್ತಿ ಕೊಡುವಂತೆ ಪೀಡಿಸಿ ಅಮ್ಮನ ತೊಡೆಗೆ ಕಚ್ಚಿದ ಮಗಳು, ವಿಡಿಯೊ ವೈರಲ್​

ಆಸ್ತಿಗಾಗಿ ಪೋಷಕರ ಮೇಲೆ ಹಲ್ಲೆ ನಡೆಸುವುದು ಅವಮಾನೀಯ ಕೃತ್ಯ ಎಂದು ಕೋರ್ಟ್​ ಹಲವು ಬಾರಿ ಉಲ್ಲೇಖ ಮಾಡಿರುವ ಹೊರತಾಗಿಯೂ, ನೈತಿಕವಾಗಿ ಬಗ್ಗೆ ಅರಿವು ಇದ್ದರೂ ಇಂಥ ಕೃತ್ಯಗಳು ಕಡಿಮೆ ಆಗದಿರುವುದು ಆಶ್ಚರ್ಯಕರ.;

Update: 2025-03-02 08:17 GMT
ಅಮ್ಮನಿಗೆ ಹೊಡೆಯುತ್ತಿರುವ ಮಗಳು.

ಆಸ್ತಿಗಾಗಿ ಹೆತ್ತರವನ್ನೇ ಮನೆಯಿಂದ ಹೊರಕ್ಕೆ ಹಾಕುವುದು ಪೀಡಿಸುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇಂಥ ಕೃತ್ಯಗಳು ಅಮಾನವೀಯ ಎಂದು ಗೊತ್ತಿದ್ದರೂ  ಪೋಷಕರ ಮೇಲಿನ ದೌರ್ಜನ್ಯ ಕಡಿಮೆಯಾಗುತ್ತಿಲ್ಲ. ಅಂತಯೇ ಹರಿಯಾಣದ ಹಿಸಾರ್‌ನಲ್ಲಿ ಮಹಿಳೆಯೊಬ್ಬಳು, "ನಿನ್ನ ರಕ್ತವನ್ನು ಕುಡಿಯುತ್ತೇನೆ", "ನಿನ್ನ ಸಾವು ನನ್ನ ಕೈಯ್ಯಲ್ಲೇ" ಎಂದು ಕಿರುಚಾಡುತ್ತಾ, ತನ್ನ ತಾಯಿಯ ತೊಡೆಗೆ ಕಚ್ಚಿ, ಕೂದಲು ಎಳೆದು, ದೈಹಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಅದರ ವಿಡಿಯೊ ವೈರಲ್ ಆಗಿದೆ.

ಮಹಿಳೆ ಮೇಲೆ ಆಕೆಯು ಸಹೋದರ ದೂರು ನೀಡಿದ್ದು, ತಾಯಿಯನ್ನು ತನ್ನ ಮನೆಯಲ್ಲಿ ಗೃಹ ಬಂಧನದಲ್ಲಿ ಇಟ್ಟಿರುವ ಅಕ್ಕ ಆಸ್ತಿ ಕಬಳಿಸಲು ಯತ್ನಿಸುತ್ತಿದ್ದಾಳೆ. ಹಣ ಮತ್ತು ಆಸ್ತಿ ತನ್ನಹೆಸರಿಗೆ ವರ್ಗಾಯಿಸುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ. ವೈರಲ್ ಆಗಿರುವ 3 ನಿಮಿಷಗಳ ವಿಡಿಯೋದಲ್ಲಿ ಮಗಳ ಕುಕೃತ್ಯ ಮನುಕುಲವೇ ನಾಚುವಂತಿದೆ.

ಹಿಸಾರ್‌ನ ಆಜಾದ್ ನಗರದ ಮಾಡರ್ನ್ ಸಾಕೇತ್ ಕಾಲೋನಿಯಲ್ಲಿ ರೀಟಾ ಎಂಬ ಮಹಿಳೆಯು ತನ್ನ ತಾಯಿ ನಿರ್ಮಲಾ ದೇವಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು.ಅಮ್ಮನನ್ನು ನಿಂದಿಸಿದ ಮಗಳು ತೊಡೆಗೆ ಬಲವಾಗಿ ಕಚ್ಚಿದ್ದಾಳೆ. ತಾಯಿ ನೋವಿನಿಂದ ಕಿರುಚಾಡುತ್ತಿರುವಂತೆಯೇ, ಕೂದಲು ಹಿಡಿದು ಎಳೆದಾಡಿ, ಮಂಚದಿಂದ ಕೆಳಕ್ಕೆ ನೂಕಿದ್ದಾಳೆ.

"ನಾನು ನಿನ್ನ ರಕ್ತವನ್ನು ಕುಡಿಯುತ್ತೇನೆ, ನಿನ್ನ ಸಾವು ನನ್ನ ಕೈಯಿಂದಲೇ ಆಗುತ್ತದೆ" ಎಂದೂ ಹೇಳುತ್ತಾಳೆ. 

ರೀಟಾ ಅವರ ಸಹೋದರ ಅಮರ್‌ದೀಪ್ ಸಿಂಗ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ತನ್ನ ಸಹೋದರಿ ಎರಡು ವರ್ಷಗಳ ಹಿಂದೆ ರಾಜಗಢ ಬಳಿಯ ಹಳ್ಳಿಯಲ್ಲಿ ವಾಸಿಸುವ ಸಂಜಯ್ ಪುನಿಯಾ ಎಂಬಾತನನ್ನು ಮದುವೆಯಾಗಿದ್ದಳು. ಆದರೆ ಕೆಲವೇ ದಿನಗಳಲ್ಲಿ ಅವಳು ತವರುಮನೆಗೆ ವಾಪಸ್ ಬಂದಳು. ನಂತರ ಅವಳು ಆಸ್ತಿಗಾಗಿ ತಾಯಿಗೆ ಕಿರುಕುಳ ನೀಡಲು ಪ್ರಾರಂಭಿಸಿದಳು. ಬಳಿಕ ತನ್ನ ಗಂಡನನ್ನೂ ಕರೆಸಿಕೊಂಡು ಹಲ್ಲೆ ಮಾಡಲು ಆರಂಭಿಸಿದ್ದಾಳೆ ಎಂದಿದ್ದಾರೆ.

ಧನ ದಾಹ

ಕುರುಕ್ಷೇತ್ರದಲ್ಲಿದ್ದ ನಮ್ಮ ಕುಟುಂಬದ ಆಸ್ತಿಯನ್ನು 65 ಲಕ್ಷ ರೂ.ಗೆ ಮಾರಾಟ ಮಾಡಿ, ಅದರ ಹಣವನ್ನೆಲ್ಲ ತಾನೇ ಇಟ್ಟುಕೊಂಡಿರುವ ರೀಟಾ, ಉಳಿದ ಆಸ್ತಿಯನ್ನೂ ತನ್ನ ಹೆಸರಿಗೆ ವರ್ಗಾಯಿಸಬೇಕೆಂದು ತಾಯಿಯ ಮೇಲೆ ಒತ್ತಡ ಹೇರತೊಡಗಿದಳು. ನಾನು ಆಕೆಯ ಮನೆಗೆ ಭೇಟಿ ನೀಡದಂತೆ, ಅಮ್ಮನನ್ನು ನೋಡದಂತೆ ರೀಟಾ ನನ್ನನ್ನು ತಡೆದಿದ್ದಾಳೆ ಎಂದು ಎಂದು ಅಮರ್ ದೀಪ್ ಹೇಳಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007 ರ ಅಡಿಯಲ್ಲಿ ರೀಟಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಆಜಾದ್ ನಗರ ಪೊಲೀಸ್ ಠಾಣೆಯ ಸ್ಟೇಷನ್ ಹೆಡ್ ಆಫೀಸರ್, ಇನ್‌ಸ್ಪೆಕ್ಟರ್ ಸಾಧುರಾಮ್ ತಿಳಿಸಿದ್ದಾರೆ.

Tags:    

Similar News