‘ಟಿಕೆಟ್ ಮಾರಿದರು’ ಆರೋಪ: ಎಲ್‌ಜೆಪಿ ತೊರೆದ 22 ನಾಯಕರು

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಹಿನ್ನಡೆ

Update: 2024-04-04 08:59 GMT

ಚಿರಾಗ್ ಪಾಸ್ವಾನ್ ಅವರು ಲೋಕಸಭೆ ಟಿಕೆಟ್‌ಗಳನ್ನು ‌ʻಮಾರಾಟʼ ಮಾಡಿದ್ದಾರೆ ಎಂದು ಆರೋಪಿಸಿರುವ 22 ಎಲ್‌ಜೆಪಿ ನಾಯಕರು, ಪಕ್ಷವನ್ನು ತೊರೆದಿದ್ದಾರೆ. ಇದರಿಂದ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಹಿನ್ನಡೆ ಉಂಟಾಗಿದೆ.

ಟಿಕೆಟ್ ನಿರಾಕರಿಸಿರುವುದನ್ನು ಪ್ರತಿಭಟಿಸಿ ಮಾಜಿ ಸಚಿವರಾದ ರೇಣು ಕುಶ್ವಾಹ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಸತೀಶ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಡಾಂಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಸಿಂಗ್ ಮತ್ತು ಪಕ್ಷದ ಮುಖಂಡರಾದ ಸಂಜಯ್ ಸಿಂಗ್ ಮತ್ತು ಅಜಯ್ ಕುಶ್ವಾಹ ರಾಜೀನಾಮೆ ನೀಡಿದ್ದಾರೆ.

ಪರಿಶ್ರಮಿಗಳು ಮತ್ತು ಸಮರ್ಥ ಕಾರ್ಯಕರ್ತರಿಗೆ ಟಿಕೆಟ್‌ ನಿರಾಕರಿಸಿ, ʻಹೊರಗಿನವರಿಗೆʼ ನೀಡಲಾಗಿದೆ ಎಂದು ರೇಣು ಕುಶ್ವಾಹ ಟೀಕಿಸಿದ್ದಾರೆ. ʻಹೊರಗಿನವರಿಗೆ ಟಿಕೆಟ್ ನೀಡಲಾಗಿದೆ. ನಾವು ನಿಮಗಾಗಿ ಕೆಲಸ ಮಾಡುವ ಮತ್ತು ನಿಮ್ಮನ್ನು ನಾಯಕರನ್ನಾಗಿ ಮಾಡುವ ಕಾರ್ಮಿಕರೇ?ʼ ಎಂದು ಪ್ರಶ್ನಿಸಿದ್ದಾರೆ. 

ಚಿರಾಗ್ ಅವರು ಬಿಹಾರದ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಎಲ್‌ಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಆರೋಪಿಸಿದ್ದಾರೆ. ಬಂಡಾಯ ಎಲ್‌ಜೆಪಿ ನಾಯಕರು ಲೋಕಸಭೆ ಚುನಾವಣೆಯಲ್ಲಿ ಇಂಡಿಯ ಮೈತ್ರಿ ಕೂಟಕ್ಕೆ ಬೆಂಬಲ ನೀಡಲಿದ್ದಾರೆ ಎಂದಿದ್ದಾರೆ. 

ಮಾರ್ಚ್ 18 ರಂದು ಸೀಟು ಹಂಚಿಕೆ ಮಾತುಕತೆಯನ್ನು ಮುಕ್ತಾಯಗೊಳಿಸಿದ ಬಿಜೆಪಿ, 40 ಲೋಕಸಭೆ ಸ್ಥಾನಗಳ ಪೈಕಿ 5 ಅನ್ನು ಎಲ್‌ಜೆಪಿ ಗೆ ನೀಡಿದೆ( ಸಮಸ್ತಿಪುರ, ಜಮುಯಿ, ಹಾಜಿಪುರ್, ವೈಶಾಲಿ ಮತ್ತು ಖಗಾರಿಯಾ). ಬಿಜೆಪಿ 17, ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯು) 16 ಹಾಗೂ ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಆವಾಮ್ ಮೋರ್ಚಾ ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷ ತಲಾ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿವೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ 39 ಸ್ಥಾನ ಗೆದ್ದಿತ್ತು.

Tags:    

Similar News