ಹತ್ರಾಸ್ ಕಾಲ್ತುಳಿತ: 6 ಮಂದಿ ಸೇವಾದಾರರ ಬಂಧನ; ಎಫ್‌ಐಆರ್‌ ನಲ್ಲಿ ಬಾಬಾ ಹೆಸರು ನಾಪತ್ತೆ

ಮೈನ್‌ಪುರಿಯಲ್ಲಿರುವ ಬಾಬಾ ಅವರ ಆಶ್ರಮಕ್ಕೆ ಬುಧವಾರ ರಾತ್ರಿ, ಪೊಲೀಸರು ತೆರಳಿದ್ದರು. ಪೊಲೀಸರು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲು ಹೋಗಿದ್ದರೇ ಹೊರತು ತನಿಖೆಗಾಗಿ ಅಲ್ಲ ಎಂದು ಪೊಲೀಸ್‌ ವೃತ್ತ ನಿರೀಕ್ಷಕ ಹೇಳಿದ್ದಾರೆ.;

Update: 2024-07-04 13:10 GMT
ಗುರುವಾರ ಕಾಸ್ಗಂಜ್‌ನಲ್ಲಿರುವ ಬೋಧಕ ಸೂರಜ್‌ಪಾಲ್ ಸಿಂಗ್ ಅಲಿಯಾಸ್ ಭೋಲೆ ಬಾಬಾ ಅವರ ಆಶ್ರಮದ ಹೊರಗೆ ಗುರುವಾರ ನೆರೆದಿದ್ದ ಜನ

ಉತ್ತರಪ್ರದೇಶದ ಹತ್ರಾಸ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಸೇವಾದಾರರು ಅಥವಾ ಸೂರಜ್ ಪಾಲ್ ಸಿಂಗ್ ಅಲಿಯಾಸ್ ಭೋಲೆ ಬಾಬಾನ ಸಹಾಯಕರನ್ನು ಬಂಧಿಸಲಾಗಿದೆ ಎಂದು ಐಜಿ ಶಲಭ್ ಮಾಥುರ್ ಗುರುವಾರ ಹೇಳಿದರು.

ಮುಖ್ಯ ಸೇವಾದಾರ ದೇವಪ್ರಕಾಶ್ ಮಧುಕರ್ ಪರಾರಿಯಾಗಿದ್ದು, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗುವುದು ಮತ್ತು ಅವರ ಸುಳಿವು ನೀಡಿದವರಿಗೆ 1 ಲಕ್ಷ ರೂ. ನೀಡಲಾಗುವುದು ಎಂದು ಅವರು ಹತ್ರಾಸ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. 

ಆಶ್ಚರ್ಯಕರ ಸಂಗತಿಯೆಂದರೆ, ಎಫ್‌ಐಆರ್‌ನಲ್ಲಿ ಈ ಏಳು ಸೇವಾದಾರರನ್ನು ಆರೋಪಿಗಳೆಂದು ಪಟ್ಟಿ ಮಾಡಲಾಗಿದೆಯೇ ಹೊರತು ಭೋಲೆ ಬಾಬಾ ಅವರನ್ನಲ್ಲ.

ಬಾಬಾ ಹೆಸರು ಏಕೆ ಕಾಣೆಯಾಗಿದೆ?: ಬಂಧಿತ ಆರು ಮಂದಿ ಭೋಲೆ ಬಾಬಾ ನಡೆಸುತ್ತಿದ್ದ ಸತ್ಸಂಗದಲ್ಲಿ ಸೇವಾದಾರರಾಗಿ ಕೆಲಸ ಮಾಡಿದ್ದಾರೆ ಎಂದು ಐಜಿ ತಿಳಿಸಿದ್ದಾರೆ. 

ಬುಧವಾರ ಹತ್ರಾಸ್‌ಗೆ ಭೇಟಿ ನೀಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಎಫ್‌ಐಆರ್‌ನಲ್ಲಿ ಬೋಧಕನನ್ನು ಏಕೆ ಆರೋಪಿ ಎಂದು ಹೆಸರಿಸಿಲ್ಲ ಎಂದು ಪ್ರಶ್ನಿಸಲಾಯಿತು. ʻಕಾರ್ಯಕ್ರಮಕ್ಕೆ ಅನುಮತಿಗೆ ಅರ್ಜಿ ಸಲ್ಲಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಜವಾಬ್ದಾರರಾದ ಎಲ್ಲರೂ ಎಫ್‌ಐ ಆರ್‌ ವ್ಯಾಪ್ತಿಗೆ ಬರುತ್ತಾರೆ,' ಎಂದು ಮುಖ್ಯಮಂತ್ರಿ ಹೇಳಿದರು.

ಪುಲ್ಹಾರಿ ಗ್ರಾಮದ ಬಳಿ ನಡೆದ ಸತ್ಸಂಗಕ್ಕೆ ಆಯೋಜಕರು 80,000 ಮಂದಿ ಬರುವುದಾಗಿ ಅನುಮತಿ ಪಡೆದು, 2.5 ಲಕ್ಷ ಜನರನ್ನು ಸೇರಿಸಿದ್ದರು ಎಂದು ಎಫ್‌ಐಆರ್ ಆರೋಪಿಸಿದೆ.

ಆಶ್ರಮಕ್ಕೆ ಪೊಲೀ‌ಸ್‌ ಭೇಟಿ: ಬುಧವಾರ ರಾತ್ರಿ ಪೊಲೀಸರು ಮೈನ್‌ಪುರಿಯಲ್ಲಿರುವ ಬಾಬಾ ಅವರ ಆಶ್ರಮಕ್ಕೆ ಹೋಗಿದ್ದರು. ಅವರು ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಹೋಗಿದ್ದರೇ ಹೊರತು ತನಿಖೆಗಾಗಿ ಅಲ್ಲ ಎಂದು ಸರ್ಕಲ್ ಆಫೀಸರ್ ಸುನೀಲ್ ಕುಮಾರ್ ಸಿಂಗ್ ಹೇಳಿದರು. ಅಲ್ಲಿ ಬೋಲೆ ಬಾಬಾ ಇರಲಿಲ್ಲ. 

ಕಾಲ್ತುಳಿತಕ್ಕೆ 121 ಜನರು ಬಲಿಯಾದ ಬಳಿಕ ಆಶ್ರಮದ ಹೊರಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸರು ಮತ್ತು ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಸಿಬ್ಬಂದಿ ಬುಧವಾರ ರಾತ್ರಿ ಆಶ್ರಮದ ಆವರಣವನ್ನು ಪ್ರವೇಶಿಸಿದೆ. ಆಶ್ರಮದಲ್ಲಿ ಮಹಿಳೆಯರು ಸೇರಿದಂತೆ 50-60 ಸೇವಾದಾರರು ಇದ್ದರು ಎಂದು ಸಿಂಗ್‌ ಹೇಳಿದ್ದಾರೆ. 

ಮೈನ್‌ಪುರಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಹುಲ್ ಮಿಥಾಸ್ ಅವರು, ಆಶ್ರಮದಲ್ಲಿ ಬೋಧಕನನ್ನು ನೋಡಿಲ್ಲ ಎಂದು ಹೇಳಿದರು. ಪೊಲೀಸರು ಆಶ್ರಮಕ್ಕೆ ಏಕೆ ಪ್ರವೇಶಿಸಿದರು ಎಂಬ ಪ್ರಶ್ನೆಗೆ, ʻನಾವು ತನಿಖೆಗಾಗಿ ಬಂದಿಲ್ಲ. ಭದ್ರತೆಯನ್ನು ಪರಿಶೀಲಿಸಲು ಬಂದಿದ್ದೇವೆ,ʼ ಎಂದು ಹೇಳಿದರು. 

ಗುರುವಾರ ಕಾಸ್ಗಂಜ್‌ನಲ್ಲಿರುವ ಭೋಲೆ ಬಾಬಾ ಅವರ ಆಶ್ರಮದ ಹೊರಗೆ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ | ಪಿಟಿಐ

ಆಡಳಿತಕ್ಕೆ ಕ್ಲೀನ್ ಚಿಟ್: ಎಫ್‌ಐಆರ್ ಸ್ಥಳೀಯ ಆಡಳಿತಕ್ಕೂ ಕ್ಲೀನ್ ಚಿಟ್ ನೀಡುವಂತಿದೆ. ʻಪೊಲೀಸರು ಮತ್ತು ಸ್ಥಳೀಯ ಆಡಳಿತ ಲಭ್ಯ ಸಂಪನ್ಮೂಲದಲ್ಲಿ ಸಾಧ್ಯವಿರುವ ಎಲ್ಲವನ್ನೂ ಮಾಡಿದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕಳುಹಿಸಿದೆ. ಆದರೆ, ಸಂಘಟಕರು ಮತ್ತು ಸೇವಾದಾರರು ಸಹಕರಿಸಲಿಲ್ಲ,ʼ ಎಂದು ಎಫ್‌ಐಆರ್‌ ನಲ್ಲಿದೆ. 

ಸಿಎಂ ಆದಿತ್ಯನಾಥ್ ಅವರ ಪ್ರಕಾರ, ಸೇವಾದಾರರು ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಜನರು ಸಾಯುತ್ತಿರುವಾಗ ಸೇವಾದಾರರು ಓಡಿಹೋದರು,ʼ ಎಂದು ದೂರಿದರು. 

ಬಾಬಾ ಜನಪ್ರಿಯತೆ ಕುಗ್ಗಿಲ್ಲ: ಭೋಲೆ ಬಾಬಾ ಅವರ ಜನಪ್ರಿಯತೆ ಕುಗ್ಗಿದಂತೆ ಕಾಣುತ್ತಿಲ್ಲ. ಬುಧವಾರ ಆಗ್ರಾದಲ್ಲಿರುವ ಅವರ ನಿವಾಸದ ಹೊರಗೆ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿರುವುದು ವರದಿಯಾಗಿದೆ. ಗುರುವಾರ ಕೂಡ ಕಾಸ್‌ಗಂಜ್‌ನಲ್ಲಿರುವ ಅವರ ಆಶ್ರಮದ ಹೊರಗೆ ಮಹಿಳೆಯರು ಜಮಾಯಿಸಿದ್ದರು.

ಕಾಸ್‌ಗಂಜ್ ಜಿಲ್ಲೆಯ ಬಹದ್ದೂರ್‌ನಗರದ ಸ್ಥಳೀಯರು ಹತ್ರಾಸ್ ದುರಂತಕ್ಕೆ ಬಾಬಾ ಅವರನ್ನು ದೂಷಿಸುವುದಿಲ್ಲ. ಅವರಿಗೆ, ಬಾಬಾ ಯಾರಿಂದಲೂ ದೇಣಿಗೆ ಅಥವಾ ಕಾಣಿಕೆ(ಚದವಾ) ಕೇಳದ ಸಂತ.

ʻಪಿತೂರಿʼ ಸಾಧ್ಯತೆ ಪರಿಶೀಲನೆ: ಉತ್ತರ ಪ್ರದೇಶ ಸರ್ಕಾರ ಘಟನೆಯ ತನಿಖೆಗೆ ಹೈ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ರಚಿಸಿದೆ. ಆಯೋಗ ಕಾಲ್ತುಳಿತದ ಹಿಂದೆ ʻಪಿತೂರಿʼ ಯ ಸಾಧ್ಯತೆಯನ್ನು ಪರಿಶೀಲಿಸಲಿದೆ. ಬಾಬಾ ಇಂಥ ಕೂಡ ಸುಳಿವು ನೀಡಿದ್ದರು. ಸಮಿತಿ 2 ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ. 

ಅಲಹಾಬಾದ್ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ್ ಅವರು ಆಯೋಗದ ನೇತೃತ್ವ ವಹಿಸಿದ್ದು, ನಿವೃತ್ತ ಐಎಎಸ್ ಅಧಿಕಾರಿಗಳಾದ ಹೇಮಂತ್ ರಾವ್ ಮತ್ತು ಭವೇಶ್ ಕುಮಾರ್ ಇತರ ಸದಸ್ಯರು ಎಂದು ಸರ್ಕಾರ ತಿಳಿಸಿದೆ. 

ತನಿಖೆಗೆ ಬಾಬಾ ಸಹಕರಿಸುತ್ತಾರೆ ಎಂದು ಅವರ ವಕೀಲ ಎ.ಪಿ. ಸಿಂಗ್ ಹೇಳಿದ್ದಾರೆ. ʻಕೆಲವು ಸಮಾಜ ವಿರೋಧಿ ಶಕ್ತಿಗಳು ಸಂಚು ರೂಪಿಸಿವೆ,ʼ ಎಂದು ಅವರು ಹೇಳಿದ್ದಾರೆ.

ನ್ಯಾಯಾಲಯಕ್ಕೆ ಅರ್ಜಿ: ಸತ್ಸಂಗ ನಡೆಸಲು ವಿಧಿಸಿದ ಷರತ್ತುಗಳನ್ನು ಸಂಘಟಕರು ಪಾಲಿಸಿದ್ದಾರೆಯೇ ಮತ್ತು ಜನಸಂದಣಿ ನಿಯಂತ್ರಣಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸರು ಮಾಡಿರುವ ವ್ಯವಸ್ಥೆ ಸಮರ್ಪಕವಾಗಿತ್ತೇ ಎಂಬ ಬಗ್ಗೆ ಆಯೋಗ ತನಿಖೆ ನಡೆಸಲಿದೆ. 

ದುರಂತ ಕುರಿತು ಬುಧವಾರ ನ್ಯಾಯಾಲಯಗಳಲ್ಲಿ ಕನಿಷ್ಠ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಐವರು ಸದಸ್ಯರ ತಜ್ಞರ ಸಮಿತಿಯನ್ನು ನೇಮಿಸುವಂತೆ ವಕೀಲರೊಬ್ಬ ರು ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾದ ಮತ್ತೊಂದು ಪಿಐಎಲ್, ಸಿಬಿಐ ತನಿಖೆಗೆ ಕೋರಿದೆ. 

ಕಾಲ್ತುಳಿತ ಹೇಗೆ ಸಂಭವಿಸಿತು?: ಎಫ್‌ಐಆರ್ ಮತ್ತು ಸಿಕಂದ್ರಾ ರಾವ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರ ಪ್ರಾಥಮಿಕ ವರದಿ ಪ್ರಕಾರ, ಭೋಲೆ ಬಾಬಾ ಬೋಧಕ ಸ್ಥಳದಿಂದ ನಿರ್ಗಮಿಸಿದ ಬಳಿಕ ಕಾಲ್ತುಳಿತ ಸಂಭವಿಸಿದೆ.

ಬಾಬಾ ದರ್ಶನಕ್ಕೆ ಮತ್ತು ಅವರು ನಡೆದಾಡಿದ ಸ್ಥಳದಿಂದ ಧೂಳು ಸಂಗ್ರಹಿಸಲು ಭಕ್ತರು ಮುಗಿಬಿದ್ದರು. ಸೇವಾದಾರರು ಜನರನ್ನು ತಳ್ಳಿದರು. ಹೆದ್ದಾರಿ ಪಕ್ಕದ ಇಳಿಜಾರಿನಲ್ಲಿ ಹಲವರು ಜಾರಿ ಬಿದ್ದರು ಎಂದು ಎಸ್‌ಡಿಎಂ ವರದಿ ಹೇಳಿದೆ.

Tags:    

Similar News