Haryana polls | ದ್ವೇಷ, ಭಯ ಹರಡುತ್ತಿರುವ ಬಿಜೆಪಿ - ರಾಹುಲ್
ದೇಶದಲ್ಲಿ ದ್ವೇಷ ಗೆಲ್ಲಲು ಬಿಡುವುದಿಲ್ಲ; ಪ್ರೀತಿ, ಸಹೋದರತೆ ಮತ್ತು ಏಕತೆ ಗೆಲ್ಲುತ್ತದೆ ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.;
ಬಿಜೆಪಿ ನಿರಂತರವಾಗಿ ಧರ್ಮ, ಭಾಷೆ ಮತ್ತು ಜಾತಿ ಆಧಾರದ ಮೇಲೆ ದ್ವೇಷವನ್ನು ಹರಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ (ಅಕ್ಟೋಬರ್ 3) ಹೇಳಿದರು.
ವಿಧಾನಸಭೆ ಚುನಾವಣೆ ಪ್ರಚಾರದ ಕೊನೆಯ ದಿನವಾದ ಗುರುವಾರ, ಇದು ಪ್ರೀತಿ ಮತ್ತು ದ್ವೇಷದ ನಡುವಿನ ಹೋರಾಟ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮೆರವಣಿಗೆ ಮೇಲಿನ ದಾಳಿಯಿಂದ ಹಿಂಸಾಚಾರ ಆರಂಭಗೊಂಡು, ಇಬ್ಬರು ಗೃಹರಕ್ಷಕರು, ಧರ್ಮಗುರು ಸೇರಿದಂತೆ ಆರು ಜನರ ಸಾವಿಗೆ ಕಾರಣವಾದ ನುಹ್‌ನಲ್ಲಿ ಅವರು ಮಾತನಾಡಿದರು.
ಹಿಂಸಾಚಾರದ ಚಕ್ರ ನಿಲ್ಲಬೇಕಿದೆ. ಎಲ್ಲಕ್ಕಿಂತ ಮುಖ್ಯವಾದುದು ಭ್ರಾತೃತ್ವ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಎಲ್ಲಿಗೆ ಹೋದರೂ ದ್ವೇಷವನ್ನು ಹರಡುತ್ತಾರೆ. ಭಾಷೆ, ಧರ್ಮ ಹಾಗೂ ಮತ್ತು ಜಾತಿ ಬಗ್ಗೆ ಮಾತನಾಡುತ್ತಾರೆ. ದ್ವೇಷವನ್ನು ಕೊನೆಗೊಳಿಸಬೇಕು. ಭಾರತ ದ್ವೇಷದ ದೇಶವಲ್ಲ; ಇದು 'ಮೊಹಬ್ಬತ್'ನ ದೇಶ,ʼ ಎಂದು ಹೇಳಿದರು.
ದ್ವೇಷದಿಂದ ದೇಶ ದುರ್ಬಲ: ದೇಶದಲ್ಲಿ ದ್ವೇಷವನ್ನು ಗೆಲ್ಲಲು ನಾವು ಬಿಡುವುದಿಲ್ಲ. ಪ್ರೀತಿ, ಸಹೋದರತೆ ಮತ್ತು ಏಕತೆ ಗೆಲ್ಲುತ್ತದೆ. ದ್ವೇಷ ದಿಂದ ದೇಶ ದುರ್ಬಲಗೊಳ್ಳುತ್ತದೆ; ಅದು ದುಃಖ ಮತ್ತು ಭಯವನ್ನು ಹರಡುತ್ತದೆ; ಪ್ರೀತಿ ಸಹೋದರತ್ವವನ್ನು ಹರಡುತ್ತದೆ ಮತ್ತು ದೇಶ ಪ್ರಗತಿಯಾಗುತ್ತದೆ,ʼ ಎಂದು ಹೇಳಿದರು.
ಸಂವಿಧಾನದ ಪ್ರತಿಯನ್ನು ತೋರಿಸಿ, ʻಬಡವರು, ರೈತರು ಮತ್ತು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿರುವುದು ಸಂವಿಧಾನ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನದ ಮೇಲೆ ದಾಳಿ ನಡೆಸುತ್ತಿವೆ. ಹೋರಾಟ ಇರುವುದು ಇಲ್ಲಿ. ಸಂವಿಧಾನ ಉಳಿಯದಿದ್ದರೆ ಬಡವರ ಬಳಿ ಏನೂ ಇರುವುದಿಲ್ಲ; ನಿಮ್ಮ ಭೂಮಿ, ಹಣ, ನೀರು ನಾಶವಾಗುತ್ತದೆ. ಆಯ್ದ 20-25 ಜನರ ಕೈ ಸೇರಲಿದೆ,ʼ ಎಂದರು.
ವಿಧಾನಸಭೆ ಚುನಾವಣೆಯ ಮತ ಎಣಿಕೆ ಅಕ್ಟೋಬರ್ 8 ರಂದು ನಡೆಯಲಿದೆ.