Haryana polls | ಕಾಂಗ್ರೆಸ್ ಎಂದರೆ ದಲ್ಲಾಳಿಗಳು ಮತ್ತು ಅಳಿಯನ ಸಿಂಡಿಕೇಟ್: ಪ್ರಧಾನಿ

ಕಾಂಗ್ರೆಸ್‌ನ ವಿಭಜಕ ಮತ್ತು ಋಣಾತ್ಮಕ ರಾಜಕೀಯವನ್ನು ರಾಜ್ಯದ ದೇಶಭಕ್ತ ಜನರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಪ್ರಧಾನಿ ಹೇಳಿದರು.

Update: 2024-10-03 13:18 GMT

ʻಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರ, ಜಾತೀಯತೆ, ಕೋಮುವಾದ ಮತ್ತು ಸ್ವಜನಪಕ್ಷಪಾತ ಗ್ಯಾರಂಟಿ. ಆದ್ದರಿಂದ ಜನರು ಆಡಳಿತಾರೂಢ ಬಿಜೆಪಿಗೆ ಮತ ನೀಡಿ, ಮೂರನೇ ಬಾರಿ ಅಧಿಕಾರಕ್ಕೆ ಬರುವಂತೆ ಮಾಡಬೇಕು,ʼ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ (ಅಕ್ಟೋಬರ್ 3) ಹೇಳಿದರು. 

ʻಕಾಂಗ್ರೆಸ್ಸಿನದು ವಿಭಜಕ ಮತ್ತು ಋಣಾತ್ಮಕ ರಾಜಕೀಯ.ಅದನ್ನು ರಾಜ್ಯದ ದೇಶಭಕ್ತ ಜನರು ಎಂದಿಗೂ ಸ್ವೀಕರಿಸುವುದಿಲ್ಲ,ʼ ಎಂದು ಎಕ್ಸ್‌ ನಲ್ಲಿ ಬರೆದಿದ್ದಾರೆ. 

ಬಣ ಜಗಳ: ʻಕಾಂಗ್ರೆಸ್ ಎಂದರೆ ದಲ್ಲಾಳಿಗಳು ಮತ್ತು ಅಳಿಯನ ಸಿಂಡಿಕೇಟ್ʼ ಎಂದು ಅವರು ಭೂಪಿಂದರ್ ಹೂಡಾ ಮುಖ್ಯಮಂತ್ರಿ ಆಗಿದ್ದಾಗ (2004-14) ರಾಬರ್ಟ್ ವಾದ್ರಾ ಅವರನ್ನು ಒಳಗೊಂಡ ಭೂವಿವಾದ ಕುರಿತು ಟೀಕಿಸಿದರು.

ಹೂಡಾ ಮತ್ತು ಅವರ ಸಂಸದ ಪುತ್ರ ದೀಪೇಂದರ್ ಸಿಂಗ್ ಹೂಡಾ ಅವರನ್ನು ಗುರಿಯಾಗಿಸಿಕೊಂಡು, ʻತಂದೆ-ಮಗನ ಮುಖ್ಯ ಗುರಿ ಸ್ವಹಿತಾಸಕ್ತಿ ಮಾತ್ರ. ಕಾಂಗ್ರೆಸ್ ನಾಯಕರು ಬಣ ಜಗಳದಲ್ಲಿ ತೊಡಗಿದ್ದು, ಎಂದಿಗೂ ಸ್ಥಿರವಾದ ಸರ್ಕಾರವನ್ನು ನೀಡಲು ಸಾಧ್ಯವಿಲ್ಲ ಎನ್ನುವುದು ಜನರಿಗೆ ತಿಳಿದಿದೆ,ʼ ಎಂದು ಹೇಳಿದರು.

ʻದೆಹಲಿ ಮತ್ತು ಹರಿಯಾಣದಲ್ಲಿ ಕುಳಿತಿರುವ ಎರಡು ಕುಟುಂಬಗಳ ಆದೇಶದ ಮೇರೆಗೆ ಇಡೀ ರಾಜ್ಯವನ್ನು ಅವಮಾನಿಸಲಾಗುತ್ತಿದ್ದು, ಹರಿಯಾಣದ ಜನರು ನೋವು ಅನುಭವಿಸುತ್ತಿದ್ದಾರೆ. ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಜನ ನೋಡುತ್ತಿದ್ದಾರೆ. ಕಾಂಗ್ರೆಸ್‌ನ ನೀತಿಗಳು ಜನರನ್ನು ನಾಶಮಾಡುತ್ತವೆ ಮತ್ತು ಅದಕ್ಕಾಗಿಯೇ ಹರಿಯಾಣದಲ್ಲಿ ಪಕ್ಷವನ್ನು ಅವರು ಬಯಸುವುದಿಲ್ಲ,ʼ ಎಂದು ಹೇಳಿದರು.

ಹಗರಣಗಳ ಯುಗದಿಂದ ಹೊರತಂದಿದ್ದೇವೆ: ʻಮೀಸಲು ಕೊನೆಗೊಳಿಸುವ ಮಾತನಾಡಿದ ಕಾಂಗ್ರೆಸ್ ನಾಯಕರು ತಮ್ಮ ನಿಜವಾದ ಉದ್ದೇಶ ಹೊರಹಾಕಿದ್ದಾರೆ. ಹರಿಯಾಣದಲ್ಲಿ ಬಿಜೆಪಿ 10 ವರ್ಷಗಳ ಆಡಳಿತದಲ್ಲಿ ಜನರ ಜೀವನವನ್ನು ಸುಧಾರಿಸಲು ಅವಿರತವಾಗಿ ಕೆಲಸ ಮಾಡಿದೆ. ರೈತರು, ಯುವಜನರು, ಮಹಿಳೆಯರು, ಹಳ್ಳಿಗಳು ಅಥವಾ ನಗರ ಸೇರಿದಂತೆ ಎಲ್ಲರ ಕಲ್ಯಾಣಕ್ಕೆ ಆದ್ಯತೆ ನೀಡಿದೆ,ʼ ಎಂದು ಹೇಳಿದರು. 

ʻಹಗರಣ ಮತ್ತು ಗಲಭೆಗಳ ಯುಗದಿಂದ ನಾವು ಹರಿಯಾಣವನ್ನು ಹೊರತಂದಿದ್ದೇವೆ. ಹರಿಯಾಣದಲ್ಲಿ ಎಲ್ಲೆಡೆ ಮತ್ತೊಮ್ಮೆ ಬಿಜೆಪಿ ಎಂಬ ಕೂಗು ಪ್ರತಿಧ್ವನಿಸುತ್ತಿದೆ,ʼ ಎಂದು ಹೇಳಿದರು. 

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ ಐದು ಸ್ಥಾನ ಗೆದ್ದು, ಸಮಬಲ ಸಾಧಿಸಿವೆ. ಕಾಂಗ್ರೆಸ್‌ 10 ವರ್ಷಗಳ ನಂತರ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಠಿಣ ಹೋರಾಟ ನಡೆಸುತ್ತಿದೆ.

Tags:    

Similar News