Haryana polls | ಬಿಜೆಪಿ ಪ್ರಣಾಳಿಕೆ: 2 ಲಕ್ಷ ಸರ್ಕಾರಿ ಉದ್ಯೋಗ, ಮಹಿಳೆಯರಿಗೆ ಮಾಸಿಕ 2,100 ರೂ.ಭರವಸೆ

ಸತತ ಮೂರನೇ ಅವಧಿ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಚುನಾವಣೆಗೆ ಮುಂಚಿತವಾಗಿ 20 ಭರವಸೆಗಳ ಸರಣಿಯನ್ನು ಘೋಷಿಸಿದೆ; ಜನಕಲ್ಯಾಣ, ಉದ್ಯೋಗ ಮತ್ತು ಮೂಲಸೌಕರ್ಯಗಳನ್ನು ಕೇಂದ್ರೀಕರಿಸಿದೆ.;

Update: 2024-09-19 09:00 GMT

ಬಿಜೆಪಿ ರೋಹ್ಟಕ್‌ನಲ್ಲಿ ಗುರುವಾರ (ಸೆಪ್ಟೆಂಬರ್ 19) ಹರಿಯಾಣ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಮಾಜಿ ಅಗ್ನಿವೀರರಿಗೆ ಶಾಶ್ವತ ಉದ್ಯೋಗ, ರೈತರಿಂದ 24 ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯಲ್ಲಿ ಖರೀದಿಸುವ ಭರವಸೆ ನೀಡಿದೆ. 

ಕೇಂದ್ರ ಸಚಿವ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಅವರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಕೇಂದ್ರ ಸಚಿವ ಎಂ.ಎಲ್. ಖಟ್ಟರ್, ಪಕ್ಷದ ಹಿರಿಯ ನಾಯಕರಾದ ರಾವ್ ಇಂದರ್‌ಜಿತ್ ಸಿಂಗ್ ಮತ್ತು ಕೆ.ಪಿ. ಗುರ್ಜರ್ ಅವರ ಸಮ್ಮುಖದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. 

ಜನಕಲ್ಯಾಣ, ಉದ್ಯೋಗದತ್ತ ಗಮನ: ಮೂರನೇ ಅವಧಿ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಚುನಾವಣೆಗೆ ಮುನ್ನ 20 ಭರವಸೆಗಳನ್ನು ಘೋಷಿಸಿದೆ. 

ಲಾಡೋ ಲಕ್ಷ್ಮಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ ತಿಂಗಳಿಗೆ 2,100 ರೂ., 50,000 ಸ್ಥಳೀಯರಿಗೆ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿರುವ 10 ಕೈಗಾರಿಕಾ ನಗರಗಳ ನಿರ್ಮಾಣ, 2 ಲಕ್ಷ ಸ್ಥಳೀಯರಿಗೆ ಸರ್ಕಾರಿ ಉದ್ಯೋಗ, ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಉತ್ತೇಜನ ಯೋಜನೆಯಡಿ 5 ಲಕ್ಷ ವ್ಯಕ್ತಿಗಳಿಗೆ ಹೆಚ್ಚುವರಿ ಉದ್ಯೋಗಾವಕಾಶದ ಭರವಸೆ ನೀಡಿದೆ. 

ಹಲವು ಆರೋಗ್ಯ ಉಪಕ್ರಮಗಳ ಭರವಸೆ ನೀಡಿದೆ. ಚಿರಾಯು-ಆಯುಷ್ಮಾನ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಸದಸ್ಯರಿಗೆ 5 ಲಕ್ಷ ರೂ. ಹೆಚ್ಚುವರಿ ಆರೋಗ್ಯ ವಿಮೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮತ್ತು ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ರೋಗನಿರ್ಣಯ ಪರೀಕ್ಷೆಯ ಭರವಸೆ ನೀಡಿದೆ. ಹರ್ ಘರ್ ಗೃಹನಿ ಯೋಜನೆಯಡಿ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌, ಡಿಎ ಮತ್ತು ಪಿಂಚಣಿಗಳನ್ನು ಜೋಡಿಸುವ ವೈಜ್ಞಾನಿಕ ಸೂತ್ರ ಆಧರಿಸಿ ಎಲ್ಲಾ ಸಾಮಾಜಿಕ ಮಾಸಿಕ ಪಿಂಚಣಿಗಳನ್ನು ಹೆಚ್ಚಿಸುವುದಾಗಿ ಭರವಸೆ ನೀಡಿದೆ. 

ಒಬಿಸಿ, ಎಸ್‌ಸಿ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಗ್ರಾಮೀಣ ಪ್ರದೇಶಗಳಲ್ಲಿ ಕಾಲೇಜಿಗೆ ಹೋಗುವ ಯುವತಿಯರಿಗೆ ಸ್ಕೂಟರ್‌, ಮುದ್ರಾ ಯೋಜನೆಯಡಿ ಒಬಿಸಿ ವರ್ಗದ ಉದ್ಯಮಿಗಳಿಗೆ 25 ಲಕ್ಷ ರೂ.ಸಾಲ ಹಾಗೂ ದಕ್ಷಿಣ ಹರಿಯಾಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅರಾವಳಿ ಜಂಗಲ್ ಸಫಾರಿ ಪಾರ್ಕ್ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದೆ. 

ಪರಿವರ್ತಿತ ಹರಿಯಾಣ: ʻಕಳೆದ 10 ವರ್ಷಗಳಲ್ಲಿ ಹರಿಯಾಣ ಪ್ರಗತಿಯ ಪಥದಲ್ಲಿ ಸಾಗಿದೆ. ಹರಿಯಾಣ ಬದಲಾಗಿರುವುದನ್ನು ಸ್ಪಷ್ಟವಾಗಿ ನೋಡುತ್ತೀರಿ ಮತ್ತು ವ್ಯತ್ಯಾಸ ಗೋಚರಿಸುತ್ತದೆ,ʼ ಎಂದು ನಡ್ಡಾ ಹೇಳಿದರು.

Tags:    

Similar News