ನವದೆಹಲಿ: ಆಮ್ ಆದ್ಮಿ ಪಕ್ಷ ಹರಿಯಾಣ ವಿಧಾನಸಭೆ ಚುನಾವಣೆಗೆ 11 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಮಂಗಳವಾರ ತಡರಾತ್ರಿ ಬಿಡುಗಡೆ ಮಾಡಿದೆ.
90 ಸದಸ್ಯ ಬಲದ ಹರಿಯಾಣ ಅಸೆಂಬ್ಲಿಯಲ್ಲಿ ಪಕ್ಷ ಇದುವರೆಗೆ 40 ಅಭ್ಯರ್ಥಿಗಳನ್ನು ಘೋಷಿಸಿದೆ. 3ನೇ ಪಟ್ಟಿಯಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ವಿರುದ್ಧ ಪ್ರವೀಣ್ ಗುಸ್ಖಾನಿ ಅವರನ್ನು ಗರ್ಹಿ ಸಂಪ್ಲಾ-ಕಿಲೋಯ್ ಕ್ಷೇತ್ರದಿಂದ ಕಣಕ್ಕಿಳಿಸಿದೆ. ರಾಡೌರ್‌ನಿಂದ ಭೀಮ್ ಸಿಂಗ್ ರಾಠಿ, ನಿಲೋಖೇರಿಯಿಂದ ಅಮರ್ ಸಿಂಗ್, ಇಸ್ರಾನದಿಂದ ಅಮಿತ್ ಕುಮಾರ್, ಜಜ್ಜರ್‌ನಿಂದ ಮಹೇಂದರ್ ದಹಿಯಾ, ರೆವಾರಿಯಿಂದ ಸತೀಶ್ ಯಾದವ್ ಮತ್ತು ಹಾಥಿನ್‌ನಿಂದ ಕರ್ನಲ್ (ನಿವೃತ್ತ) ರಾಜೇಂದ್ರ ರಾವತ್ ಕಣಕ್ಕೆ ಇಳಿದಿದ್ದಾರೆ.
ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಮಾತುಕತೆ ಮುರಿದು ಬಿದ್ದಿರುವ ಹಿನ್ನೆಲೆಯಲ್ಲಿ ಎಎಪಿ 20 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿತ್ತು.ಆನಂತರ ಒಂಬತ್ತು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿತು. ಹರಿಯಾಣ ಆಪ್ ಅಧ್ಯಕ್ಷ ಸುಶೀಲ್ ಗುಪ್ತಾ ಹೆಸರು ಎರಡೂ ಪಟ್ಟಿಯಲ್ಲಿ ಕಾಣೆಯಾಗಿದೆ.
ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 12 ಕೊನೆ ದಿನವಾಗಿದ್ದು,ಅಕ್ಟೋಬರ್ 5 ರಂದು ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ ಹರಿಯಾಣದಲ್ಲಿ ಎಎಪಿಗೆ ಕಾಂಗ್ರೆಸ್ ಒಂದು ಸ್ಥಾನ ನೀಡಿತ್ತು. ಆದರೆ, ಗೆಲ್ಲುವಲ್ಲಿ ವಿಫಲವಾಯಿತು. 2019 ರ ವಿಧಾನಸಭೆ ಚುನಾವಣೆಯಲ್ಲಿ 46 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು,ಯಾವುದೇ ಸ್ಥಾನ ಗೆಲ್ಲಲಿಲ್ಲ.