Haryana polls| ಆಪ್‌ನಿಂದ 9 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

Update: 2024-09-10 10:46 GMT

ಚಂಡೀಗಢ/ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷವು ಒಂಬತ್ತು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಬಿಜೆಪಿಯಿಂದ ಪಕ್ಷಾಂತರ ಮಾಡಿರುವ ಮಾಜಿ ಸಚಿವ ಛತ್ತರ್ ಪಾಲ್ ಸಿಂಗ್ ಅವರನ್ನು ಬರ್ವಾಲಾದಿಂದ ಕಣಕ್ಕಿಳಿಸಿದೆ. ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ಮಾತುಕತೆ ವಿಳಂಬಗೊಂಡ ಬಳಿಕ 20 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿತ್ತು. 

ರೀಟಾ ಬಮಾನಿಯಾ ಸಧೌರಾ, ಕಿಶನ್ ಬಜಾಜ್ ಥಾನೇಸರ್‌, ಹವಾ ಸಿಂಗ್ ಇಂದ್ರಿ, ರಾತಿಯಾದಿಂದ ಮುಖ್ತಿಯಾರ್ ಸಿಂಗ್ ಬಾಜಿಗರ್, ಆದಂಪುರದಿಂದ ಭೂಪೇಂದ್ರ ಬೇನಿವಾಲ್, ಬರ್ವಾಲಾದಿಂದ ಛತ್ತರ್ ಪಾಲ್ ಸಿಂಗ್, ಜವಾಹರ್ ಲಾಲ್ ಬವಾಲ್‌ ನಿಂದ , ಪ್ರವೇಶ್ ಮೆಹ್ತಾ ಫರಿದಾಬಾದ್ ನಿಂದ ಮತ್ತು ಅಬಾಶ್ ಚಾಂಡೇಲಾ ತಿಗಾಂವ್‌ನಿಂದ ಸ್ಪರ್ಧಿಸಲಿದ್ದಾರೆ. 

ಚುನಾವಣೆಯ ನಾಮಪತ್ರ ಸಲ್ಲಿಕೆ ಸೆಪ್ಟೆಂಬರ್ 12 ರಂದು ಮುಕ್ತಾಯಗೊಳ್ಳುತ್ತದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5 ರಂದು ಚುನಾವಣೆ ನಡೆಯಲಿದೆ. 

ಕಾಂಗ್ರೆಸ್ ಜೊತೆಗಿನ ಮೈತ್ರಿ ವಿಷಯ ಕುರಿತು ಎಎಪಿಯ ಹರಿಯಾಣ ಅಧ್ಯಕ್ಷ ಸುಶೀಲ್ ಗುಪ್ತಾ ಪ್ರತಿಕ್ರಿಯಿಸಿ, ʻನಾವು ಎಲ್ಲಾ 90 ಸ್ಥಾನಗಳಿಗೆ ಮೊದಲ ದಿನದಿಂದಲೇ ತಯಾರಿ ನಡೆಸುತ್ತಿದ್ದೇವೆ. ಚುನಾವಣೆಗೆ ಹೆಚ್ಚು ಸಮಯ ಉಳಿದಿಲ್ಲ. ನಾಮಪತ್ರ ಸಲ್ಲಿಕೆಗೆ ಸೆ.12 ಕೊನೆ ದಿನ. ಆದ್ದರಿಂದ ಕಾಯುವಿಕೆ ಕೊನೆಗೊಂಡಿದೆ,ʼ ಎಂದರು. ಎಎಪಿಯ ಮತ್ತೊಬ್ಬ ನಾಯಕ ಸಂಜಯ್ ಸಿಂಗ್, ಹರಿಯಾಣ ಚುನಾವಣೆಯಲ್ಲಿ ಪಕ್ಷ ಸಂಪೂರ್ಣ ಶಕ್ತಿಯೊಂದಿಗೆ ಹೋರಾಡಲಿದೆ ಎಂದು ಹೇಳಿದ್ದಾರೆ. 

ಮೂಲಗಳ ಪ್ರಕಾರ, ಆಪ್‌ 10 ಸ್ಥಾನಗಳಿಗೆ ಬೇಡಿಕೆಯಿರಿಸಿತ್ತು. ಕಾಂಗ್ರೆಸ್ ಕೇವಲ ಐದು ಸ್ಥಾನ ನೀಡಲು ಸಿದ್ಧವಿತ್ತು.

ಕಾಂಗ್ರೆಸ್ ಮತ್ತು ಎಎಪಿ ಲೋಕಸಭೆ ಚುನಾವಣೆಯಲ್ಲಿ ದೆಹಲಿಯಲ್ಲಿ ಒಟ್ಟಾಗಿ ಹಾಗೂ ಪಂಜಾಬಿನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಹರಿಯಾಣದಲ್ಲಿ ಎಎಪಿಗೆ ಕಾಂಗ್ರೆಸ್ ಒಂದು ಸ್ಥಾನ ನೀಡಿತ್ತು; ಆದರೆ, ಗೆಲ್ಲುವಲ್ಲಿ ವಿಫಲವಾಗಿತ್ತು. 

Tags:    

Similar News