Haryana Assembly polls | 11 ಗಂಟೆವರೆಗೆ ಶೇ.22 ಮತದಾನ

ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ 101 ಮಹಿಳೆಯರು ಸೇರಿದಂತೆ ಒಟ್ಟು 1,031 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅಕ್ಟೋಬರ್‌ 8 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Update: 2024-10-05 07:15 GMT
ಹರಿಯಾಣದ ಕೈತಾಲ್‌ನಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿಯರು ಸೆಲ್ಫಿ ತೆಗೆದುಕೊಂಡರು.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಇಂದು (ಅಕ್ಟೋಬರ್ 5) ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದೆ. ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ, ದಶಕದ ನಂತರ ಕಾಂಗ್ರೆಸ್ ಪುನರಾಗಮನದ ನಿರೀಕ್ಷೆಯಲ್ಲಿದೆ. 2 ಕೋಟಿಗೂ ಹೆಚ್ಚು ಜನರು ಮತದಾನದ ಹಕ್ಕು ಹೊಂದಿದ್ದಾರೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಬೆಳಗ್ಗೆ 11 ಗಂಟೆವರೆಗೆ ಶೇ. 22.7ರಷ್ಟು ಮತದಾನವಾಗಿದೆ. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಮಾಜಿ ಸಿಎಂ ಕಾಂಗ್ರೆಸ್‌ ನ ಭೂಪಿಂದರ್ ಸಿಂಗ್ ಹೂಡಾ, ವಿನೇಶ್ ಫೋಗಟ್, ಜೆಜೆಪಿಯ ದುಶ್ಯಂತ್ ಚೌಟಾಲಾ ಸೇರಿದಂತೆ 1,027 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಮತ್ತು ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಆರಂಭಿಕ ಮತದಾರರಲ್ಲಿ ಸೇರಿದ್ದಾರೆ.

8,821 ಶತಾಯುಷಿಗಳು ಸೇರಿದಂತೆ 2,03,54,350 ಮತ ಚಲಾಯಿಸಲು ಅರ್ಹರಾಗಿದ್ದಾರೆ. ಮತದಾನ ಸಂಜೆ 6 ರವರೆಗೆ ನಡೆಯಲಿದೆ ಎಂದು ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿ ಪಂಕಜ್ ಅಗರ್ವಾಲ್ ಹೇಳಿದ್ದಾರೆ.

90 ವಿಧಾನಸಭೆ ಕ್ಷೇತ್ರಗಳಲ್ಲಿ 101 ಮಹಿಳೆಯರು ಸೇರಿದಂತೆ 1,031 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ 464 ಮಂದಿ ಸ್ವತಂತ್ರ ಅಭ್ಯರ್ಥಿಗಳು. ಮತದಾನಕ್ಕಾಗಿ ಒಟ್ಟು 20,632 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅಗರ್ವಾಲ್ ಹೇಳಿದರು.

ಪ್ರಮುಖ ಪಕ್ಷಗಳು:  ಬಿಜೆಪಿ, ಕಾಂಗ್ರೆಸ್, ಎಎಪಿ, ಐಎನ್‌ಎಲ್‌ಡಿ-ಬಿಎಸ್‌ಪಿ ಮತ್ತು ಜೆಜೆಪಿ-ಆಜಾದ್ ಸಮಾಜ ಪಕ್ಷಗಳು ಕಣದಲ್ಲಿರುವ ಪ್ರಮುಖ ಪಕ್ಷಗಳು.

ಗುರುವಾರ ಸಂಜೆ ಪ್ರಚಾರ ಕೊನೆಗೊಂಡಿತು. ನಾಲ್ಕು ಸಭೆಗಳಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಪ್ರಚಾರ ವನ್ನು ಮುನ್ನಡೆಸಿದರು. ರಾಮಮಂದಿರ ಸೇರಿದಂತೆ ದೇಶಕ್ಕೆ ಪ್ರಮುಖವಾದ ಪ್ರತಿಯೊಂದು ವಿಷಯದಲ್ಲೂ ಕಾಂಗ್ರೆಸ್‌ ಗೊಂದಲ ಸೃಷ್ಟಿಸಿದೆ. ಕಾಂಗ್ರೆಸ್‌ನ ರಕ್ತನಾಳಗಳಲ್ಲಿ ಭ್ರಷ್ಟಾಚಾರವಿದೆ. ಅದು ʻದಲಾಲರು ಮತ್ತು ಅಳಿಯನ ಪಕ್ಷವಾಗಿ ಮಾರ್ಪಟ್ಟಿದೆ,ʼ ಎಂದು ಆರೋಪಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹರ್ಯಾಣದಲ್ಲಿ ʻಕಾಂಗ್ರೆಸ್ ಚಂಡಮಾರುತʼ ಬೀಸುತ್ತಿದೆ. ಪಕ್ಷವು ಬಡವರು ಮತ್ತು ರೈತರ ಸರ್ಕಾರವನ್ನು ರಚಿಸುತ್ತದೆ ಎಂದು ಹೇಳಿದರು.

2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 40, ಕಾಂಗ್ರೆಸ್ 31 ಮತ್ತು ಜೆಜೆಪಿ 10 ಸ್ಥಾನ ಗೆದ್ದಿತ್ತು.

Tags:    

Similar News