ಜಿಬಿಎ ಚುನಾವಣೆ |ವಾರ್ಡ್‌ ಪುನರ್‌ವಿಂಗಡಣೆಗೆ ನ.15, ಮೀಸಲಾತಿಗೆ ಡಿ.15ರವರೆಗೆ ಸುಪ್ರೀಂಕೋರ್ಟ್ ಗಡುವು

ಕಾಂಗ್ರೆಸ್ ಮುಖಂಡ ಎಂ. ಶಿವರಾಜು ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಉಜ್ಜಲ್ ಭುಯಾನ್ ಮತ್ತು ಜೋಯಮಲ್ಯ ಬಾಗ್ಚಿ ಅವರಿದ್ದ ತ್ರಿಸದಸ್ಯ ಪೀಠ ಗಡುವು ವಿಧಿಸಿದೆ.

Update: 2025-11-03 15:00 GMT

ಸುಪ್ರೀಂ ಕೋರ್ಟ್‌ ಹಾಗೂ ಜಿಬಿಎ ಕೇಂದ್ರ ಕಚೇರಿ

Click the Play button to listen to article

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

ವಾರ್ಡ್‌ಗಳ ಪುನರ್‌ ವಿಂಗಡಣೆಯ ಅಂತಿಮ ಅಧಿಸೂಚನೆ ಪ್ರಕಟಿಸಲು ನವೆಂಬರ್ 15 ರವರೆಗೆ ಮತ್ತು ವಾರ್ಡ್‌ವಾರು ಮೀಸಲಾತಿ ಅಂತಿಮ ಅಧಿಸೂಚನೆ ಪ್ರಕಟಿಸಲು ಡಿಸೆಂಬರ್ 15 ರವರೆಗೆ ರಾಜ್ಯ ಸರ್ಕಾರಕ್ಕೆ ಕಾಲಾವಕಾಶ ನೀಡಿದೆ.

ಕಾಂಗ್ರೆಸ್ ಮುಖಂಡ ಎಂ. ಶಿವರಾಜು ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಉಜ್ಜಲ್ ಭುಯಾನ್ ಮತ್ತು ಜೋಯಮಲ್ಯ ಬಾಗ್ಚಿ ಅವರಿದ್ದ ತ್ರಿಸದಸ್ಯ ಪೀಠ ಈ ಗಡುವು ವಿಧಿಸಿದೆ.

ಪ್ರಕರಣದ ಹಿನ್ನೆಲೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜಿಸಿ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಪಶ್ಚಿಮ ಮತ್ತು ಬೆಂಗಳೂರು ಪೂರ್ವ ಎಂಬ ಐದು ಹೊಸ ಮಹಾನಗರ ಪಾಲಿಕೆಗಳನ್ನು ರಚಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (ಜಿಬಿಎ) ರಾಜ್ಯ ಸರ್ಕಾರ ರಚಿಸಿತ್ತು. ಆದರೆ, ವಾರ್ಡ್‌ಗಳ ಪುನರ್‌ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ, ಹಲವು ವರ್ಷಗಳಿಂದ ಚುನಾವಣೆ ನಡೆದಿಲ್ಲ. ಈ ವಿಳಂಬವನ್ನು ಪ್ರಶ್ನಿಸಿ, ಶೀಘ್ರ ಚುನಾವಣೆ ನಡೆಸಲು ಕೋರಿ ಸುಪ್ರೀಂಕೋರ್ಟ್‌ಗೆ ಎಂ.ಶಿವರಾಜು ಇತರರು ಅರ್ಜಿ ಸಲ್ಲಿಸಿದ್ದರು.

ಸುಪ್ರೀಂಕೋರ್ಟ್‌ನಲ್ಲಿ ನಡೆದಿದ್ದೇನು?

ವಿಚಾರಣೆಯ ವೇಳೆ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, "ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ನಡೆಸಲು ಅಧಿಕಾರಿಗಳನ್ನು ನೇಮಿಸಿದ್ದರಿಂದ ಕ್ಷೇತ್ರ ಪುನರ್‌ ವಿಂಗಡಣೆ ಪ್ರಕ್ರಿಯೆ ವಿಳಂಬವಾಯಿತು. ಈಗ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ನವೆಂಬರ್ 15ರೊಳಗೆ ವಾರ್ಡ್‌ ಪುನರ್‌ ವಿಂಗಡಣೆ ಮತ್ತು ಡಿಸೆಂಬರ್ 15ರೊಳಗೆ ವಾರ್ಡ್‌ ಮೀಸಲಾತಿ ಅಂತಿಮ ಅಧಿಸೂಚನೆ ಪ್ರಕಟಿಸಲಾಗುವುದು," ಎಂದು ಪೀಠಕ್ಕೆ ತಿಳಿಸಿದರು.

ರಾಜ್ಯ ಚುನಾವಣಾ ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್. ಫಣೀಂದ್ರ, "ಚುನಾವಣಾ ಪ್ರಕ್ರಿಯೆ ಆರಂಭಿಸಲು ಆಯೋಗ ಸಿದ್ಧವಿದೆ. ಈಗಾಗಲೇ ಜಿಲ್ಲಾ ಮತ್ತು ಹೆಚ್ಚುವರಿ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಆದರೆ, ಅಧಿಸೂಚನೆಗಳು ಪ್ರಕಟವಾದ ನಂತರ, ಸಂಪೂರ್ಣ ಚುನಾವಣೆ ನಡೆಸಲು ಆಯೋಗಕ್ಕೆ ಎರಡರಿಂದ ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ," ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಈ ವೇಳೆ, ಅರ್ಜಿದಾರರ ಪರ ವಕೀಲರು, "ಸರ್ಕಾರವು ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆ ಅನುಸರಿಸುತ್ತಿದೆ," ಎಂದು ಆಕ್ಷೇಪಿಸಿದರು.

ಪೀಠದ ಆದೇಶವೇನು?

ಎಲ್ಲಾ ಕಡೆಯ ವಾದಗಳನ್ನು ಆಲಿಸಿದ ಪೀಠವು, ರಾಜ್ಯ ಸರ್ಕಾರವು ಕೋರಿದ ಕಾಲಾವಕಾಶವನ್ನು ಮಾನ್ಯ ಮಾಡಿ, "ಕ್ಷೇತ್ರ ಪುನರ್‌ ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ನವೆಂಬರ್ 15ರೊಳಗೆ ಮತ್ತು ವಾರ್ಡ್‌ ಮೀಸಲಾತಿ ಅಂತಿಮ ಅಧಿಸೂಚನೆಯನ್ನು ಡಿಸೆಂಬರ್ 15ರೊಳಗೆ ಕಡ್ಡಾಯವಾಗಿ ಪ್ರಕಟಿಸಬೇಕು," ಎಂದು ಆದೇಶಿಸಿ, ವಿಚಾರಣೆಯನ್ನು ಮುಂದೂಡಿತು.

Tags:    

Similar News