ಮಾಜಿ ಸೇನಾ ಮುಖ್ಯಸ್ಥ ಜನರಲ್ ಸುಂದರರಾಜನ್ ಪದ್ಮನಾಭನ್ ನಿಧನ

ಜನರಲ್ ಪದ್ಮನಾಭನ್ ಅವರು 2000 ರಿಂದ 2002 ರವರೆಗೆ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು; 15 ಕಾರ್ಪ್ಸ್ ಕಮಾಂಡರ್ ಆಗಿ ಅವರು ಸಲ್ಲಿಸಿದ ಸೇವೆಗೆ ಅತಿ ವಿಶಿಷ್ಟ ಸೇವಾ ಪದಕ ನೀಡಲಾಯಿತು

Update: 2024-08-19 07:48 GMT

ಸೇನಾ ವಲಯದಲ್ಲಿ ಪ್ರೀತಿಯಿಂದ ʻಪ್ಯಾಡಿʼ ಎಂದು ಕರೆಸಿಕೊಳ್ಳುತ್ತಿದ್ದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಸುಂದರರಾಜನ್ ಪದ್ಮನಾಭನ್ ಅವರು ವಯೋಸಹಜ ಕಾರಣದಿಂದ ಚೆನ್ನೈನಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. 

ಸೆಪ್ಟೆಂಬರ್ 30, 2000 ರಿಂದ 31 ಡಿಸೆಂಬರ್ 31, 2002 ರವರೆಗೆ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. 15 ಕಾರ್ಪ್ಸ್ ಕಮ್ಯಾಂಡರ್ ಆಗಿ ಅವರ ಸೇವೆಗೆ ಅತಿ ವಿಶಿಷ್ಟ ಸೇವಾ ಪದಕ (ಎವಿಎಸ್‌ಎಂ) ನೀಡಲಾಗಿತ್ತು.

ದೆಹಲಿಯ ಎನ್‌ಡಿಸಿಗೆ ಮೊದಲು ಅವರು ಆರ್ಟಿಲರಿ ಬ್ರಿಗೇಡ್ ಮತ್ತು ಮೌಂಟೇನ್ ಬ್ರಿಗೇಡ್‌ ಮುಖ್ಯಸ್ಥರಾಗಿದ್ದರು.

ವೃತ್ತಿಜೀವನ: ಡಿಸೆಂಬರ್ 5, 1940 ರಂದು ಕೇರಳದ ತಿರುವನಂತಪುರದಲ್ಲಿ ಜನಿಸಿದ ಪದ್ಮನಾಭನ್ ಅವರು, ಡೆಹ್ರಾಡೂನಿನ ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು (ಆರ್‌ಐಎಂಸಿ) ಮತ್ತು ಪುಣೆಯ ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ)ಯ ವಿದ್ಯಾರ್ಥಿ. ಡಿಸೆಂಬರ್ 13, 1959 ರಂದು ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ)ಯಿಂದ ಪದವಿ ಪಡೆದ ನಂತರ ಅವರನ್ನು ಆರ್ಟಿಲರಿ ರೆಜಿಮೆಂಟ್‌ಗೆ ನಿಯೋಜಿಸಲಾಯಿತು.

ಹಲವು ವಿಭಾಗಗಳಲ್ಲಿ ಸೇವೆ: 1973 ರಲ್ಲಿ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ (ಡಿಎಸ್‌ಎಸ್‌ಸಿ) ಮತ್ತು ನವದೆಹಲಿಯ ನ್ಯಾಷನಲ್ ಡಿಫೆನ್ಸ್ ಕಾಲೇಜ್ (ಎನ್‌ಡಿಸಿ) ನಿಂದ ಪದವಿ ಪಡೆದ ಬಳಿಕ ಆಗಸ್ಟ್ 1975 ರಿಂದ ಜುಲೈ 1976 ರವರೆಗೆ ಲೈಟ್ ಬ್ಯಾಟರಿ ಹಾಗೂ ಸೆಪ್ಟೆಂಬರ್ 1977 ರಿಂದ ಮಾರ್ಚ್ 1980 ವರೆಗೆ ಗಜಾಲಾ ಮೌಂಟೇನ್ ರೆಜಿಮೆಂಟ್‌ಗೆ ನೇಮಕಗೊಂಡರು. ಗಜಾಲಾ ಭಾರತೀಯ ಸೇನೆಯ ಅತ್ಯಂತ ಹಳೆಯ ಫಿರಂಗಿ ರೆಜಿಮೆಂಟ್‌ಗಳಲ್ಲಿ ಒಂದು.

ಡಿಯೋಲಾಲಿಯಲ್ಲಿರುವ ಸ್ಕೂಲ್ ಆಫ್ ಆರ್ಟಿಲರಿಯಲ್ಲಿ ಬೋಧಕರಾಗಿ, ಪದಾತಿದಳದ ಬ್ರಿಗೇಡ್‌ನ ಬ್ರಿಗೇಡ್ ಮೇಜರ್ ಆಗಿ ಮತ್ತು ಜನವರಿ 1983 ರಿಂದ ಮೇ 1985 ರವರೆಗೆ ಪರ್ವತ ವಿಭಾಗದ ಕರ್ನಲ್ ಜನರಲ್ ಆಗಿ ಸೇವೆ ಸಲ್ಲಿಸಿ, ವಿಶಿಷ್ಟ ಸೇವಾ ಪದಕಕ್ಕೆ ಪಾತ್ರರಾಗಿದ್ದರು. ಜತೆಗೆ, ಐಎಂಎಯಲ್ಲಿ ಎರಡು ಅವಧಿಗೆ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ.

ಜಿಒಸಿ ಆಗಿ ಸೇವೆ: ಬಿಹಾರ ಮತ್ತು ಪಂಜಾಬ್‌ನ ಪದಾತಿದಳದ ಜನರಲ್ ಆಫೀಸರ್ ಕಮಾಂಡಿಂಗ್ ಹಾಗೂ 3 ಕಾರ್ಪ್ಸ್ ಚೀಫ್ ಆಫ್ ಸ್ಟಾಫ್ ಆಗಿ ಸೇವೆ ಸಲ್ಲಿಸಿದರು. ಲೆಫ್ಟಿನೆಂಟ್ ಜನರಲ್ ಆಗಿ ಬಡ್ತಿ ಪಡೆದ ನಂತರ, ಕಾಶ್ಮೀರ ಕಣಿವೆಯಲ್ಲಿ 15 ಕಾರ್ಪ್ಸ್‌ ಕಮಾಂಡರ್ ಆಗಿದ್ದರು. ಡೈರೆಕ್ಟರ್ ಜನರಲ್ ಮಿಲಿಟರಿ ಇಂಟೆಲಿಜೆನ್ಸ್ (ಡಿಜಿಎಂಐ), ಉತ್ತರ ಕಮಾಂಡ್‌ನ ಜಿಒಸಿ ಹಾಗೂ ಸೇನೆಯ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ಅವರು ದಕ್ಷಿಣ ಕಮಾಂಡ್‌ನ ಜಿಒಸಿ ಆಗಿದ್ದರು.

43 ವರ್ಷಗಳ ವಿಶಿಷ್ಟ ಮಿಲಿಟರಿ ಸೇವೆ ಬಳಿಕ ಡಿಸೆಂಬರ್ 31, 2002 ರಂದು ನಿವೃತ್ತರಾದರು.

Tags:    

Similar News