ದೆಹಲಿಯಲ್ಲಿ ಇಂದು ರೈತರ 'ಮಹಾ ಪಂಚಾಯತ್' ಸಭೆ

ದೆಹಲಿಯ ರಾಮಲೀಲಾ ಮೈದಾನದಲ್ಲಿ ಗುರುವಾರ (ಮಾರ್ಚ್ 14)ರಂದು ಕಿಸಾನ್ ಮಜ್ದೂರ್ ಮಹಾ ಪಂಚಾಯತ್' ನಡೆಸಲು ದೆಹಲಿ ಪೊಲೀಸರಿಂದ ರೈತರಿಗೆ ಅನುಮತಿ ದೊರಕಿದೆ.;

Update: 2024-03-14 08:06 GMT
ರಾಮಲೀಲಾ ಮೈದಾನದಲ್ಲಿ ‘ಕಿಸಾನ್ ಮಜ್ದೂರ್ ಮಹಾಪಂಚಾಯತ್’ ಸಭೆ ಇಂದು ನಡೆಯಲಿದೆ.
Click the Play button to listen to article

ಹೊಸದಿಲ್ಲಿ: ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಕಿಸಾನ್ ಮಜ್ದೂರ್ ಮಹಾಪಂಚಾಯತ್’ ನಡೆಸಲು ದೆಹಲಿ ಪೊಲೀಸರು ರೈತರಿಗೆ ಅನುಮತಿ ನೀಡಿದ್ದಾರೆ. ರೈತರಿಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಟ್ರ್ಯಾಕ್ಟರ್ ಟ್ರಾಲಿಗಳು ಇರಬಾರದು, ಮೆರವಣಿಗೆ ಮಾಡಬಾರದು ಮತ್ತು ಪ್ರತಿಭಟನಾಕಾರರ ಸಂಖ್ಯೆ 5,000 ಮೀರಬಾರದು ಎಂದು ಪೊಲೀಸರು ಸೂಚಿಸಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರೈತರ ಪ್ರತಿಭಟನೆ ನೇತೃತ್ವ ವಹಿಸಲಿದೆ. ಇದು ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧ 2020-21 ರೈತರ ಪ್ರತಿಭಟನೆಯ ಮುಂದುವರಿದ ಭಾಗವಾಗಿದೆ. ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಕಾರ್ಯತಂತ್ರ ರೂಪಿಸುವುದು ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಭವಿಷ್ಯದ ಕ್ರಮಗಳನ್ನು ಪ್ರಕಟಿಸುವ ‘ಸಂಕಲ್ಪ ಪತ್ರ’ ಎಂಬ ನಿರ್ಣಯ ಅಂಗೀಕರಿಸಲಾಗುವುದು ಎಂದು ಎಸ್‌ಕೆಎಂ ಹೇಳಿದೆ.

ಮಧ್ಯಾಹ್ನ 2.30 ರವರೆಗೆ ಅನುಮತಿ

ರೈತರಿಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಸಭೆಯನ್ನು ನಿಗದಿಪಡಿಸಲಾಗಿದೆ. ಸಭೆಗೆ ಯಾವುದೇ ಆಯುಧ, ಟ್ರ್ಯಾಕ್ಟರ್‌, ಮರಣಿಗೆಯನ್ನು ಮಾಡಬಾರದು ಎಂಬ ಷರತ್ತಿಗೆ ರೈತರು ದೆಹಲಿಯಲ್ಲಿ ಯಾವುದೇ ಮೆರವಣಿಗೆ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಉಪ ಪೊಲೀಸ್ ಕಮಿಷನರ್ (ಕೇಂದ್ರ) ಎಂ ಹರ್ಷ ವರ್ಧನ್ ತಿಳಿಸಿದ್ದಾರೆ.

ಸಂಚಾರ ದಟ್ಟಣೆ

ಗುರುವಾರ ರಾಮಲೀಲಾ ಮೈದಾನದಲ್ಲಿ ರೈತರು ಸೇರುವುದರಿಂದ ದೆಹಲಿಯ ವಿವಿಧ ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಜವಾಹರಲಾಲ್ ನೆಹರು ಮಾರ್ಗ, ಬಾರಾಖಂಬಾ ರಸ್ತೆ, ಬಹದ್ದೂರ್‌ಶಾ ಜಾಫರ್ ಮಾರ್ಗ, ಟಾಲ್‌ಸ್ಟಾಯ್ ಮಾರ್ಗ, ಅಸಫ್ ಅಲಿ ರಸ್ತೆ, ಜೈ ಸಿಂಗ್ ರಸ್ತೆ, ಸ್ವಾಮಿ ವಿವೇಕಾನಂದ ಮಾರ್ಗ, ಸಂಸದ್ ಮಾರ್ಗ, ನೇತಾಜಿ ಸುಭಾಷ್ ಮಾರ್ಗ, ಬಾಬಾ ಖರಗ್ ಸಿಂಗ್ ಮಾರ್ಗ, ಮಿಂಟೋ ರಸ್ತೆ, ಅಶೋಕ ರಸ್ತೆ, ಮಹಾರಾಜ ರಂಜೀತ್ ಸಿಂಗ್ ಮೇಲ್ಸೇತುವೆ, ಕನ್ನಾಟ್ ಸರ್ಕಸ್, ಭವಭೂತಿ ಮಾರ್ಗ, ಡಿಡಿಯು ಮಾರ್ಗ ಮತ್ತು ಚಮನ್ ಲಾಲ್ ಮಾರ್ಗ ದೆಹಲಿಯಲ್ಲಿ ರೈತರ ಜಮಾವಣೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ ಎಂದು ದೆಹಲಿ ಟ್ರಾಫಿಕ್ ಪೊಲೀಸ್ ಹೇಳಿಕೆ ನೀಡಿದೆ.

ದಿಲ್ಲಿಯ ಮೂರು ಗಡಿಗಳಾದ ಸಿಂಘು, ಟಿಕ್ರಿ ಮತ್ತು ಗಾಜಿಪುರದಲ್ಲಿ ಅರೆಸೇನಾ ಪಡೆ ನಿಯೋಜನೆ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದಲೂ ನೂರಾರು ರೈತರು ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Tags:    

Similar News