EY India employee's death| ತನಿಖೆಗೆ ಸರ್ಕಾರ ಆದೇಶ

ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅವರ ತಾಯಿ ಕಂಪನಿಗೆ ಬರೆದಿರುವ ಬಹಿರಂಗ ಪತ್ರವನ್ನು ದೂರು ಎಂದು ಪರಿಗಣಿಸಿ, ತನಿಖೆ ನಡೆಸುವುದಾಗಿ ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.

Update: 2024-09-19 11:52 GMT

ಅರ್ನ್ಸ್ಟ್ ಅಂಡ್ ಯೂಂಗ್ (ಇವೈ) ಇಂಡಿಯಾ ಕಚೇರಿಯಲ್ಲಿ ಹೊಸದಾಗಿ ನೇಮಕಗೊಂಡ ಮಹಿಳಾ ಉದ್ಯೋಗಿಯೊಬ್ಬರು ಅವಿರತ ಕೆಲಸದಿಂದ ಮೃತಪಟ್ಟ ರೀತಿಗೆ ವ್ಯಾಪಕ ಆಕ್ರೋಶದ ನಡುವೆಯೇ ತನಿಖೆಗೆ ಆದೇಶಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ದಿವಂಗತ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅವರ ತಾಯಿ ಕಂಪನಿಗೆ ಬರೆದಿರುವ ಬಹಿರಂಗ ಪತ್ರವನ್ನು ದೂರು ಎಂದು ಪರಿಗಣಿಸಿ, ಜುಲೈ 20 ರ ಸಾವಿಗೆ ಕಾರಣಗಳ ಬಗ್ಗೆ ತನಿಖೆ ನಡೆಸುವುದಾಗಿ ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ. 

ಸಚಿವೆ ಹೇಳಿದ್ದೇನು?: ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅವರ ಸಾವಿನಿಂದ ತೀವ್ರ ದುಃಖವಾಗಿದೆ. ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತಾವರಣದ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ,ʼ ಎಂದು ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಎಕ್ಸ್‌ನಲ್ಲಿ ತಿಳಿಸಿದ್ದಾರೆ. 

ʻನ್ಯಾಯ ನೀಡಲು ಬದ್ಧರಾಗಿದ್ದೇವೆ ಮತ್ತು ಕಾರ್ಮಿಕ ಸಚಿವಾಲಯ ದೂರು ತೆಗೆದುಕೊಂಡಿದೆʼ ಎಂದು ಸಚಿವೆ ಹೇಳಿದರು. ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅವರು, ಅನ್ನಾ ಅವರ ಸಾವು ದುಃಖಕರ; ಅನೇಕ ರೀತಿಗಳಲ್ಲಿ ಆತಂಕಕರ ಎಂದು ಹೇಳಿದ್ದಾರೆ. 

ಅರ್ನ್ಸ್ಟ್ ಆಂಡ್‌ ಯೂಂಗ್ ಇಂಡಿಯಾದಲ್ಲಿ ಕೆಲಸದ ವಾತಾವರಣದ ಬಗ್ಗೆ ಆಕೆಯ ಕುಟುಂಬದ ಆರೋಪದ ಬಗ್ಗೆ ತನಿಖೆ ನಡೆಸಬೇಕೆಂದು ರಾಜೀವ್‌ ಕೋರಿದ್ದರು. ಕಂಪನಿ ಅಧ್ಯಕ್ಷ ರಾಜೀವ್ ಮೆಮಾನಿ ಅವರಿಗೆ ಅನ್ನಾಅವರ ತಾಯಿ ಬರೆದ ಪತ್ರಕ್ಕೆ ಕಂಪನಿ ಆರಂಭದಲ್ಲಿ ಪ್ರತಿಕ್ರಿಯಿಸಿಲ್ಲ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿ ಬಹುರಾಷ್ಟ್ರೀಯ ಕಂಪನಿಗಳ ಕೆಲಸದ ಸಂಸ್ಕೃತಿ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಯಿತು. 

ಕಂಪನಿ ಹೇಳಿದ್ದೇನು?: ಯುವತಿ ಮರಣ ಹೊಂದಿದ ವಾರಗಳ ನಂತರ ಮತ್ತು ಜಾಗತಿಕವಾಗಿ ಟೀಕೆಗೆ ಒಳಗಾದ ಬಳಿಕ ಕುಟುಂಬದ ಕಳವಳವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಕಂಪನಿ ಹೇಳಿತು.

ಹೇಳಿಕೆಯಲ್ಲಿ,ʼಕುಟುಂಬದ ನಷ್ಟವನ್ನು ಯಾವುದೇ ಕ್ರಮದಿಂದ ಸರಿದೂಗಿಸಲು ಸಾಧ್ಯವಿಲ್ಲ.ಇಂಥ ಸಂಕಷ್ಟದ ಸಮಯದಲ್ಲಿ ಎಲ್ಲಾ ಸಹಾಯ ಒದಗಿಸಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ. ಅನ್ನಾ ಸೆಬಾಸ್ಟಿಯನ್ ಅವರ ದುರಂತಮಯ ಮತ್ತು ಅಕಾಲಿಕ ಮರಣದಿಂದ ನಾವು ತೀವ್ರ ದುಃಖಿತರಾಗಿದ್ದೇವೆ.ಅವರ ಕುಟುಂಬಕ್ಕೆ ನಮ್ಮ ಸಂತಾಪ ಸಲ್ಲಿಸುತ್ತೇವೆ .ಅವರ ಭರವಸೆಯ ವೃತ್ತಿಜೀವನ ದುರಂತ ರೀತಿಯಲ್ಲಿ ಮೊಟಕುಗೊಂಡಿರುವುದರಿಂದ ನಮಗೆಲ್ಲರಿಗೂ ತುಂಬಲಾರದ ನಷ್ಟವಾಗಿದೆ,ʼ ಎಂದು ಹೇಳಿಕೆಯಲ್ಲಿ ತಿಳಿಸಿದೆ. 

ಅನುಕೂಲಕರ ಕೆಲಸದ ವಾತಾವರಣವನ್ನು ಸೃಷ್ಟಿಸುವ ಬದಲಾವಣೆಗಳ ಬಗ್ಗೆ ಸುಳಿವು ನೀಡಿ, ʻಕುಟುಂಬದ ಪತ್ರವ್ಯವಹಾರವನ್ನು ಗಂಭೀರ ಮತ್ತು ನಮ್ರತೆಯಿಂದ ತೆಗೆದುಕೊಳ್ಳುತ್ತಿದ್ದೇವೆ. ಎಲ್ಲಾ ಉದ್ಯೋಗಿಗಳ ಯೋಗಕ್ಷೇಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ ಮತ್ತು ಭಾರತದಲ್ಲಿನ ಇವೈ ಸದಸ್ಯ ಸಂಸ್ಥೆಗಳಾದ್ಯಂತ ನಮ್ಮ 1,00,000 ಉದ್ಯೋಗಿಗಳಿಗೆ ಆರೋಗ್ಯಕರ ಕೆಲಸದ ಸ್ಥಳ ಒದಗಿಸಲು ಪ್ರಯತ್ನಿಸುತ್ತೇವೆ,ʼ ಎಂದಿದೆ.

Tags:    

Similar News