"ಭಾರತದ ಆರ್ಥಿಕತೆ ಸತ್ತಿದೆ" ಎಂಬ ಟ್ರಂಪ್ ಹೇಳಿಕೆಗೆ ಮಾಜಿ ಪ್ರಧಾನಿ ದೇವೇಗೌಡರ ತೀವ್ರ ಖಂಡನೆ

ಭಾರತದಲ್ಲಿ ಒಬ್ಬ ಸಣ್ಣ ವ್ಯಾಪಾರಿ ಮತ್ತು ಬಡ ರೈತ ಕೂಡ ತನ್ನ ವ್ಯವಹಾರವನ್ನು ಬಹಳ ಘನತೆ, ಸಮಗ್ರತೆ ಮತ್ತು ಮಾನವೀಯತೆಯಿಂದ ನಡೆಸುತ್ತಿದ್ದಾನೆ ಎಂದು ದೇವೇಗೌಡರು ಹೇಳಿದರು.;

Update: 2025-08-01 13:09 GMT

"ಭಾರತದ ಆರ್ಥಿಕತೆ ಸತ್ತಿದೆ" ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು ತೀವ್ರ ಆಕ್ರೋಶ ಮತ್ತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಅವರ ಹೇಳಿಕೆಯನ್ನು "ಆಧಾರರಹಿತ" ಎಂದು ಬಣ್ಣಿಸಿರುವ ಅವರು, "ಟ್ರಂಪ್ ಕುರುಡರಾಗಿರಬೇಕು ಅಥವಾ ಅಜ್ಞಾನಿ ಆಗಿರಬೇಕು" ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ.

ಈ ಕುರಿತು ವಿಸ್ತೃತ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ದೇವೇಗೌಡರು, ಟ್ರಂಪ್ ಅವರ ವರ್ತನೆ, ಭಾಷೆ ಮತ್ತು ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. "ಆಧುನಿಕ ಇತಿಹಾಸದಲ್ಲಿ ಇಷ್ಟೊಂದು ಅಸ್ಥಿರ, ಅನಾಗರಿಕ ಮತ್ತು ಬೇಜವಾಬ್ದಾರಿಯುತ ರಾಷ್ಟ್ರದ ಮುಖ್ಯಸ್ಥರನ್ನು ನಾನು ಕಂಡಿಲ್ಲ. ಟ್ರಂಪ್ ಅವರು ಕೇವಲ ಭಾರತದೊಂದಿಗೆ ಮಾತ್ರವಲ್ಲ, ತಮ್ಮ ದೀರ್ಘಕಾಲದ ಮಿತ್ರರಾಷ್ಟ್ರಗಳು ಸೇರಿದಂತೆ ಜಗತ್ತಿನಾದ್ಯಂತ ಪ್ರತೀ ದೇಶದೊಂದಿಗೂ ಕೆಟ್ಟದಾಗಿ ವರ್ತಿಸಿದ್ದಾರೆ. ಅವರಲ್ಲಿ ಮೂಲಭೂತವಾಗಿಯೇ ಏನೋ ಸಮಸ್ಯೆ ಇದೆ," ಎಂದು ದೇವೇಗೌಡರು ಕಟುವಾಗಿ ನುಡಿದಿದ್ದಾರೆ.

ಭಾರತದ ಘನತೆಯನ್ನು ಎತ್ತಿ ಹಿಡಿದ ಅವರು, "ಭಾರತದಲ್ಲಿ ಒಬ್ಬ ಸಣ್ಣ ವ್ಯಾಪಾರಿ ಮತ್ತು ಬಡ ರೈತ ಕೂಡ ತನ್ನ ವ್ಯವಹಾರವನ್ನು ಬಹಳ ಘನತೆ, ಸಮಗ್ರತೆ ಮತ್ತು ಮಾನವೀಯತೆಯಿಂದ ನಡೆಸುತ್ತಿದ್ದಾನೆ. ಈ ಮೂಲಕ ಅವರು ಟ್ರಂಪ್ ಅವರಿಗೆ ಅನೇಕ ಪಾಠಗಳನ್ನು ಕಲಿಸಬಹುದು ಎಂದು ನಾನು ಬಲವಾಗಿ ನಂಬಿದ್ದೇನೆ," ಎಂದು ಹೇಳಿದ್ದಾರೆ.

ಹಿತಾಸಕ್ತಿಯಲ್ಲಿ ರಾಜಿಯಿಲ್ಲ

ಭಾರತದ ಸಾರ್ವಭೌಮತೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೇವೇಗೌಡರು, "ಭಾರತವು ವೈವಿಧ್ಯಮಯ ಮತ್ತು ಪ್ರಜಾಪ್ರಭುತ್ವವಾದಿ ರಾಷ್ಟ್ರ. ಸ್ವಾತಂತ್ರ್ಯದ ನಂತರ ತನ್ನ ಹಾದಿಯಲ್ಲಿ ಎದುರಾದ ಎಲ್ಲಾ ತೊಂದರೆಗಳನ್ನು ಮಾತುಕತೆಯ ಮೂಲಕವೇ ಪರಿಹರಿಸಿಕೊಂಡು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂಬ ಬಗ್ಗೆ ನನಗೆ ಅತೀವ ಸಂತೋಷ ಮತ್ತು ಹೆಮ್ಮೆ ಇದೆ. ಟ್ರಂಪ್ ಅವರ ಬೆದರಿಕೆಗಳಿಗೆ ಭಾರತ ಹೆದರುವುದಿಲ್ಲ ಮತ್ತು ಅಂತಹ ಬೆದರಿಕೆಗಳಿಗೆ ಮಣಿದು ಇನ್ನೊಬ್ಬರ ತಾಳಕ್ಕೆ ತಕ್ಕಂತೆ ನಡೆಯುವುದಿಲ್ಲ ಎಂಬುದನ್ನು ಈಗಾಗಲೇ ಜಗತ್ತಿಗೆ ತೋರಿಸಿಕೊಟ್ಟಿದೆ," ಎಂದರು.

ಇದೇ ವೇಳೆ, ಟ್ರಂಪ್ ಅವರ ಹೇಳಿಕೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ದೇಶದ ವಿರೋಧ ಪಕ್ಷಗಳ ವಿರುದ್ಧವೂ ದೇವೇಗೌಡರು ಚಾಟಿ ಬೀಸಿದ್ದಾರೆ. "ಭಾರತವು ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿರುವ ಮತ್ತು ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇಂತಹ ನಮ್ಮ ಆರ್ಥಿಕತೆಯನ್ನು 'ಸತ್ತಿದೆ' ಎಂದು ಹೇಳುವ ಟ್ರಂಪ್ ಅವರ ಹೇಳಿಕೆಗಳನ್ನು ಆನಂದಿಸಿ, ಭಾರತದಲ್ಲಿ ಅವರ ಭ್ರಮೆಯ ವಕ್ತಾರರಾಗಲು ಹೊರಟಿರುವ ವಿರೋಧ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಬಯಸುತ್ತೇನೆ. ಅವರ ಹತಾಶೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಅವರು ತಮ್ಮನ್ನು ಮತ್ತು ತಮ್ಮ ಪಕ್ಷಗಳನ್ನು ಹಾನಿ ಮಾಡಿಕೊಳ್ಳಬಾರದು ಮತ್ತು ಟ್ರಂಪ್ ಅವರೊಂದಿಗೆ ಇತಿಹಾಸದ ಕಸದಬುಟ್ಟಿಗೆ ಬಹುಬೇಗನೆ ಸೇರಬಾರದು," ಎಂದು ಅವರು ಎಚ್ಚರಿಸಿದ್ದಾರೆ.

Tags:    

Similar News