ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ಸಚಿವ ಕೈಲಾಶ್ ಗೆಹ್ಲೋಟ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಕರೆದಿದೆ.
ನಜಾಫ್‌ಗಢದ ಆಮ್ ಆದ್ಮಿ ಪಕ್ಷ (ಎಎಪಿ)ದ ಶಾಸಕ ಗೆಹ್ಲೋಟ್ ಅವರು ಸಾರಿಗೆ, ಗೃಹ ಮತ್ತು ಕಾನೂನು ಸಚಿವ. ಇಡಿಯ ದೋಷಾರೋಪ ಪಟ್ಟಿಯಲ್ಲಿ ಗೆಹ್ಲೋಟ್ ಅವರ ಹೆಸರಿದೆ. ಅವರು 2021-22ರ ಅಬಕಾರಿ ಯೋಜನೆಯ ತಯಾರಿ ಮತ್ತು ಅನುಷ್ಠಾನದ ಕುರಿತ ಮಂತ್ರಿಗಳ ಗುಂಪಿನ (ಜಿಒಎಂ) ಭಾಗವಾಗಿರುವುದರಿಂದ, ನೀತಿ ರಚನೆಗೆ ಸಂಬಂಧಿಸಿದಂತೆ ಅವರನ್ನು ಪ್ರಶ್ನಿಸುವ ನಿರೀಕ್ಷೆಯಿದೆ.
ವಿಚಾರಣೆಗೆ ಹಾಜರಾಗಲು ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ(ಪಿಎಂಎಲ್‌ಎ) ಅಡಿಯಲ್ಲಿ ಹೇಳಿಕೆ ನೀಡಲು ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಜ್ರಿವಾಲ್ ನಿರಾಕರಣೆ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಎಎಪಿ ನಾಯಕರು ಪದೇಪದೆ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಎಎಪಿ ಭ್ರಷ್ಟ ಪಕ್ಷ ಎಂಬ ಅಭಿಪ್ರಾಯ ಮೂಡಿಸಲು ಮೋದಿ ಸರ್ಕಾರ ಇಡಿಯನ್ನು ಬಳಸಿಕೊಂಡು ಪ್ರಕರಣವನ್ನುಸೃಷ್ಟಿಸಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಎಎಪಿ ಆರೋಪ: ಎಎಪಿ ಮುಖಂಡರಾದ ಮಾಜಿ ಸಚಿವ ಮನೀಶ್ ಸಿಸೋಡಿಯಾ ಮತ್ತು ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಅವರನ್ನು ಈ ಹಿಂದೆಯೇ ಇಡಿ ಬಂಧಿಸಿದ್ದು,ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿರುವ ಮದ್ಯದ ವ್ಯಾಪಾರಿಗಳು ಚುನಾವಣೆ ಬಾಂಡ್‌ಗಳ ಮೂಲಕ ಬಿಜೆಪಿಗೆ ಹಣ ಪಾವತಿಸಿದ್ದಾರೆ ಎಂದು ಎಎಪಿ ದೂರಿದೆ.