ಕೇಜ್ರಿವಾಲ್ ಮನವಿಗೆ ಪ್ರತಿಕ್ರಿಯಿಸಲು ಸಮಯ ಕೇಳಿದ ಇಡಿ

‘ವಿಳಂಬ ತಂತ್ರ’ ಎಂದ ಸಿಎಂ

Update: 2024-03-27 08:46 GMT

ಮಾ.27-ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ ಮನವಿಗೆ ಉತ್ತರ ನೀಡಲು ಸಮಯ ಕೊಡಬೇಕೆಂದು ಜಾರಿ ನಿರ್ದೇಶನಾಲಯ ಬುಧವಾರ (ಮಾರ್ಚ್ 27) ದೆಹಲಿ ಹೈಕೋರ್ಟ್‌ನ್ನು ಕೇಳಿದೆ. 

ಏಜೆನ್ಸಿ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌.ವಿ. ರಾಜು, ʻಕೇಜ್ರಿವಾಲ್‌ ವಿರುದ್ಧ ʻಬೃಹತ್ʼ ಅರ್ಜಿʼಯನ್ನು ಮಂಗಳ ವಾರ ಸಲ್ಲಿಸಲಾಗಿದೆ. ನಮ್ಮ ನಿಲುವನ್ನು ದಾಖಲಿಸಲು ಮೂರು ವಾರ ಕಾಲಾವಕಾಶ ನೀಡಬೇಕು. ಮಧ್ಯಂತರ ಪರಿಹಾರಕ್ಕೆ ಕೂಡ ಪ್ರತಿಕ್ರಿಯಿಸಲು ಸೂಕ್ತ ಸಮಯಾವಕಾಶ ನೀಡಬೇಕುʼ ಎಂದು ಹೇಳಿದರು.

ಎಎಪಿ ನಾಯಕನ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ʻಪ್ರತಿಕ್ರಿಯೆ ಸಲ್ಲಿಸಲು ಕೋರಿರುವುದು ವಿಳಂಬ ತಂತ್ರʼ ಎಂದು ಆರೋಪಿಸಿದರು. ʻಬಂಧನಕ್ಕೆ ಆಧಾರವೇನು ಎನ್ನುವುದು ಪ್ರಮುಖ ಪ್ರಶ್ನೆ. ಹಲವು ವಿಧದ ಉಲ್ಲಂಘನೆಗಳು ನಡೆದಿದ್ದು, ಹೈಕೋರ್ಟ್‌ನಿಂದ ತಕ್ಷಣದ ನಿರ್ಧಾರ ಅಗತ್ಯವಿದೆʼ ಎಂದು ಅವರು ಹೇಳಿದ್ದಾರೆ. 

ರಿಮ್ಯಾಂಡ್ ನ ಪ್ರಶ್ನೆ: ಗುರುವಾರ (ಮಾರ್ಚ್ 28) ಕೊನೆಗೊಳ್ಳುವ ಬಂಧನವನ್ನು ಪ್ರಶ್ನಿಸಿದ್ದೇನೆ ಎಂದು ಸಿಂಘ್ವಿ ಹೇಳಿದರು. ʻಬಂಧನಕ್ಕೆ  ಆಧಾರವೇನು ಎಂಬುದನ್ನು ನಿಮ್ಮ ಬಳಿಕ ಕೇಳುತ್ತಿದ್ದೇನೆ. ಈ ವಿಷಯದ ವಿಚಾರಣೆ ಅಗತ್ಯವಿದೆ. ಅದಕ್ಕೆ ಅನುಮತಿಸುವುದು ಅಥವಾ ನಿರಾಕರಿಸುವುದು ನ್ಯಾಯಮೂರ್ತಿಗಳ ಹಕ್ಕುʼ ಎಂದು ಸಿಂಘ್ವಿ ಹೇಳಿದರು. ʻಬಂಧನ ತಮ್ಮ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ. ಅಪರಾಧವನ್ನು ಸಾಬೀತುಪಡಿಸಲು ಇಡಿ ವಿಫಲವಾಗಿದೆ ಎಂದು ಕೇಜ್ರಿವಾಲ್ ಅರ್ಜಿಯಲ್ಲಿ ಹೇಳಿದ್ದಾರೆ. ಅವರನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡಬೇಕು ಹಾಗೂ ರಿಮ್ಯಾಂಡ್‌ ರದ್ದುಗೊಳಿಸಬೇಕುʼ ಎಂದು ಒತ್ತಾಯಿಸಿದರು. 

ಪೂರಕ ಪಟ್ಟಿಯನ್ನು ಪೂರ್ಣಗೊಳಿಸಿದ ನಂತರ ವಿಷಯ ಕೈಗೆತ್ತಿಕೊಳ್ಳುವುದಾಗಿ ನ್ಯಾ.ಸ್ವರ್ಣ ಕಾಂತ ಶರ್ಮಾ ಹೇಳಿದರು.

ಕೇಜ್ರಿವಾಲ್‌ ಅವರನ್ನು ಮಾ.21 ರಂದು ಬಂಧಿಸಿದ್ದು, ದೆಹಲಿ ನ್ಯಾಯಾಲಯ ಮಾರ್ಚ್ 28 ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿದೆ. 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ನಡೆದಿದೆ ಎನ್ನುವುದು ಆರೋಪ. ಈ ಅಬಕಾರಿ ನೀತಿಯನ್ನು ಆನಂತರ ರದ್ದುಗೊಳಿಸಲಾಯಿತು.

Tags:    

Similar News