ವಂಶಪಾರಂಪರ್ಯ ಒಲ್ಲದ ನಿತೀಶ್ ಸಂದಿಗ್ದತೆ: ನಿಶಾಂತ್ ಸಾರಥ್ಯಕ್ಕೆ ಹೆಚ್ಚುತ್ತಿದೆ ಒತ್ತಡ
ಕುಟುಂಬ ರಾಜಕಾರಣ ವಿರೋಧಿಸಿದವರು ಬಿಹಾರ ಸಿಎಂ ನಿತೀಶ್ ಕುಮಾರ್. ಅವರ ಪಕ್ಷಕ್ಕೆ ಈ ಬಾರಿ ಕಠಿಣ ಸವಾಲಿದೆ. ಅವರಿಗೆ ಹೆಗಲು ಕೊಡಲು ನಿತೀಶ್ ಪುತ್ರ ನಿಶಾಂತ್ ಬೇಕೆನ್ನುವ ಅಭಿಪ್ರಾಯವಿದೆ.;
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಕಡು ರಾಜಕೀಯ ಪ್ರತಿಸ್ಪರ್ಧಿ ಹಾಗೂ ಕೆಲವೊಮ್ಮೆ ಕಟ್ಟಾ ಸ್ನೇಹಿತರೂ ಆಗಿರುವ ಲಾಲು ಪ್ರಸಾದ್ ಯಾದವ್ ಅವರಿಗಿಂತ ಸಂಪೂರ್ಣ ಭಿನ್ನವೆಂದು ದಶಕಗಳಿಂದಲೂ ಬಿಂಬಿಸಿಕೊಂಡು ಬಂದವರು. ಅವರು ತಮ್ಮ ಜನತಾ ದಳ ಸಂಯುಕ್ತ (ಜೆಡಿಯು)ದಲ್ಲಿ ಕುಟುಂಬ ರಾಜಕಾರಣವನ್ನು ವಿರೋಧಿಸಿದವರು.
ಲಾಲು ಪ್ರಸಾದ್ ಯಾದವ್ ಅವರು ತಮ್ಮ ರಾಷ್ಟ್ರೀಯ ಜನತಾ ದಳ (ಆರ್ಜೆಡಿ)ವನ್ನು ಒಂದೇ ಕುಟುಂಬದ ಆಡುಂಬೋಲವಾಗಿ ಪರಿವರ್ತಿಸಿದವರು. ತಮ್ಮ ಪತ್ನಿ ರಾಬ್ರಿದೇವಿ ಅವರಿಂದ ಆರಂಭಿಸಿ, ನಂತರದ ವರ್ಷಗಳಲ್ಲಿ ಮಕ್ಕಳಾದ ಮಿಸಾ ಭಾರತಿ, ತೇಜ್ ಪ್ರತಾಪ್ (ಈಗ ಪ್ರತ್ಯೇಕವಾಗಿದ್ದಾರೆ), ತೇಜಸ್ವಿ ಮತ್ತು ರೋಹಿಣಿ ಆಚಾರ್ಯ ಅವರನ್ನು ಸಕ್ರಿಯ ರಾಜಕಾರಣಕ್ಕೆ ತಂದವರು. ಆದರೆ ನಿತೀಶ್ ಅದಕ್ಕೆ ಭಿನ್ನ. ಅವರ ಪಕ್ಷ ಜೆಡಿಯುವನ್ನು ಮುನ್ನಡೆಸಿದ ಶರದ್ ಯಾದವ್ ಮತ್ತು ಜಾರ್ಜ್ ಫೆರ್ನಾಂಡಿಸ್ (ಈಗ ಇಬ್ಬರೂ ನಿಧನರಾಗಿದ್ದಾರೆ) ಕೂಡ ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಸನಿಹಕ್ಕೆ ಸುಳಿಯಬಿಟ್ಟವರಲ್ಲ.
ನಿತೀಶ್ ಮುಂದಿರುವ ಆಯ್ಕೆಗಳು
ಆದರೆ ಈಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಕಳೆದ ಎರಡು ದಶಕಗಳ ಅವಧಿಯಲ್ಲಿಯೇ ಅತ್ಯಂತ ಸವಾಲಿನ ಚುನಾವಣಾ ಪರೀಕ್ಷೆಗೆ ಮುಖಾಮುಖಿಯಾಗುತ್ತಿರುವ ನಿತೀಶ್ ಅವರ ಆರೋಗ್ಯದ ಬಗ್ಗೆಯೂ ಸಾರ್ವಜನಿಕವಾಗಿ ಚರ್ಚೆಗಳು ನಡೆಯುತ್ತಿವೆ. ಜೆಡಿಯು ಮತದಾರರ ನೆಲೆಗಳ ಮೇಲೆ ಎದುರಾಳಿಗಳು ಮಾತ್ರವಲ್ಲದೆ ಅದರ ಮಿತ್ರಪಕ್ಷಗಳೂ ಕಣ್ಣಿಟ್ಟಿವೆ ಎನ್ನುವುದು ಸುಳ್ಳಲ್ಲ. ಇಂತಹ ಕಾಲಘಟ್ಟದಲ್ಲಿ ರಾಜಕೀಯ ದಾಳಗಳನ್ನು ಸುಲಭವಾಗಿ ಚಲಾಯಿಸುವಲ್ಲಿ ನಿಷ್ಣಾತರಾಗಿರುವ ನಿತೀಶ್ ಕುಮಾರ್ ಒಂದು ಆಯ್ಕೆಯನ್ನು ಮಾಡಿಕೊಳ್ಳಬೇಕಾದ ಅನಿರ್ವಾಯತೆ ಸೃಷ್ಟಿಸಿದೆ.
ತಮ್ಮ ಪಕ್ಷದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು, ಚುನಾವಣೆಗೆ ಸಿದ್ಧವಾಗಿರುವ ಬಿಹಾರದ ಕಠಿಣ ರಾಜಕೀಯ ಪರಿಸ್ಥಿತಿಯಲ್ಲಿ ತಮ್ಮ ಮಗ ನಿಶಾಂತ್ ಕುಮಾರ್ ಅವರನ್ನು ಎಷ್ಟರಮಟ್ಟಿಗೆ ತೊಡಗಿಸಿಕೊಳ್ಳಬೇಕು?
ಈ ಪ್ರಶ್ನೆಯು ನಿತೀಶ್ ಅವರನ್ನು ಕೆಲಕಾಲದಿಂದ ಗೊಂದಲಕ್ಕೆ ಸಿಲುಕಿಸಿರುವುದು ಸ್ಪಷ್ಟ. ಈಗ ಕೇವಲ ಪ್ರಚಾರಕನ ಪಾತ್ರ ನಿರ್ವಹಿಸುತ್ತಿರುವ ನಿಶಾಂತ್ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂಬುದು ಪಕ್ಷದ ಒಂದು ವಿಭಾಗದ ಒತ್ತಾಯವಾಗಿದೆ ಎಂದು ‘ಫೆಡರಲ್’ ಜೊತೆ ಮಾತನಾಡಿದ ಜೆಡಿಯು ಮೂಲಗಳು ತಿಳಿಸುತ್ತವೆ.
ಪಕ್ಷದ ಹಿರಿಯ ನಾಯಕರೊಬ್ಬರ ಅನಿಸಿಕೆ ಪ್ರಕಾರ ಬಿಹಾರ ಮುಖ್ಯಮಂತ್ರಿಗಳು ನಿಶಾಂತ್ ಅವರ ಚುನಾವಣಾ ಪ್ರವೇಶಕ್ಕೆ ದಾರಿಮಾಡಿಕೊಡಲು ಹಿಂಜರಿಯುತ್ತಿದ್ದಾರೆ. ಕಾರಣವಿಷ್ಟೇ; ಇಂತಹದೊಂದು ನಿರ್ಧಾರದಿಂದ ಲಾಲೂ ಅಥವಾ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರಂತೆ ನಿತೀಶ್ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡುವವರಲ್ಲ, ಬದಲಾಗಿ ಬಿಹಾರಕ್ಕೆ ಪ್ರಾಶಸ್ತ್ಯ ನೀಡುವವರು ಎಂಬ ಇಮೇಜ್ ಬೆಳೆಸಿಕೊಂಡವರು. ಅಂತಹ ಇಮೇಜ್ ಕಳೆದುಕೊಳ್ಳಲು ಅವರಿಗೆ ಇಷ್ಟವಿಲ್ಲ.
ನಾನಲ್ಲ, ಅಪ್ಪನೇ ನಾಯಕ ಎನ್ನುವ ಮಗ
ಸುಮಾರು ಎರಡು ವರ್ಷಗಳ ಹಿಂದೆ ಬಿಹಾರದ ರಾಜಕೀಯ ಆಖಾಡಕ್ಕೆ ಸದ್ದಿಲ್ಲದೇ ಎಂಟ್ರಿ ಕೊಟ್ಟವರು ನಿಶಾಂತ್. ತಮ್ಮ ತಂದೆಯ ಬದಲಿಗೆ ಜೆಡಿಯು ಪಕ್ಷದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಆಕಾಂಕ್ಷೆ ತಮಗಿಲ್ಲ ಎಂದು ಬಲು ಎಚ್ಚರಿಕೆಯಿಂದಲೇ ಹೇಳಿಕೆಗಳನ್ನು ನೀಡುತ್ತಿದ್ದರು.
ರಾಜ್ಯದ ಪ್ರಮುಖ ರಾಜಕೀಯ ಕುಟುಂಬಗಳನ್ನು ಪ್ರತಿನಿಧಿಸುವ ತೇಜ್ ಪ್ರತಾಪ್, ತೇಜಸ್ವಿ, ಮಿಸಾ, ರೋಹಿಣಿ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಅವರಂತೆ ತಾವು ಅಲ್ಲ ಎಂಬುದನ್ನು ಬಿಂಬಿಸುವ ಪ್ರಯತ್ನ ಮಾಡಿದವರು ನಿಶಾಂತ್ ಕುಮಾರ್. ಯಾವತ್ತೂ ಮಿತಭಾಷಿಯಾಗುವ ಮೂಲಕ ವಿನಮ್ರತೆಯನ್ನು ಪ್ರದರ್ಶಿಸಿದವರು.
ಬಂದೂಕು ಝಳಪಿಸುವ ಭದ್ರತಾ ಸಿಬ್ಬಂದಿ ಅಥವಾ ಪಕ್ಷದ ಹೊಗಳುಭಟರ ನಡುವೆ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಬಿಹಾರದ ಭವಿಷ್ಯದ ನಾಯಕ ಎಂದು ಇವರೆಲ್ಲರೂ ಪೈಪೋಟಿಗೆ ಇಳಿಯುತ್ತಿದ್ದರೆ ನಿಶಾಂತ್ ಯಾವತ್ತೂ ತಮ್ಮ ತಂದೆಯೇ ನಾಯಕ ಎಂದು ಸ್ಪಷ್ಟಪಡಿಸುತ್ತಿದ್ದರು. ‘ನಾನು ಇಲ್ಲಿರುವುದು ಅಪ್ಪನಿಗೆ ಸಹಾಯ ಮಾಡಲು ಮಾತ್ರ’ ಎಂದು ಸಮಜಾಯಿಸಿ ನೀಡುತ್ತಿದ್ದರು.
ಅಂಕಲ್ ಶಾ ಹೇಳಿದ ಮಾತು
ಮುಂಬರುವ ಚುನಾವಣೆಯಲ್ಲಿ ನಿತೀಶ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವಲ್ಲಿ ಬಿಹಾರದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್.ಡಿ.ಎ)ದ ಹಿರಿಯ ಪಾಲುದಾರ ಪಕ್ಷವಾದ ಬಿಜೆಪಿ ನಾಯಕರು ಯಾಕೆ ಹಿಂಜರಿಯುತ್ತಿದ್ದಾರೆ ಎಂಬ ಗುಸುಗುಸು ಕೆಲ ವಾರಗಳ ಹಿಂದೆ ಶುರುವಾಗಿತ್ತು. ಅದರ ನಡುವೆಯೇ, “ಎನ್.ಡಿ.ಎ ಪ್ರಚಾರದ ನೇತೃತ್ವವನ್ನು ಅಪ್ಪನೇ ವಹಿಸಲಿದ್ದಾರೆ ಎಂದು ಅಮಿತ್ ಅಂಕಲ್ (ಗೃಹ ಸಚಿವ ಅಮಿತ್ ಶಾ) ಸ್ಪಷ್ಟವಾಗಿ ಹೇಳಿದ್ದಾರೆ” ಎಂದು ನಿಶಾಂತ್ ತಿಳಿಸಿದ್ದರು.
ಆದಾಗ್ಯೂ, ನಿಶಾಂತ್ ಅವರ ಚುನಾವಣಾ ಪ್ರವೇಶಕ್ಕಾಗಿ ವಾದಿಸುತ್ತಿರುವ ಜೆಡಿ(ಯು) ನಾಯಕರು, ನಿತೀಶ್ ಅವರು ತಮ್ಮ ಮಗನನ್ನು ಪಕ್ಷದ ಪ್ರಚಾರದ ಮುಂಚೂಣಿಗೆ ತರುವ ಕಾಲ ಸನ್ನಿಹಿತವಾಗಿದೆ ಎಂದು ಹೇಳುತ್ತಿದ್ದಾರೆ. ಜೊತೆಗೆ, ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ನಾಯಕರು ತಮ್ಮ ಬೇಡಿಕೆಯನ್ನು ಸಮರ್ಥಿಸಿಕೊಳ್ಳಲು ಒಂದಲ್ಲ, ಹಲವು ಕಾರಣಗಳನ್ನು ನೀಡುತ್ತಿದ್ದಾರೆ ಕೂಡ.
ಮೊದಲನೆಯದಾಗಿ, ನಿತೀಶ್ ಅವರ ಆರೋಗ್ಯ ಸ್ಪಷ್ಟವಾಗಿ ಕುಸಿಯುತ್ತಿರುವುದು ಮತ್ತು ಸಾರ್ವಜನಿಕವಾಗಿ ಅವರ ಅಸಹಜ ನಡವಳಿಕೆ, ಈ ನಿರ್ಣಾಯಕ ಚುನಾವಣೆಗಳಲ್ಲಿ ತಮ್ಮ ಪ್ರಮುಖ ಮತ ಸೆಳೆಯುವ ನಾಯಕ ಎಷ್ಟು ಮಟ್ಟಿಗೆ ಪ್ರಚಾರ ಮಾಡಲು ಸಾಧ್ಯವಾಗುತ್ತದೆ ಎಂಬ ಆತಂಕವನ್ನು ಜೆಡಿ(ಯು) ನಾಯಕರಲ್ಲಿ ಮೂಡಿಸಿದೆ.
ನಿತೀಶ್ ಐಲುಪೈಲು ನಡವಳಿಕೆಯೇ ಸವಾಲು
ಈ ಬಾರಿ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದರೆ ಹತ್ತನೇ ಬಾರಿಗೆ ಆ ಸ್ಥಾನವನ್ನು ವಹಿಸಿಕೊಂಡ ದಾಖಲೆಯನ್ನು ನಿತೀಶ್ ಬರೆಯಲಿದ್ದಾರೆ. ಹಾಗೇನಾದರೂ ಆದರೆ ಅವರ ಊಹೆಗೂ ನಿಲುಕದ ಐಲುಪೈಲು ನಡವಳಿಕೆ ಮತ್ತು ಅವರ ಆಡಳಿತ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುವುದು ಸಹಜ.
ನಿತೀಶ್ ಅವರು ರಾಜ್ಯದಲ್ಲಿ ಮೈತ್ರಿಕೂಟದ ಅತ್ಯಂತ ವಿಶ್ವಾಸಾರ್ಹ ಚುನಾವಣಾ ಮುಖವಾಗಿದ್ದರೂ, ಅವರು ಮೈತ್ರಿಕೂಟದ ಪಾಲಿಗೆ ಆಸ್ತಿಯೂ ಹೌದು, ಬಾಧ್ಯತೆಯೂ ಹೌದು ಎಂದು ಬಿಜೆಪಿಯ ಆಂತರಿಕ ಮೂಲಗಳು ‘ಫೆಡರಲ್’ಗೆ ತಿಳಿಸಿವೆ.
ಜೆಡಿಯು ಪಕ್ಷದ ಒಂದು ಬಣಕ್ಕಿರುವ ಆತಂಕವೇನೆಂದರೆ ನಿತೀಶ್ ಅವರ ಸುತ್ತ ಇರುವ ಪಡೆ ಜೆಡಿಯುಗೆ ನಿಷ್ಠರಾಗಿರುವವರಲ್ಲ, ಬದಲಾಗಿ ಬಿಜೆಪಿಗೆ ನಿಷ್ಠರಾಗಿರುವವರು. ಹಾಗಾಗಿ ತಮ್ಮ ಆಸ್ಥಾನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರು ಅಸಮರ್ಥರಾಗಿದ್ದಾರೆ. ಹಾಗಾಗಿ ಇದು ಪಕ್ಷಕ್ಕೆ ಮತ್ತಷ್ಟು ನಷ್ಟ ಉಂಟುಮಾಡಿದೆ ಎನ್ನುತ್ತಾರೆ ಅವರು.
ಮುಂಬರುವ ಚುನಾವಣೆಗೆ ನಿತೀಶ್ ಕುಮಾರ್ ಅವರನ್ನು ಎನ್ಡಿಎಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಸ್ಪಷ್ಟವಾಗಿ ಘೋಷಿಸಲು ಹಿಂದೇಟು ಹಾಕುತ್ತಿರುವುದಕ್ಕೂ ಕಾರಣವಿದೆ ಎನ್ನುತ್ತಾರೆ ಮುಖ್ಯಮಂತ್ರಿಯ ನಿಕಟವರ್ತಿಯಾಗಿದ್ದರೂ ಈಗ ಪಕ್ಷದಲ್ಲಿ ಪ್ರಮುಖ ಸ್ಥಾನಮಾನ ಕಳೆದುಕೊಂಡಿರುವ ಒಬ್ಬ ನಾಯಕರು. ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್), ಲೋಕ ಜನಶಕ್ತಿ ಪಾರ್ಟಿ (ಆರ್ವಿ) ಮತ್ತು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ (ಸೆಕ್ಯುಲರ್) ಅಥವಾ ಎಚ್ಎಎಂ(ಎಸ್) ನಂತಹ ಸಣ್ಣ ಮಿತ್ರಪಕ್ಷಗಳು ಹೆಚ್ಚಿನ ಸೀಟುಗಳನ್ನು ಕೇಳುತ್ತಿರುವುದು ಚುನಾವಣೆಗೂ ಮುನ್ನ ಜೆಡಿ(ಯು) ಪಕ್ಷವನ್ನು ದುರ್ಬಲಗೊಳಿಸುವ ಒಂದು ಯೋಜನೆಯ ಭಾಗವಾಗಿದೆ. ಆದರೆ ಈ ಯಾವ ಬೆಳವಣಿಗೆಗಳೂ ಮುಖ್ಯಮಂತ್ರಿಯವರ ಅರಿವಿಗೆ ಬಂದಂತೆ ಕಾಣುತ್ತಿಲ್ಲ ಎನ್ನುತ್ತಾರೆ ಅವರು.
ನಿದ್ದೆಗೆಡಿಸುತ್ತಿರುವ ಚಿರಾಗ್ ಪಾಸ್ವಾನ್
ಪ್ರಸ್ತುತ ರಾಜ್ಯಸಭಾ ಸದಸ್ಯ ಸಂಜಯ್ ಕುಮಾರ್ ಝಾ ಮತ್ತು ರಾಜ್ಯ ಸಚಿವ ಅಶೋಕ್ ಚೌಧರಿ ಅವರಂತಹ ನಾಯಕರಿಗೆ ಪಕ್ಷದಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಹಳೆಯ ನಿತೀಶ್ ನಿಷ್ಠಾವಂತರಿಗೆ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ಹಾಲಿ ಮುಖ್ಯಮಂತ್ರಿಗೆ ಸಮರ್ಥ ಪರ್ಯಾಯವಾಗಿ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ನಡೆಸುತ್ತಿರುವ ಸ್ಪಷ್ಟ ಪ್ರಯತ್ನಗಳು ನಿದ್ದೆಗೆಡಿಸುವಂತೆ ಮಾಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಐದು ವರ್ಷಗಳ ಹಿಂದೆ, ಎಲ್‌ಜಿಪಿ(ಆರ್ವಿ) ನಾಯಕರು ಬಿಹಾರದಲ್ಲಿ ಎನ್‌ಡಿಎ ಜೊತೆಗಿನ ಸಂಬಂಧವನ್ನು ಕಡಿದುಕೊಂಡು ವಿಧಾನಸಭಾ ಚುನಾವಣೆಯಲ್ಲಿ 135ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನಿಲ್ಲಿಸುವ ನಿರ್ಧಾರ ಪ್ರಕಟಸಿದ್ದು ಜೆಡಿ(ಯು) ಪಕ್ಷದ ಸ್ಥಾನಗಳ ಸಂಖ್ಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. 2020ರ ವಿಧಾನಸಭಾ ಚುನಾವಣೆಯಲ್ಲಿ ಆಗಿನ ಲೋಕ ಜನಶಕ್ತಿ ಪಕ್ಷ ಕೇವಲ ಒಂದು ಸ್ಥಾನ ಗೆದ್ದಿದ್ದರೂ, ಅದರ ಅಭ್ಯರ್ಥಿಗಳು ಸುಮಾರು 40 ಸ್ಥಾನಗಳಲ್ಲಿ ಜೆಡಿ(ಯು) ಅಭ್ಯರ್ಥಿಗಳು ಸೋಲುವಂತೆ ನೋಡಿಕೊಂಡಿದ್ದರು ಎಂಬುದನ್ನು ಮರೆಯುವಂತಿಲ್ಲ.
ಈ ಬಾರಿ, ಚಿರಾಗ್ ರಾಜ್ಯ ರಾಜಕೀಯಕ್ಕೆ ಪ್ರವೇಶಿಸಿ ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಮಹತ್ವಾಕಾಂಕ್ಷೆಯನ್ನು ಈಗಾಗಲೇ ಬಹಿರಂಗಪಡಿಸಿದ್ದಾರೆ. ಆಡಳಿತ ಮೈತ್ರಿಕೂಟದ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅವರನ್ನು ನಿರಂತರವಾಗಿ ಬಿಂಬಿಸುತ್ತಿರುವ ಎಲ್ಜೆಪಿ (ಆರ್ವಿ) ನಾಯಕರಲ್ಲಿ ಅವರ ಪಕ್ಷದ ಸಂಸದೆ ಶಾಂಭವಿ ಚೌಧರಿ ಕೂಡ ಒಬ್ಬರು. ಶಾಂಭವಿ, ಸಚಿವ ಅಶೋಕ್ ಚೌಧರಿ ಅವರ ಮಗಳು ಮತ್ತು ನಿತೀಶ್ ಅವರ ಆಪ್ತ ಸಹಾಯಕರೂ ಆಗಿದ್ದಾರೆ.
ನಿಶಾಂತ್ಗೆ ಹೆಚ್ಚಿನ ರಾಜಕೀಯ ಮತ್ತು ಚುನಾವಣಾ ಜವಾಬ್ದಾರಿಗಳನ್ನು ವಹಿಸಬೇಕು ಎಂದು ಬಯಸುವ ಜೆಡಿ(ಯು) ನಾಯಕರು, ಇದರಿಂದ ಚಿರಾಗ್ ಅವರ ಪ್ರಚಾರದ ಬಲವನ್ನು ತಗ್ಗಿಸಿ ಪಕ್ಷವನ್ನು ಒಂದಾಗಿ ಇರಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.
ನಡೆದಿದೆಯೇ ಜೆಡಿಯು ‘ಖಾಲಿ’ ಮಾಡುವ ಹುನ್ನಾರ?
ಆ ಗುಂಪಿನ ಒಬ್ಬ ನಾಯಕರು 'ದಿ ಫೆಡರಲ್'ಗೆ ತಿಳಿಸಿದಂತೆ, ಚುನಾವಣೆಗೂ ಮೊದಲು ಚಿರಾಗ್ ಅವರ "ಸ್ವಯಂ ಪ್ರಚಾರ" ವನ್ನು ಬಿಜೆಪಿಯ ಕೇಂದ್ರ ನಾಯಕತ್ವವು ನಿರ್ದೇಶಿಸುತ್ತಿದೆ ಎಂದು ಜೆಡಿ(ಯು) ಪಕ್ಷದಲ್ಲಿನ ಅನೇಕರು ನಂಬಿದ್ದಾರೆ. ಜೆಡಿ(ಯು) ಪಕ್ಷದ ಕಳಪೆ ಪ್ರದರ್ಶನವು ನಿತೀಶ್ ಅವರ ಪಕ್ಷವನ್ನು ಕಾಲಾನಂತರದಲ್ಲಿ "ಖಾಲಿ" ಮಾಡುತ್ತದೆ ಎಂದು ಬಿಜೆಪಿ ನಂಬಿದೆ. ಇದರ ಫಲವಾಗಿ ಜೆಡಿ(ಯು) ನಾಯಕರು ಹೆಚ್ಚಿನ ಲಾಭಕ್ಕಾಗಿ ಬಿಜೆಪಿಗೆ ಸೇರಿಕೊಳ್ಳುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಈ ನಾಯಕರು ನಿತೀಶ್ ಕುಮಾರ್ ಮತ್ತು ಅವರ ಪಕ್ಷದ ಹಿತಾಸಕ್ತಿಗಳನ್ನು ರಕ್ಷಿಸಲು ಇರುವ ಏಕೈಕ ಮಾರ್ಗವೆಂದರೆ, ನಿಶಾಂತ್ ಅವರು ಜೆಡಿಯುನಲ್ಲಿ ಚುನಾವಣೆ ಮತ್ತು ಸಾಂಸ್ಥಿಕ ಎರಡೂ ಹಂತಗಳಲ್ಲಿ ಹೆಚ್ಚು ಸಕ್ರಿಯ ಪಾತ್ರ ವಹಿಸುವುದು ಎಂದು ನಂಬಿದ್ದಾರೆ.
ಈ ನಾಯಕರು ಮುಂದಿಡುವ ಇನ್ನೊಂದು ಪ್ರಸ್ತಾವವೆಂದರೆ, ನಿಶಾಂತ್ ಅವರ ಚುನಾವಣಾ ಪ್ರವೇಶಕ್ಕೆ ನಿತೀಶ್ ವಿರೋಧಿಸುವುದನ್ನು ಮುಂದುವರಿಸಿದರೆ, ಕನಿಷ್ಠಪಕ್ಷ ತಮ್ಮ ಮಗನನ್ನು ಪಕ್ಷದ ಉತ್ಸಾಹಿ ಸ್ಟಾರ್ ಪ್ರಚಾರಕರಾಗಿ ರೂಪಿಸಬೇಕು. ಚುನಾವಣೆಯ ನಂತರ "ಮೊದಲ ಲಭ್ಯವಿರುವ ಅವಕಾಶದಲ್ಲಿ" ಅವರನ್ನು ರಾಜ್ಯ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎಂಬುದು.
ಮುಂಬರುವ ಚುನಾವಣೆಗಳು ತೇಜಸ್ವಿ, ಚಿರಾಗ್ ಮತ್ತು ಪ್ರಶಾಂತ್ ಕಿಶೋರ್ ಅವರಂತಹ ಯುವ ಮತ್ತು ಮಹತ್ವಾಕಾಂಕ್ಷೆಯ ನಾಯಕರ ನಡುವಿನ ಜಿದ್ದಾಜಿದ್ದಿ ಹೋರಾಟವೂ ಆಗಲಿದೆ. ಜೆಡಿ(ಯು) ಮೂಲಗಳ ಪ್ರಕಾರ, ನಿತೀಶ್ ಅವರ ಉತ್ತಮ ಕಾರ್ಯವನ್ನು ಮುಂದುವರಿಸಲು ಯಾವುದೇ ಯುವ ನಾಯಕರಿಲ್ಲದೇ ಕ್ಷೀಣಿಸುತ್ತಿರುವ ಪಕ್ಷವಾಗಿ ತಮ್ಮ ಪಕ್ಷವನ್ನು ನೋಡಲು ಅವರು ಸಿದ್ಧರಿಲ್ಲ.