Narendra Modi | ಪ್ರಧಾನಿ ಮೋದಿಗೆ ಡೊಮಿನಿಕಾದಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಫೆಬ್ರವರಿ 2021ರಲ್ಲಿ, ಪ್ರಧಾನಿ ಮೋದಿ ಡೊಮಿನಿಕಾಗೆ 70,000 ಡೋಸ್ ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆ ಪೂರೈಸಿದ್ದರು. ಈ ಮಾನವೀಯ ಹಿನ್ನೆಲೆ ಹಾಗೂ ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿಗಾಗಿ ಮೋದಿ ಮಾಡಿದ ಪ್ರಯತ್ನಕ್ಕೆ ಪ್ರತಿಯಾಗಿ ಪುರಸ್ಕಾರ ನೀಡಲಾಗಿದೆ.
ಕೆರಿಬಿಯನ್ ದ್ವೀಪ ರಾಷ್ಟ್ರವಾಗಿರುವ ಕಾಮನ್ವೆಲ್ತ್ ಆಫ್ ಡೊಮಿನಿಕಾ ದೇಶವು ಅತ್ಯುನ್ನತ ರಾಷ್ಟ್ರೀಯ ಪುರಸ್ಕಾರ ʼಡೊಮಿನಿಕಾ ಅವಾರ್ಡ್ ಆಫ್ ಹಾನರ್ʼ ಅನ್ನು ಈ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನ ಮಾಡಲಿದೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಡೊಮಿನಿಕಾ ದೇಶಕ್ಕೆ ಪ್ರಧಾನಿ ಮೋದಿ ಅವರು ನೀಡಿರುವ ನೆರವು ಮತ್ತು ಉಭಯ ದೇಶಗಳ ನಡುವಿನ ಸಹಭಾಗಿತ್ವ ಬಲಪಡಿಸುವಲ್ಲಿ ಮಾಡಿದ ಕೆಲಸಗಳನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ.
ನವೆಂಬರ್ 19 ರಿಂದ 21 ರವರೆಗೆ ಗಯಾನಾದ ಜಾರ್ಜ್‌ಟೌನ್‌ನಲ್ಲಿ ನಡೆಯಲಿರುವ ಮುಂಬರುವ ಭಾರತ-ಕ್ಯಾರಿಕಾಮ್ ಶೃಂಗಸಭೆಯಲ್ಲಿ ಆ ರಾಷ್ಟ್ರದ ಅಧ್ಯಕ್ಷ ಅಧ್ಯಕ್ಷ ಸಿಲ್ವಾನಿ ಬರ್ಟನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಡೊಮಿನಿಕನ್ ಪ್ರಧಾನಿ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕೃತಜ್ಞತೆ ಸಲ್ಲಿಕೆ
"ಫೆಬ್ರವರಿ 2021ರಲ್ಲಿ, ಪ್ರಧಾನಿ ಮೋದಿ ಡೊಮಿನಿಕಾಗೆ 70,000 ಡೋಸ್ ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆ ಪೂರೈಸಿದ್ದರು. ಇದು ಉದಾರ ಉಡುಗೊರೆಯಾಗಿದೆ. ಇದು ಡೊಮಿನಿಕಾಗೆ ತನ್ನ ಕೆರಿಬಿಯನ್ ನೆರೆಯ ದೇಶಗಳಿಗೆ ಬೆಂಬಲ ನೀಡಲು ನೆರವಾಗಿತ್ತು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಡೊಮಿನಿಕಾಗೆ ಭಾರತದ ಬೆಂಬಲ ದೊರಕಿದೆ. ಹವಾಮಾನ ಉತ್ತೇಜನ ಉಪಕ್ರಮಗಳು ಮತ್ತು ಜಾಗತಿಕ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಅವರ ಪಾತ್ರ ಮಹತ್ವದ್ದು ಎಂಬುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡೊಮಿನಿಕಾ ಮತ್ತು ಸುತ್ತಲಿನ ಪ್ರದೇಶದೊಂದಿಗಿನ ಪ್ರಧಾನಿ ಮೋದಿಯವರ ಒಗ್ಗಟ್ಟಿನ ಮಂತ್ರಕ್ಕೆ ಕೃತಜ್ಞತೆಯ ರೂದಲ್ಲಿ ಈ ಪುರಸ್ಕಾರ ನೀಡಲಾಗಿದೆ ಎಂದು ಪ್ರಧಾನಿ ರೂಸ್ವೆಲ್ಟ್ ಸ್ಕೆರಿಟ್ ಹೇಳಿದ್ದಾರೆ.
ಪಾಲುದಾರಿಕೆಯಲ್ಲಿ ಉತ್ತೇಜನ '
"ಪ್ರಧಾನಿ ಮೋದಿ ಡೊಮಿನಿಕಾ ದೇಶಕ್ಕೆ ನೈಜ ಪಾಲುದಾರರಾಗಿದ್ದಾರೆ, ವಿಶೇಷವಾಗಿ ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಮಧ್ಯೆ ಅವರು ಕೊಟ್ಟ ಬೆಂಬಲಕ್ಕಾಗಿ ನಮ್ಮ ಕೃತಜ್ಞತೆಗಳು. ನಮ್ಮೆರಡು ದೇಶಗಳ ಬಲವಾದ ಸಂಬಂಧಗಳ ಪ್ರತಿಬಿಂಬವಾಗಿ ಅವರಿಗೆ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು. ಈ ಸಹಭಾಗಿತ್ವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಮತ್ತು ನಮ್ಮ ನಡುವಿನ ಹಂಚಿಕೆಯ ದೃಷ್ಟಿಕೋನವನ್ನು ಮುನ್ನಡೆಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷ ಬರ್ಟನ್ ಮತ್ತು ಪ್ರಧಾನಿ ಸ್ಕೆರಿಟ್ ಅವರು ಭಾರತ ಮತ್ತು ಕ್ಯಾರಿಕಾಮ್ (ಕೆರಿಬಿಯನ್ ಸಮುದಾಯ ಮತ್ತು ಸಾಮಾನ್ಯ ಮಾರುಕಟ್ಟೆ) ಸದಸ್ಯ ರಾಷ್ಟ್ರಗಳ ನಡುವಿನ ಸಹಕಾರದ ಹೊಸ ಮಾರ್ಗಗಳ ಬಗ್ಗೆ ಚರ್ಚಿಸುವ ವೇದಿಕೆಯಾದ ಭಾರತ-ಕ್ಯಾರಿಕಾಮ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.